ಕುದುರೆ ಸವಾರಿ ಮರು ತರಬೇತಿ ಪಡೆದ ಮನೋರಂಜನ್
ಬೆಂಗಳೂರು: ಭರತ್ ನಿರ್ದೇಶನದ, ಮನೋರಂಜನ್ ನಟಿಸುತ್ತಿರುವ 'ಸಾಹೇಬ' ಎರಡನೆ ಹಂತದ ಚಿತ್ರೀಕರಣ ಪ್ರಾರಂಭಿಸಿದೆ. "೨೦-೨೫ ದಿನಗಳ ವಿರಾಮದ ನಂತರ ಮತ್ತೆ ಹಿಂದಿರುಗಿದ್ದೇನೆ. ಇನ್ನೂ ಬಹಳಷ್ಟು ಪಯಣ ಬಾಕಿಯಿದೆ" ಎನ್ನುತ್ತಾರೆ ನಟ ಮನೋರಂಜನ್.
ಈ ವಿರಾಮದ ಸಮಯದಲ್ಲಿ ತಾವು ಹಿಂದೆ ಕಲಿತಿದ್ದ ಕುದುರೆ ಸವಾರಿ ಕೌಶಲ್ಯವನ್ನು ಮತ್ತೆ ಬ್ರಶ್-ಅಪ್ ಮಾಡಿಕೊಂಡರಂತೆ. "ಈ ವಾರಾಂತ್ಯ ಎರಡನೆ ಹಂತದ ಚಿತ್ರೀಕರಣದಲ್ಲಿ ಫೈಟ್ ಒಂದಿದೆ. ಅದಕ್ಕಾಗಿ ಕುದುರೆ ಸವಾರಿ ಮಾಡಬೇಕಿದೆ. ಐದು ವರ್ಷದ ಹಿಂದೆಯೇ ಕುದುರೆ ಸವಾರಿ ಕಲಿತಿದ್ದೆ, ಆದರೆ ಈಗ ಅಭ್ಯಾಸ ತಪ್ಪಿತ್ತು. ಅದಕ್ಕೆ ಮತ್ತೆ ಆತ್ಮವಿಶ್ವಾಸ ಗಳಿಸಲು ಮರು ತರಬೇತಿ ಪಡೆದೆ" ಎಂದು ವಿವರಿಸುತ್ತಾರೆ.
ಈ ಮಧ್ಯೆ 'ಸಾಹೇಬ' ಚಿತ್ರತಂಡ ಕನ್ನಡತಿ 'ಸಾನಿಕಾ' ಅವರನ್ನು ಪ್ರಮುಖ ಪಾತ್ರವೊಂದಕ್ಕೆ ಆಯ್ಕೆ ಮಾಡಿದ್ದಾರಂತೆ. ಮೂರು ಸಿನೆಮಾಗಳಲ್ಲಿ ಈಗಾಗಲೇ ನಟಿಸಿರುವ ನಟಿ ಸದ್ಯಕ್ಕೆ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ. "ನನಗೆ ಈ ಸಿನೆಮಾ ಅಚ್ಚರಿಯಾಗಿ ಬಂತು. ಜಯಣ್ಣ ಬ್ಯಾನರ್ ಅಡಿ, ಮನೋರಂಜನ್ ಜೊತೆಗೆ ಹಾಗೂ ಭರತ್ ನಿರ್ದೇಶನದಲ್ಲಿ ಕೆಲಸ ಮಾಡುತ್ತಿರುವುದಕ್ಕೆ ನಾನು ಅದೃಷ್ಟವಂತೆ" ಎನ್ನುತ್ತಾರೆ ಸಾನಿಕಾ.
ಸಾನಿಕಾ 'ಒಂದು ರೋಮ್ಯಾಂಟಿಕ್ ಕಥೆ' ಮೂಲಕ ಸಿನೆಮಾ ರಂಗಕ್ಕೆ ಪಾದಾರ್ಪಣೆ ಮಾಡಿ, ನಂತರ 'ಪೈಪೋಟಿ' ಮತ್ತು 'ಮಹಾಕಾಳಿ' ಸಿನೆಮಾಗಳಲ್ಲಿ ನಟಿಸಿದ್ದರು. "ಟಾಲಿವುಡ್ ನಲ್ಲಿ ಕೂಡ ನಟಿಸಲಿದ್ದೇನೆ. ಶೀಘ್ರದಲ್ಲೇ ಚಿತ್ರೀಕರಣವೂ ಪ್ರಾರಂಭವಾಗಲಿದೆ. ಈ ಸಿನೆಮಾ ಉದಯ್ ಭಾಸ್ಕರ್ ನಿರ್ದೇಶಿಸುತ್ತಿದ್ದು, ಹೊಸ ಪರಿಚಯದ ಒಬ್ಬರು ನನ್ನೆದುರು ನಟಿಸಲಿದ್ದಾರೆ" ಎನ್ನುತ್ತಾರೆ ನಟಿ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ