
ನವದೆಹಲಿ: ತಮ್ಮ ಸಿನೆಮಾ 'ರಾಮನ್ ರಾಘವ್ ೨.೦' ೬೯ನೆ ಕಾನ್ ಸಿನೆಮೋತ್ಸವದಲ್ಲಿ ಪ್ರದರ್ಶನಗೊಳ್ಳುತ್ತಿರುವುದಕ್ಕೆ ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ಹರ್ಷ ವ್ಯಕ್ತಪಡಿಸಿದ್ದಾರೆ. ನಾನು ನನ್ನ ವೃತ್ತಿಜೀವನದಲ್ಲಿ ಸರಿಯಾದ ಮಾರ್ಗಲ್ಲಿದ್ದೀನಿ ಎಂಬುವುದಕ್ಕೆ ಇದು ಸಂಕೇತ ಎಂದಿದ್ದಾರೆ.
ಅನುರಾಗ್ ಕಶ್ಯಪ್ ನಿರ್ದೇಶನದ 'ರಾಮನ್ ರಾಘವ್ ೨.೦', ೧೯೬೦ರಲ್ಲಿ ಮುಂಬೈನಲ್ಲಿ ಸರಣಿ ಕೊಲೆಗಳನ್ನು ಮಾಡಿದ್ದ ಕುಖ್ಯಾತ ಕೊಲೆಗಾರ ರಾಮನ್ ರಾಘವ ಕುರಿತ ಕಥೆಯಾಗಿದೆ. ಕುಖ್ಯಾತ ಕೊಲೆಗಾರನ ಪಾತ್ರದಲ್ಲಿ ನವಾಜುದ್ದೀನ್ ಕಾಣಿಸಿಕೊಂಡಿದ್ದು, ವಿಕ್ಕಿ ಕೌಶಲ್ ಪೊಲೀಸ್ ಅಧಿಕಾರಿಯ ಪಾತ್ರ ಮಾಡಿದ್ದಾರೆ.
"ನನ್ನ ಮತ್ತೊಂದು ಸಿನೆಮಾ 'ರಾಮನ್ ರಾಘವ್ ೨.೦' ಕಾನ್ ನಲ್ಲಿ ಪ್ರದರ್ಶನ ಕಾಣುತ್ತಿರುವುದಕ್ಕೆ ಬಹಳ ಸಂತಸವಾಗಿದೆ. ನಾನು ಸರಿಯಾದ ಆಯ್ಕೆಗಳನ್ನು ಮಾಡುತ್ತಿದ್ದೇನೆ ಮತ್ತು ಸರಿಯಾದ ಮಾರ್ಗದಲ್ಲಿದ್ದೇನೆ ಎಂದು ಇದು ತೋರಿಸುತ್ತದೆ" ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನವಾಜ್ ಅವರ ಹಿಂದಿನ ಚಿತ್ರಗಳಾದ 'ದ ಲಂಚ್ ಬಾಕ್ಸ್', 'ಗ್ಯಾಂಗ್ಸ್ ಆಫ್ ವಸೀಪುರ್', 'ಮಿಸ್ ಲವ್ಲಿ', 'ಲೈಯರ್ಸ್ ಡೈಸ್' ಚಿತ್ರಗಳು ಕೂಡ ಕಾನ್ ನಲ್ಲಿ ಪ್ರದರ್ಶನ ಕಂಡಿದ್ದವು. ನಟರಾಗಿ ಅವರ ಏಳು ಸಿನೆಮಾಗಳು ಹಾಗೂ ನಿರ್ಮಾಪಕನಾಗಿ ಒಂದು ಸಣ್ಣ ಸಿನೆಮಾ ಸಿನೆಮೋತ್ಸವಗಳಲ್ಲಿ ಪ್ರದರ್ಶನಗೊಂಡಿವೆ.
ನವಾಜ್ ಅವರ ಚೊಚ್ಚಲ ನಿರ್ಮಾಣದ 'ಮಿಯಾನ್ ಕಾಲ್ ಆನ' ಕೂಡ ಸಿನೆಮೋತ್ಸವದಲ್ಲಿ ಪ್ರದರ್ಶನಗೊಂಡಿತ್ತು. ಇದನ್ನು ಇವರ ಸಹೋದರ ಶಮಸ್ ಸಿದ್ದಿಕಿ ನಿರ್ದೇಶಿಸಿದ್ದರು.
"ಇದು ನನ್ನ ತಂಡಕ್ಕೆ ಹೆಮ್ಮೆಯ ಕ್ಷಣ" ಎಂದು ಅನುರಾಗ್ ಕಶ್ಯಪ್ ಹೇಳಿದ್ದಾರೆ.
Advertisement