
ಬೆಂಗಳೂರು: 'ರನ್ ಆಂಟನಿ' ಮೂಲಕ ನಿರ್ದೇಶನಕ್ಕೆ ಇಳಿದಿರುವ ರಘು ಶಾಸ್ತ್ರಿ ನಿಗದಿತ ಸಮಯಕ್ಕೆ ವಿನಯ್ ರಾಜಕುಮಾರ್ ನಟಿಸಿರುವ ಈ ಚಿತ್ರದ ಚಿತ್ರೀಕರಣ ಮುಗಿಸಿ ಸಂತಸದ ನಿಟ್ಟುಸಿರು ಬಿಟ್ಟಿದ್ದಾರೆ. ಕೆಲವು ಭಾಗಗಳ ಚಿತ್ರೀಕರಣವನ್ನು ಮತ್ತೆ ಚಿತ್ರಿಸಲು ಅವರು ತೆಗೆದುಕೊಂಡಿದ್ದು ಕೇವಲ ಮೂರು ಹೆಚ್ಚುವರಿ ದಿನಗಳು. ಈಗ ಡಬ್ಬಿಂಗ್ ಮತ್ತು ಸಂಕಲನ ಕಾರ್ಯ ಪ್ರಗತಿಯಲ್ಲಿದೆ.
ಡಿಸೆಂಬರ್ ೧೪ ರಂದು ಸೆಟ್ಟೇರಿದ ಈ ಸಿನೆಮಾಗೆ ಡಿಸೆಂಬರ್ ೨೯ ರಿಂದ ಚಿತ್ರೀಕರಣ ಪ್ರಾರಂಭವಾಗಿತ್ತು. ಮೇ ಅಂತ್ಯಕ್ಕೆ ಬಿಡುಗಡೆ ಮಾಡುವ ಯೋಜನೆ ಹಾಕಿಕೊಂಡಿತ್ತು. "ನಾನು ಮುಂದೆ ೧೦೦ ಸಿನೆಮಾ ಮಾಡಿದರೂ ಮೊದಲನೆಯ ಸಿನೆಮಾ ನೆನಪಿನಲ್ಲಿ ಉಳಿಯುವಂತದ್ದು. ಚಿತ್ರೀಕರಣ ಪೂರ್ಣಗೊಂದಿದ್ದರೂ ಭಾವನಾತ್ಮಕವಾಗಿ ಚಿತ್ರತಂಡ ಒಟ್ಟಿಗೇ ಇದೆ. ೫೫ ದಿನಗಳಲ್ಲಿ ಮುಗಿಸುವ ಯೋಜನೆ ಹಾಕಿಕೊಂಡಿದ್ದೆವು, ಸ್ವಲ್ಪ ಕಾಲ ಮುಂದುವರೆಯಿತು. ಕೊನೆಯ ದಿನ ಎಲ್ಲರೂ ಎಮೋಷನಲ್ ಆಗಿದ್ದೆವು" ಎಂದು ನೆನಪಿಸಿಕೊಳ್ಳುತ್ತಾರೆ ರಘು.
ಸಿನೆಮಾ ಚಿತ್ರೀಕರಣ ಸಂಪೂರ್ಣಗೊಳ್ಳುವುದಕ್ಕೆ ಪೂರ್ಣ ಸಹಕಾರ ನೀಡಿದ ನಿರ್ಮಾಣ ಸಂಸ್ಥೆ ವಜ್ರೇಶ್ವರಿ ಕಂಬೈನ್ಸ್ ನೆನಪಿಸಿಕೊಳ್ಳುವ ನಿರ್ದೇಶಕ "ಸಿನೆಮಾ ನಿರ್ದೇಶಿಸುವುದಕ್ಕಿಂತಲೂ, ಈ ನಿರ್ಮಾಣ ಸಂಸ್ಥೆ ನನಗೆ ನೀಡಿದ ಗೌರವ ನನಗೆ ಹೆಚ್ಚು ಸಂತಸ ತಂದಿತು. ಇದು ನನ್ನ ಮೊದಲನೆಯ ಚಿತ್ರ ಎಂಬಂತೆ ಕಾಣಲೇ ಇಲ್ಲ ನನ್ನನ್ನು. ಈ ಬ್ಯಾನರ್ ಅಡಿ ಕೆಲಸ ಮಾಡಿದ್ದಕ್ಕೆ ನಾನು ಅವರಿಗೆ ಆಭಾರಿ" ಎನ್ನುತ್ತಾರೆ ರಘು.
ರಘು ಅವರೇ ಕಥೆ ರಚಿಸಿರುವ 'ರನ್ ಆಂಟನಿ' ಆಕ್ಷನ್-ಥ್ರಿಲ್ಲರ್ ಚಿತ್ರ. ನಾಯಕ ನಟಿಯರಾಗಿ ರುಕ್ಷಾರ್ ಮೀರ್ ನಟಿಸಿದ್ದಾರೆ. ಸುಶ್ಮಿತಾ ಜೋಶಿ, ದೇವರಾಜ್, ಬುಲೆಟ್ ಪ್ರಕಾಶ್ ಕೂಡ ತಾರಾಗಣದಲ್ಲಿದ್ದಾರೆ.
Advertisement