'ಮುಂಗಾರು ಮಳೆ'ಗಳ ನಡುವೆ ಜಯಂತ ಕಾಯ್ಕಿಣಿಯವರ 10 ಸುಶ್ರಾವ್ಯ ವರ್ಷಗಳು

ಕನ್ನಡದ ಸಣ್ಣ ಕತೆಗಾರ ಮತ್ತು ಕವಿಯಾಗಿ ಜನಪ್ರಿಯವಾಗಿದ್ದ ಜಯಂತ ಕಾಯ್ಕಿಣಿ, ತಮ್ಮ ಕವಿತ್ವವನ್ನು ಕನ್ನಡ ಚಿತ್ರರಂಗಕ್ಕೂ ಧಾರೆಯೆರೆಯಲು ಬಂದದ್ದು ಸ್ಯಾಂಡಲ್ವುಡ್ ನ ಪ್ರಮುಖ ಘಟ್ಟ
ಜಯಂತ ಕಾಯ್ಕಿಣಿ
ಜಯಂತ ಕಾಯ್ಕಿಣಿ

ಬೆಂಗಳೂರು: ಕನ್ನಡದ ಸಣ್ಣ ಕತೆಗಾರ ಮತ್ತು ಕವಿಯಾಗಿ ಜನಪ್ರಿಯವಾಗಿದ್ದ ಜಯಂತ ಕಾಯ್ಕಿಣಿ, ತಮ್ಮ ಕವಿತ್ವವನ್ನು ಕನ್ನಡ ಚಿತ್ರರಂಗಕ್ಕೂ ಧಾರೆಯೆರೆಯಲು ಬಂದದ್ದು ಸ್ಯಾಂಡಲ್ವುಡ್ ನ ಪ್ರಮುಖ ಘಟ್ಟ ಎನ್ನಬಹುದು! 'ಮುಂಗಾರುಮಳೆ' ಸಿನೆಮಾದ 'ಅನಿಸುತಿದೆ ಯಾಕೋ ಇಂದು' ಹಾಡಿನ ಗೀತರಚನೆಯ ಮೂಲಕ ಜನಪ್ರಿಯತೆಯ ಉತ್ತುಂಗಕ್ಕೆ ಏರಿದ ಕಾಯ್ಕಿಣಿ ಹಿಂದಿರುಗಿ ನೋಡಿದ್ದೇ ಇಲ್ಲ. ಈಗ 'ಮುಂಗಾರು ಮಳೆ 2'ರ ಮೂಲಕ ಮತ್ತದೇ ಮೋಡಿ ಮಾಡಿದ್ದಾರೆ.

ಸಿನೆಮಾ ಗೀತರಚನಕಾರರಾಗಿ 'ಚಿಗುರಿದ ಕನಸು' ಸಿನೆಮಾದ ಮೂಲಕ ತಮ್ಮ ವೃತ್ತಿಜೀವನ ಪ್ರಾರಂಭಿಸಿದರೂ, ಅವರಿಗೆ ಈ ರಂಗದಲ್ಲಿ ತಕ್ಷಣದ ಯಶಸ್ಸು ತಂದುಕೊಟ್ಟಿದ್ದು 2006 ರಲ್ಲಿ ಬಿಡುಗಡೆಯಾದ 'ಮುಂಗಾರು ಮಳೆ'ಯ ಹಾಡುಗಳೇ! ಈಗ 'ಮುಂಗಾರು ಮಳೆ 2' ಕ್ಕೂ ಗೀತರಚನೆ ಮಾಡುವೆ ಮೂಲಕ 10 ಸುಶ್ರಾವ್ಯ ವರ್ಷಗಳನ್ನು ಚಿತ್ರರಂಗದಲ್ಲಿ ಪೂರೈಸಿದ್ದಾರೆ. 'ಸರಿಯಾಗಿ ನೆನಪಿದೆ ನನಗೆ' ಹಾಡು ಈಗಾಗಲೇ ಜನಪ್ರಿಯವಾಗುವತ್ತ ಮುನ್ನುಗ್ಗಿದೆ.

"'ಮುಂಗಾರು ಮಳೆ' ಹಾಡಿನ ಮೂಲಕ ಜನ ನನ್ನನ್ನು ತುಂಬು ಹೃದಯದಿಂದ ಸ್ವಾಗತಿಸಿದರು. ಈಗ 'ಮುಂಗಾರು ಮಳೆ 2'ರ ಹಾಡುಗಳಿಗೂ ಅದೇ ಪ್ರೀತಿಯನ್ನು ತೋರಿಸುತ್ತಿದ್ದಾರೆ. ಇದೊಂದು ರೀತಿಯ ಸವಾಲಾಗಿತ್ತು. ಏಕೆಂದರೆ 'ಮುಂಗಾರು ಮಳೆ 2' ಸಿನೆಮಾಗೆ ಬರೆಯುವಾಗ 'ಅನಿಸುತಿದೆ' ಹಾಡು ನನ್ನನ್ನು ಕಾಡುತ್ತಿತ್ತು. 'ಮುಂಗಾರು ಮಳೆ'ಯ ನಂತರ ಇನ್ನು ಹಲವು ಉತ್ತಮ ಹಾಡುಗಳನ್ನು ಬರೆದಿದ್ದೇನೆ ಆದರೆ ಜನ ಅದೇ ಹಾಡಿಗೆ ಹಿಂದಿರುಗುತ್ತಾರೆ. ಈಗ 'ಮುಂಗಾರು ಮಳೆ 2' ಹಾಡಿನ ಯಶಸ್ಸು ನನಗೆ ನಿಟ್ಟುಸಿರು ಬಿಡುವಂತೆ ಮಾಡಿದೆ ಮತ್ತು ಇದು ನನಗೆ ಖಾಸಗಿ ಸಂಭ್ರಮ" ಎನ್ನುತ್ತಾರೆ ಕವಿ ಜಯಂತ ಕಾಯ್ಕಿಣಿ.

ಟಿ ಎಸ್ ನಾಗಾಭರಣ ನಿರ್ದೇಶನ 'ಚಿಗುರಿದ ಕನಸು' ಸಿನೆಮಾಗೆ ಗೀತರಚನೆ ಮಾಡಲು ತಮಗೆ ಉತ್ತೇಜನ ನೀಡಿದವರು ಡಾ. ರಾಜಕುಮಾರ್ ಮತ್ತು ವರದಪ್ಪ ಎಂದು ನೆನಪಿಸಿಕೊಳ್ಳುವ ಜಯಂತ್ "'ಮುಂಗಾರು ಮಳೆ' 1 ಮತ್ತು 2, 300 ಹಾಡುಗಳ ನಡುವಿನ ಸೇತುವೆಯಿದ್ದಂತೆ. ಆಗಲೇ ಮೂಡಿರುವ ಟ್ಯೂನಗಳಿಗೆ ನಾವು ಗೀತ ರಚನೆ ಮಾಡಬೇಕಿರುತ್ತದೆ. ನಮಗೆ ಸಿನೆಮಾದ ಆ ಸಂದರ್ಭ ಮತ್ತು ಪರಿಸ್ಥಿತಿಯ ಬಗ್ಗೆ ಸ್ವಲ್ಪವೇ ಹೇಳಿರುತ್ತಾರೆ. ನಾವು ಅದಕ್ಕೆ ತಕ್ಕಂತೆ ಹಾಡು ರಚನೆ ಮಾಡಬೇಕಿರುತ್ತದೆ. ಇದು ಯಾವುದೇ ಬರಹಗಾರನಿಗೆ ಸವಾಲು" ಎನ್ನುತ್ತಾರೆ.

ಸಾಹಿತ್ಯ ತಮ್ಮ ಮೇಲೆ ಗಾಢ ಪರಿಣಾಮ ಬೀರಿರುವುದಾಗಿ ಹೇಳಿಕೊಳ್ಳುವ ಜಯಂತ್ ನೂರಾರು ಹಿರಿಯ ಸಾಹಿತಿಗಳ ಸಾಹಿತ್ಯ ಓದಿಕೊಂಡು ಬೆಳೆದವನು ನಾನು ಎನ್ನುತ್ತಾರೆ. "ಸಾಹಿತ್ಯ ನಮ್ಮ ಸಂವೇದನೆಯ ಭಾಗ. ಹಾಡು ಬರೆಯಲು ನೀವು ಶಬ್ದವನ್ನು ಹುಡುಕಿ ಹೊರಡಬೇಕಿಲ್ಲ. ಅದು ಒಳಗಿನಿಂದಲೇ ಹುಟ್ಟುತ್ತದೆ. ಸಿನೆಮಾಗಳು ಬರುತ್ತವೆ ಹೋಗುತ್ತವೆ ಆದರೆ ಹಾಡುಗಳು ಉಳಿಯುತ್ತವೆ. ಈ ಸಂಸ್ಕೃತಿ ಉಳಿಯಲು ನನ್ನ ಕೈಲಾದ ಕೊಡುಗೆ ನೀಡಿರುವುದಕ್ಕೆ ನನಗೆ ಸಂತಸವಿದೆ" ಎನ್ನುತ್ತಾರೆ ಕಾಯ್ಕಿಣಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com