ಚಿತ್ರಮಂದಿರದಲ್ಲಿ ರಾಷ್ಟ್ರಗೀತೆ ಕಡ್ಡಾಯ: ತೀರ್ಪು ಪರಿಶೀಲಿಸುವಂತೆ ಮುಖ್ಯ ನ್ಯಾಯಾಧೀಶರಿಗೆ ಸಿಪಿಐ ಪತ್ರ
ಪ್ರತಿ ಸಿನೆಮಾ ಪ್ರದರ್ಶನಕ್ಕೂ ಮುಂಚಿತವಾಗಿ ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆ ಕಡ್ಡಾಯವಾಗಿ ಪ್ರದರ್ಶಿಸಬೇಕು ಎಂಬ ಸುಪ್ರೀಂ ಕೋರ್ಟ್ ತೀರ್ಪನ್ನು ಮರುಪರಿಶೀಲಿಸುವಂತೆ ಸುಪ್ರೀಂ ಕೋರ್ಟ್...
ನವದೆಹಲಿ: ಪ್ರತಿ ಸಿನೆಮಾ ಪ್ರದರ್ಶನಕ್ಕೂ ಮುಂಚಿತವಾಗಿ ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆ ಕಡ್ಡಾಯವಾಗಿ ಪ್ರದರ್ಶಿಸಬೇಕು ಎಂಬ ಸುಪ್ರೀಂ ಕೋರ್ಟ್ ತೀರ್ಪನ್ನು ಮರುಪರಿಶೀಲಿಸುವಂತೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರಿಗೆ ಸಿಪಿಐ ಪತ್ರ ಬರೆದಿದೆ.
ನವೆಂಬರ್ ೩೦ ರ ತೀರ್ಪನ್ನು ಉಲ್ಲೇಖಿಸಿ ಪತ್ರ ಬರೆದಿರುವ ಕಮ್ಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ) ಪ್ರಧಾನ ಕಾರ್ಯದರ್ಶಿ ಕೆ ನಾರಾಯಣ, ಮುಖ್ಯ ನ್ಯಾಯಾಧೀಶ ಟಿ ಎಸ್ ಠಾಕುರ್ ಅವರಿಗೆ ಬರೆದಿರುವ ಪತ್ರದಲ್ಲಿ, ಈ ತೀರ್ಪನ್ನು ಅನುಷ್ಠಾನ ಮಾಡಲು ಹಲವು ತೊಂದರೆಗಳನ್ನು ಸೃಷ್ಟಿಸುತ್ತಿದೆ ಎಂದಿದ್ದಾರೆ.
ಪ್ರತಿ ಸಿನೆಮಾದ ಪ್ರಾರಂಭಕ್ಕೂ ಮುಂಚಿತವಾಗಿ ರಾಷ್ಟ್ರಗೀತೆಯನ್ನು ಹಾಡುವ ವಿಷಯವನ್ನು ಅಷ್ಟು ಸುಲಭಾವಾಗಿ ತೆಗೆದುಕೊಳ್ಳಬಾರದು ಎಂದಿರುವ ಅವರು "ಇದು ಅಶ್ಲೀಲ ನೃತ್ಯದ ಜೊತೆಗೆ ಶಾಸ್ತ್ರೀಯ ನೃತ್ಯವನ್ನು ಒಳಗೊಳ್ಳುವುದರ ರೀತಿ" ಎಂದು ಕೂಡ ಹೇಳಿದ್ದಾರೆ.
"ನಮ್ಮ ದೇಶದಲ್ಲಿ ಸದ್ಯಕ್ಕೆ ಅಸಹಿಷ್ಣುತೆಯ ಕಾಲ ನಡೆಯುತ್ತಿದೆ. ಬಹಳಷ್ಟು ಸಮಾಜ ವಿರೋಧಿ ಜನಗಳು ಕೂಡ ಚಿತ್ರಮಂದಿರಗಳಿಗೆ ಬರುತ್ತಾರೆ. ಹಲವು ಧರ್ಮಗಳ ಜನರು ಸಿನಿಮಾಮಂದಿರಗಳಿಗೆ ಬರುತ್ತಾರೆ. ಮದ್ಯದ ಅಮಲಿನಲ್ಲಿ ಕೆಲವು ಭೂಗತ ಲೋಕದ ಜನ ಬರುತ್ತಾರೆ. ಆದುದರಿಂದ ಇದು ಹಲವು ರಾಜ್ಯಗಳಲ್ಲಿ ಕೋಮು ಹಿಂಸೆಯನ್ನು ಸೃಷ್ಟಿಸುವ ಸಾಧ್ಯತೆ ಇದೆ" ಎಂದಿರುವ ನಾರಾಯಣ ಸದ್ಯದ ಪರಿಸ್ಥಿತಿಯಲ್ಲಿ ರಾಷ್ಟ್ರಗೀತೆಯನ್ನು ಸರ್ಕಾರಿ ಕಾರ್ಯಕ್ರಮಗಳಿಗೆ ಮತ್ತು ಶಾಲೆಗಳಿಗೆ ಸೀಮಿತಗೊಳಿಸುವುದು 'ಹೆಚ್ಚು ವೈಚಾರಿಕ ನಡೆ' ಎಂದಿದ್ದಾರೆ.
"ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ನೀವು ಮರು ಪರಿಗಣಿಸಬಹುದು. ಈ ಹಿಂದೆ ಕೂಡ ಹಲವು ತೀರ್ಪುಗಳನ್ನು ಮರುಪರಿಶೀಲಿಸಲಾಗಿದೆ, ಚರ್ಚಿಸಲಾಗಿದೆ ಮತ್ತು ತಡೆಹಿಡಿಯಲಾಗಿದೆ ಎಂದು ನಾವು ಗಮನಿಸಬಹದು" ಎಂದು ಕೂಡ ಅವರು ಹೇಳಿದ್ದಾರೆ.
ಈ ತೀರ್ಪಿನ ನಂತರ ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆಗೆ ಎದ್ದು ನಿಲ್ಲುತ್ತಿಲ್ಲ ಎಂಬ ಆರೋಪದ ಮೇಲೆ ಹಲವರನ್ನು ಬಂಧಿಸಲಾಗಿದೆ.