ಬೆಂಗಳೂರು: ಶ್ರೀನಿವಾಸ ರಾಜು ನಿರ್ದೇಶನದ ೨೦೧೨ರ ಬಿಡುಗಡೆ 'ದಂಡುಪಾಳ್ಯ'ದ ಯಶಸ್ಸು, ಸಿನಿರಸಿಕರಿಗೆ 'ದಂಡುಪಾಳ್ಯ ೨' ಸಿನೆಮಾದ ಬಗ್ಗೆಯೂ ಕುತೂಹಲ ಮೂಡುವಂತೆ ಮಾಡಿತ್ತು.
ಈ ದ್ವಿತೀಯ ಭಾಗದ ಚಿತ್ರೀಕರಣ ಮಾರ್ಚ್ ನಲ್ಲೆ ಪ್ರಾರಂಭವಾಗಿದ್ದರೂ, ಚಿತ್ರತಂಡ ಇದನ್ನು ಸಂಪೂರ್ಣಗೊಳಿಸಲು ತಿಣುಕಾಡುತ್ತಿದ್ದಾರೆ. ಈ ಸಿನೆಮಾ ಸಂಪೂರ್ಣಗೊಳ್ಳಲು ಇನ್ನು ೨೦ ದಿನಗಳ ಚಿತ್ರೀಕರಣ ಬಾಕಿಯುಳಿದಿದೆ.
ತಡವಾಗಿರುವುದಕ್ಕೆ ನಿರ್ಮಾಪಕ ವೆಂಕಟ್ ಅವರೇ ಕಾರಣ ಎನ್ನುತ್ತವೆ ಮೂಲಗಳು. ಈ ಹಿಂದೆ ಶ್ರೀನಿವಾಸ ರಾಜು ಅವರ 'ನಾಟಿ ಕೋಳಿ' ಸಿನೆಮಾದಲ್ಲಿ ಹೂಡಿಕೆ ಮಾಡಲು ಒಪ್ಪಿದ್ದ ನಿರ್ಮಾಪಕರೇ ಇವರು. ಈ ಸಿನೆಮಾ ನೆಲಕಚ್ಚಿದ್ದರಿಂದ, 'ದಂಡುಪಾಳ್ಯ ೨' ನಿರ್ಮಿಸಲು ವೆಂಕಟ್ ಮುಂದಾಗಿದ್ದರು.
ಮೂಲಗಳು ತಿಳಿಸುವಂತೆ "ಮುಂದೂಡಲು ಯಾವುದೇ ಸಕಾರಣ ನೀಡದೆ, ಕಳೆದ ಎಂಟು ತಿಂಗಳುಗಳಿದ ಚಿತ್ರೀಕರಣ ಯೋಜನೆ ಬದಲಾಗುತ್ತಲೇ ಇದೆ. ಹಲವಾರು ನಟರು ಮತ್ತು ತಂತ್ರಜ್ಞರು ಆಸಕ್ತಿ ಕಳೆದುಕೊಳ್ಳುತ್ತಿದ್ದು, ಈ ಯೋಜನೆಗೆ ಭಾರಿ ಹೊಡೆತ ಬಿದ್ದಿದೆ" ಎಂದಿದ್ದಾರೆ.
ಮೂಲಗಳು ಹೇಳುವಂತೆ ನಿರ್ಮಾಪಕ ದ್ವಂದ್ವದಲ್ಲಿದ್ದು ಮುಂದಿನ ಹಂತದ ಚಿತ್ರೀಕರಣದ ಬಗ್ಗೆ ಚರ್ಚೆ ಕೂಡ ನಡೆಸುತ್ತಿಲ್ಲವೆಂತೆ. "ಅವರಿಗೆ ಈಗ ಧೃಢ ನಿಶ್ಚಯವಿಲ್ಲ, ಆದುದರಿಂದ ಬೇರೆಯವರ ಬೆಂಬಲ ಇಲ್ಲದೆ ಈ ಯೋಜನೆ ಸಂಪೂರ್ಣವಾಗುವುದಿಲ್ಲ" ಎನ್ನುತ್ತಾರೆ. "ಮೊದಲ ಯೋಜನೆಯ ಪ್ರಕಾರ ಈ ಸಿನೆಮಾವನ್ನು ಅಕ್ಟೋಬರ್ ನಲ್ಲಿ ಬಿಡುಗಡೆ ಮಾಡಬೇಕಿತ್ತು. ಈಗ ಡಿಸೆಂಬರ್. ಸಿನೆಮಾ ಮುಗಿಯುವ ಯಾವುದೇ ಭರವಸೆಗಳಿಲ್ಲ. ಮಧ್ಯದಲ್ಲಿ ಸಿಕ್ಕಿಹಾಕಿಕೊಂಡಿದೆ. ಕೊನೆಯ ಹಂತದ ಚಿತ್ರೀಕರಣ ನಡೆದಿದ್ದು ಮೇನಲ್ಲಿ. ನಂತರ ನಿರ್ಮಾಣ ತಂಡದಿಂದ ಯಾವುದೇ ಸಂಪರ್ಕ ಇಲ್ಲ" ಎಂದು ಕೂಡ ತಿಳಿಸುತ್ತಾರೆ.
ನಿರ್ದೇಶಕ ಶ್ರೀನಿವಾಸ್ ಅವರನ್ನು ಸಂಪರ್ಕಿಸಿದಾಗ "ನಾನು ಯಾವುದೇ ಪ್ರತಿಕ್ರಿಯೆಗಳನ್ನು ನೀಡಬಯಸುವುದಿಲ್ಲ. ನಾನು ಮತ್ತೊಂದು ಸ್ಕ್ರಿಪ್ಟ್ ನಲ್ಲಿ ಬ್ಯುಸಿಯಾಗಿದ್ದೇನೆ" ಎನ್ನುತ್ತಾರೆ.
ದಂಡುಪಾಳ್ಯ ಗ್ಯಾಂಗ್ ಕೂಡ ತಮ್ಮ ಅನುಮತಿ ಇಲ್ಲದೆ ಈ ಚಿತ್ರ ಮಾಡುತ್ತಿರುವುದಾಗಿ ಕೋರ್ಟ್ ಮೊರೆ ಹೋಗಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
ಪೂಜಾ ಗಾಂಧಿ 'ದಂಡುಪಾಳ್ಯ ೨' ಸಿನೆಮಾದಲ್ಲಿ ಮುಖ್ಯ ನಟಿಯಾಗಿ ನಟಿಸುತ್ತಿದ್ದಾರೆ.