ರಾಮಾ ರಾಮಾ ರೇ... ಬರ್ತಾ ಇದಾರೆ...

ರಾಮಾ ರಾಮ ರೇ ಚಿತ್ರದ ಕಥೆ ಶೇ.80 ರಷ್ಟು ರಸ್ತೆಯಮೇಲೆ ಸಾಗುವುದು ಚಿತ್ರದ ವೈಶಿಷ್ಟ್ಯವಾಗಿದ್ದು ಚಿತ್ರೀಕರಣದಲ್ಲಿಯೂ ಎಂದಿನ ಕನ್ನಡ ಚಿತ್ರಗಳಿಗಿಂತ ಭಿನ್ನ ಎನಿಸಿಕೊಂಡಿದೆ.
ರಾಮಾ ರಾಮಾ ರೇ...ಚಿತ್ರದ ನಿರ್ದೇಶಕ ಸತ್ಯಪ್ರಕಾಶ್
ರಾಮಾ ರಾಮಾ ರೇ...ಚಿತ್ರದ ನಿರ್ದೇಶಕ ಸತ್ಯಪ್ರಕಾಶ್
ಸ್ಯಾಂಡಲ್ ವುಡ್ ನಲ್ಲಿ ಹೊಸ ಮಾದರಿಯ ಚಿತ್ರಗಳು ಸಿದ್ಧ ಮಾದರಿಯ ಚಿತ್ರಗಳಿಗಿಂತ ಯಶಸ್ವಿಯಾಗುತ್ತಿದ್ದು, ಹೊಸ ತಂಡದ ಪ್ರಯತ್ನವಾಗಿರುವ ರಾಮಾ ರಾಮಾ ರೇ... ಚಿತ್ರಗಳ ಈ ಸಾಲಿಗೆ ಸೇರಿದೆ.  ರಾಮಾ ರಾಮ ರೇ ಚಿತ್ರದ ಕಥೆ ಶೇ.80 ರಷ್ಟು ರಸ್ತೆಯಮೇಲೆ ಸಾಗುವುದು ಚಿತ್ರದ ವೈಶಿಷ್ಟ್ಯವಾಗಿದ್ದು ಚಿತ್ರೀಕರಣದಲ್ಲಿಯೂ ಎಂದಿನ ಕನ್ನಡ ಚಿತ್ರಗಳಿಗಿಂತ ಭಿನ್ನ ಎನಿಸಿಕೊಂಡಿದೆ.
ರಾಮಾ ರಾಮಾ ರೇ... ಚಿತ್ರರಂಗಲ್ಲಿ ಹತ್ತಾರು ವರ್ಷಗಳಿಂದ ಅನೇಕ ವಿಭಾಗಗಳಲ್ಲಿ ಕೆಲಸ ಮಾಡಿರುವ ಅನುಭವಿ ಸಿನಿಮಾ ಪ್ರೇಮಿಗಳು ಜೊತೆಯಲ್ಲಿ ಸೇರಿಕೊಂಡು ಮಾಡಿರುವ ಚಿತ್ರ.ಮೂರು ವರ್ಷಗಳ ಹಿಂದೆ ಯೂಟ್ಯೂಬ್ ನಲ್ಲಿ ಸದ್ದು ಮಾಡಿದ ಕನ್ನಡದ ಕಿರುಚಿತ್ರ ಜಯನಗರ ಫೋರ್ತ್ ಬ್ಲಾಕ್ ಅನ್ನು ನಿರ್ದೇಶಿಸಿದ್ದ ಡಿ. ಸತ್ಯಪ್ರಕಾಶ್ ನಿರ್ದೇಶಿಸುತ್ತಿರುವ ಪ್ರಥಮ ಪೂರ್ಣ ಪ್ರಮಾಣದ ಚಿತ್ರ ರಾಮಾ ರಾಮಾ ರೇ...  ಚಿತ್ರತಂಡ ಬಿಡುಗಡೆಗೆ ಬೇಕಾದ ಕೆಲಸಗಳನ್ನುಮುಗಿಸುವುದರಲ್ಲಿಮಗ್ನವಾಗಿದೆ. 
ಚಿತ್ರದ 80 %ಭಾಗ ರಸ್ತೆಯಮೇಲೆ ಸಾಗುವುದರಿಂದ ಇದನ್ನು ರೋಡ್ ಸಿನಿಮಾ ಎಂದು ಕರೆಯಬಹುದು.  ಚಿತ್ರದಲ್ಲಿ ನಡೆಯುವ ಎಲ್ಲಾ ಘಟನೆಗಳಿಗೂ ಚಿತ್ರದಲ್ಲಿರುವ ಜೀಪು ಸಾಕ್ಷಿ ಪ್ರಜ್ಞೆಯಾಗಿರುತ್ತದೆ. ಜೀವನದಲ್ಲಿ ಸರಿ ತಪ್ಪು, ಒಳ್ಳೆಯದು, ಕೆಟ್ಟದ್ದು ಎನ್ನುವುದು ಆ ಸಂದರ್ಭಕ್ಕೆ ಅನುಗುಣವಾಗಿ ಪರಿಗಣಿತವಾಗುತ್ತದೆ. ಕೆಲವು ಕಡೆ ಸರಿ ಎನಿಸಿದ ಕೆಲಸವೂ ಕೆಲವು ಕಡೆ ತಪ್ಪಾಗಬಹುದು. ಈ ವಿಷಯ ಹಿನ್ನಲೆಯಲ್ಲಿ ಚಿತ್ರಕಥೆ ಸಾಗುತ್ತದೆ. ಹುಟ್ಟು-ಸಾವಿನ ನಡುವೆ ನಡೆಯುವ ಅನೇಕ ಸೂಕ್ಷ್ಮ ವಿಷಯಗಳೇ ರಾಮಾ ರಾಮಾ ರೇ... ಚಿತ್ರ.
ಚಿತ್ರಕಥೆಗಾಗಿ 2 ವರ್ಷ ವ್ಯಯಿಸಿದರೆ ಕಥೆಗೆ ಬೇಕಾದಂತಹ ಲೊಕೇಶನ್ (ಸ್ಥಳ) ಹುಡುಕಾಟಕ್ಕೆ ಚಿತ್ರತಂಡ ಕರ್ನಾಟಕದ ಸುತ್ತ 8000 ಕಿ.ಮೀ ನಷ್ಟು ಪ್ರಯಾಣ ಮಾಡಿದ್ದಾರೆ. ಬಿಜಾಪುರದ ಹೊರ ಪ್ರದೇಶವನ್ನು ಕಡೆಯದಾಗಿ ಆರಿಸಿಕೊಂಡ ಚಿತ್ರ ತಂಡ 40 ದಿನಗಳ ಕಾಲ ಚಿತ್ರೀಕರಣವನ್ನು ನಡೆಸಿದ್ದಾರೆ. ಚಿತ್ರದಲ್ಲಿ ಬರುವ ಮೊದಲ ಹಾಡಿನಲ್ಲಿ ಬೆಟ್ಟ, ಗುಡ್ಡ, ಬಯಲು, ಜಲಪಾತ, ಕೋಟೆ, ಸಮುದ್ರ ಹೀಗೆ ಅನೇಕ ಲೊಕೇಶನ್ಗಳು ಬೇಕಿದ್ದರಿಂದ ಆ ಹಾಡಿಗಾಗಿ ಪುನ: ಚಿತ್ರದಂಡ ಕರ್ನಾಟಕದ ಅತ್ಯಂತ ಉತ್ತಮ ಲೊಕೇಶನ್ಗಳನ್ನು ಹುಡುಗಿ ಚಿತ್ರೀಕರಿಸಿದ್ದಾರೆ. ಅದಕ್ಕಾಗಿ ಇವರು 20 ದಿನಗಳ ಕಾಲ 25,00 ಕಿ.ಮಿ ನಷ್ಟು ಪ್ರಯಾಣಿಸಿದ್ದಾರೆ.
ಜೀಪು ಒಂದು ಮುಖ್ಯ ಪಾತ್ರವಾದ್ದರಿಂದ ಒಂದು ಹಳೆಯ ಜೀಪನ್ನು ಕೊಂಡು ಕೊಂಡ ಚಿತ್ರತಂಡ ಅದನ್ನು ತಮಗೆ ಬೇಕಾದಂತೆ ಮಾರ್ಪಡಿಸಿಕೊಂಡು ಬೆಂಗಳೂರಿನಿಂದ ಬಿಜಾಪುರಕ್ಕೆ ಪ್ರಯಾಣ ಬೆಳೆಸಿತು. ಆದರೆ ಗ್ರಹಚಾರ ಚಿತ್ರದುರ್ಗದ ಬಳಿ ಜೀಪು ಇಂಜಿನ್ ಸೀಜ಼್ ಆಗಿ ನಿಂತುಹೋಯಿತು. ಇನ್ನೆರೆಡು ದಿನಕ್ಕೆ ಶೂಟಿಂಗ್. ಕಲಾವಿದರು, ಕೆಲಸಗಾರರೆಲ್ಲಾ ಆಗಲೇ ಬಿಜಾಪುರದ ಹಾದಿ ಹಿಡಿದಿದ್ದಾರೆ. ನಿರ್ದೇಶಕ ಮತ್ತು ನಿರ್ಮಾಪಕ ಸ್ನೇಹಿತ ಭಾಸ್ಕರ್ ಚಿತ್ರದುರ್ಗದಲ್ಲಿ ಜೀಪನ್ನು ರಿಪೇರಿಗೆ ಬಿಟ್ಟು ತಕ್ಷಣಕ್ಕೆ ಹೊಸ ಜೀಪನ್ನು ಹುಡುಕುವ ಕೆಲಸದಲ್ಲಿ ನಿರತರಾಗುತ್ತಾರೆ. ಆದರೆ ಹೊಸ ಜೀಪು ಸಿಕ್ಕರೂ ಚಿತ್ರಕ್ಕೆ ಬೇಕಾದಂತೆ ಮಾರ್ಪಡಿಸಲು ಸಮಯವಿರಲಿಲ್ಲ. ಗ್ಯಾರೇಜಿನವನು ಜೀಪು ನಿಮ್ಮ ಸಮಯಕ್ಕೆ ಸರಿಹೋಗುವುದು ಕಷ್ಟವೆಂದೂ ಅಕಸ್ಮಾತ್ ಸರಿಹೋದರು ತುಂಬಾ ದಿನ ಓಡುವುದಿಲ್ಲವೆಂದು ಹೇಳುತ್ತಾನೆ. ಆದದ್ದಾಗಲಿ ನೋಡುವ ಎಂದು ಧೈರ್ಯಮಾಡುವ ಇವರು ಸರಿಹೊತ್ತಿನಲ್ಲಿ ಚಿತ್ರದುರ್ಗದಿಂದ ದಾವಣಗೆರಿಗೆ ಅನೇಕ ಬಾರಿ ಓಡಾಡಿ ಮೆಕ್ಯಾನಿಕ್ ಹೇಳುವ ವಸ್ತುಗಳನ್ನೆಲ್ಲಾ ತಂದು ಕೊಟ್ಟು ನಾಳೆ ಶೂಟಿಂಗ್ ಎಂದರೆ ಇಂದು ರಾತ್ರಿ ಜೀಪಿನ ಇಂಜಿನ್ ಶುರುವಾಗುವ ಶಬ್ಧ ಕೇಳಿಸಿಕೊಳ್ಳುತ್ತಾರೆ. ಅಂತೂ ನಿಧಾನವಾಗಿ ಬಿಜಾಪುರದ ವರೆಗೆ ಬರುವ ಜೀಪನ್ನು ಶೂಟಿಂಗ್ ಸಮಯದಲ್ಲಿ ಆನ್ ಮಾಡಿದರೆ ಇಂಜಿನ್ ಎಲ್ಲಿ ಕೈ ಕೊಡುವುದೋ ಎಂದು ಚಿತ್ರತಂಡ ಜೀಪಿಗೆ ಹಗ್ಗ ಕಟ್ಟಿ ಅದನ್ನು ಎಳೆದುಕೊಂಡು ಓಡುತ್ತಾ ಟ್ರಾವಲಿಂಗ್ ಶಾಟ್ಗಳನ್ನು ತೆಗೆದುಕೊಳ್ಳುತ್ತಾರೆ. ಇದು ಸುಮಾರು ಒಂದೆರೆಡು ದಿನದ ಕಥೆಯಲ್ಲಿ ಬರೋಬ್ಬರಿ 20 ದಿನಗಳ ಕಥೆ. 
ಇದು ಈ ಚಿತ್ರದ ಒಂದು ಚಿಕ್ಕ ಉದಾಹರಣೆ. ಈ ರೀತಿಯ ತಿರುವುಗಳನ್ನು ಚಿತ್ರೀಕರಣದ ಪೂರ ಅನುಭವಿಸಿರುವ ನಿರ್ದೇಶಕ ಸತ್ಯಪ್ರಕಾಶ್ ತಮ್ಮ ಇಡೀ ತಂಡವನ್ನು ಮನಸಾರೆ ಜ್ಞಾಪಿಸಿಕೊಳ್ಳುತ್ತಾರೆ. ತಂಡದಲ್ಲಿ ಒಬ್ಬ ಆಗುವುದಿಲ್ಲ ಎಂದು ಕೂತಿದ್ದರೂ ಸಿನಿಮಾ ಮುಗಿಸಿಕೊಂಡು ಬರುವುದು ಬಹಳ ಕಷ್ಟವಾಗುತ್ತಿತ್ತು. ಪ್ರತಿಯೊಬ್ಬರೂ ಹಟಕ್ಕೆ ಬಿದ್ದಂತೆ ಜೊತೆ ಜೊತೆಗೆ ದುಡಿದು ಚಿತ್ರವನ್ನು  ಪೂರೈಸಿಕೊಟ್ಟಿದ್ದಾರೆ ಎನ್ನುವುದು ಸತ್ಯ ಅವರ ಮನದ ಮಾತು. ಚಿತ್ರದ ಮುಖ್ಯ ಪಾತ್ರಾದಿಗಳಾದ ಕೆ. ಜಯರಾಮ್, ನಟರಾಜ್, ಧರ್ಮಣ್ಣ, ಬಿಂಬಶ್ರೀ ನೀನಾಸಂ, ಎಮ್.ಕೆ ಮಠ, ರಾಧಾ ರಾಮಚಂದ್ರ, ಶ್ರೀಧರ್ ಎಲ್ಲರೂ ನಾಟಕ ರಂಗದ ಹಿನ್ನಲೆ ಉಳ್ಳವರು. ಎಲ್ಲರೂ ತುಂಬಾ ಸಹಜವಾಗಿ ಅಭಿನಯಿಸಿದ್ದಾರೆ. ಚಿತ್ರೀಕರಣ ನಡೆದ ಸ್ಥಳದಲ್ಲಿ ಒಂದೇ ಒಂದು ಮನೆಯಾಗಲಿ, ಜನರಾಗಲಿ ಯಾರೂ ಇರಲಿಲ್ಲ. ಒಂದು ಲೋಟ ನೀರು ಬೇಕೆಂದರು ಸುಮಾರು ಕಿ.ಮೀಗಳಷ್ಟು ದೂರ ಪ್ರಯಾಣಿಸಬೇಕಿತ್ತು. ಆದ್ದರಿಂದ ನೀರಿನಿಂದ ಹಿಡಿದು ಊಟದ ತನಕ ಬಿಜಾಪುರದಿಂದಲೇ ತರಿಸಬೇಕಿತ್ತು. ಅದಕ್ಕಾಗಿ ಒಂದು ಗಾಡಿ ದಿನಕ್ಕೆ ಮೂರು ಬಾರಿ ಬಿಜಾಪುರ ಹಾಗು ಲೊಕೇಶನ್ನಿಗೆ ಓಡಾಡುತ್ತಿತ್ತು.  ಚಿತ್ರದಲ್ಲಿ ಹಿರಿಯ ಮತ್ತು ಕಿರಿಯ ತಂತ್ರಜ್ಞರು ಸೇರಿ ಕೆಲಸ ನಿರ್ವಹಿಸಿದ್ದಾರೆ. ಚಿತ್ರಕಥೆ ಸಹಾಯ ಮತ್ತು ಸಂಭಾಷಣೆಯನ್ನು ಹಿರಿಯ ಸಾಹಿತಿ ಬಿ.ಸಿದ್ದಗಂಗಯ್ಯ ಕಂಬಾಳು (ನಿಸರ್ಗಪ್ರಿಯ), ಸಂಕಲನವನ್ನು ಹಿರಿಯ ಸಂಕಲನಕಾರ ಬಿ.ಎಸ್ ಕೆಂಪರಾಜು, ಕಲೆ-ವರದರಾಜ್ ಕಾಮತ್ ನಿರ್ವಹಿಸಿದರೆ ನವತಂತ್ರಜ್ಞರುಗಳಾದ ಲವಿತ್-ಛಾಯಾಗ್ರಹಣ, ವಾಸುಕಿ ವೈಭವ್-ಸಂಗೀತವನ್ನು ಸಂಯೋಜಿಸಿರುತ್ತಾರೆ. ಚಿತ್ರ ನಮ್ಮದೇ ಚಿತ್ರ ಮತ್ತು ಕನ್ನಡ ಕಲರ‍್ಸ್ ಸಂಸ್ಥೆಯಡಿಯಲ್ಲಿ ತಯಾರಾಗಿರುತ್ತದೆ.  ಚಿತ್ರದಲ್ಲಿ ಮೂರು ಪೂರ್ಣ ಪ್ರಮಾಣದ ಹಾಡುಗಳಿದ್ದು ಎರೆಡು ಚಿಕ್ಕ ಹಾಡುಗಳಿವೆ. 
ಚಿತ್ರದ ಟ್ರೇಲರ್, ಟೀಸರ್ ಈಗಾಗಲೇ ಬಿಡುಗಡೆಯಾಗಿದ್ದು,  ಚಿತ್ರರಂಗದ ಹಲವರು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ಸೆಪ್ಟೆಂಬರ್ 2ರಂದು ಚಿತ್ರದ ಆಡಿಯೋ ಬಿಡುಗಡೆಯಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com