ನಿರ್ದೇಶನ ಕಥೆಯನ್ನು ಮೀರಿದ್ದು: ರಮೇಶ್ ಅರವಿಂದ್ ಸಂದರ್ಶನ

೧೦೦ಕ್ಕೂ ಹೆಚ್ಚು ಸಿನೆಮಾಗಳಲ್ಲಿ ನಟಿಸಿರುವ ರಮೇಶ್ ಅರವಿಂದ್ ಕನ್ನಡ ಚಿತ್ರರಂಗದಲ್ಲಿ ಸೃಜನಶೀಲತೆಯ ಹಾದಿ ತುಳಿದು, ಜನಮಾನಸದಲ್ಲಿ ಅಚ್ಚಳಿಯದೆ ಉಳಿದವರು. ದಕ್ಷಿಣ ಭಾರತದ ಎಲ್ಲ ಭಾಷೆಯ
ರಮೇಶ್ ಅರವಿಂದ್
ರಮೇಶ್ ಅರವಿಂದ್
Updated on
ಬೆಂಗಳೂರು: ೧೦೦ಕ್ಕೂ ಹೆಚ್ಚು ಸಿನೆಮಾಗಳಲ್ಲಿ ನಟಿಸಿರುವ ರಮೇಶ್ ಅರವಿಂದ್ ಕನ್ನಡ ಚಿತ್ರರಂಗದಲ್ಲಿ ಸೃಜನಶೀಲತೆಯ ಹಾದಿ ತುಳಿದು, ಜನಮಾನಸದಲ್ಲಿ ಅಚ್ಚಳಿಯದೆ ಉಳಿದವರು. ದಕ್ಷಿಣ ಭಾರತದ ಎಲ್ಲ ಭಾಷೆಯ ಚಿತ್ರರಂಗಗಳಲ್ಲಿ ಮತ್ತು ಬಾಲಿವುಡ್ ನಲ್ಲಿ ಕೂಡ ನಟಿಸಿರುವ ನಟ, ಕೇವಲ ಗುರಿ ತಲುಪುವುದರಲ್ಲಷ್ಟೇ ಸಂತಸ ಕಾಣದೆ, ಅಲ್ಲಿಗೆ ತಲುಪುವ ಶ್ರಮ ಮತ್ತು ಪ್ರಯತ್ನದಲ್ಲಿ ಸಾಕ್ಷಾತ್ಕಾರ ಕಾಣುವವರು. ಕೇವಲ ನಟನೆಯಲ್ಲೇ ಉಳಿಯದೆ, ನಿರ್ದೇಶಕನಾಗಿಯೂ ಗಮನ ಸೆಳೆದು, ತಮಿಳಿನ ಮೇರು ನಟ ಕಮಲಾ ಹಾಸನ್ ಅವರನ್ನು ನಿರ್ದೇಶಿಸಿದ ಶ್ರೇಯಸ್ಸು ಇವರದ್ದು. 
ಈಗ ರಮೇಶ್ ನಿರ್ದೇಶಿಸಿರುವ 'ಸುಂದರಾಂಗ ಜಾಣ' ಬಿಡುಗಡೆಯ ಹೊಸ್ತಿಲಿನಲ್ಲಿ ನಿಂತಿದೆ. ಗಣೇಶ್ ಮತ್ತು ಶಾನ್ವಿ ಶ್ರೀವಾಸ್ತವ ನಟಿಸಿರುವ ಈ ಚಿತ್ರ ತೆಲುಗಿನ 'ಭಲೇ ಭಲೇ  ಮಾಗಾಡಿವೋಯ್'ನ ರಿಮೇಕ್. ತಮ್ಮ ನಿರ್ದೇಶನದ ಪಯಣವನ್ನು ರಮೇಶ್ ಬಿಚ್ಚಿಡುವುದು ಹೀಗೆ. 
* ಸಿನೆಮಾ ನಿರ್ದೇಶನದ ಮಹತ್ವದ ಆಯಾಮ ಯಾವುದು?
ನಿರ್ದೇಶನದ ಇಡೀ ಕಲ್ಪನೆ ಕಾಣ್ಕೆಯ ಮೇಲೆ ನಿಂತಿರುತ್ತದೆ. ಕಲಾತ್ಮಕತೆ, ನಾಟಕೀಯ ಆಯಾಮಗಳು, ಸ್ಕ್ರಿಪ್ಟ್ ನ ಸಾಕಾರತೆ, ತಂತ್ರಜ್ಞರನ್ನು ಬಳಸಿಕೊಳ್ಳುವುದು ಮತ್ತು ನಟರನ್ನು ಮುನ್ನಡೆಸುವುದು ಹೀಗೆ ವಿವಿಧ ಆಯಾಮಗಳಿವೆ. ಮತ್ತು ಫ್ರೇಮ್ ನಲ್ಲಿ ಹಿಡಿದಿದ್ದೆಲ್ಲವೂ ಕೇವಲ ಆಕಸ್ಮಿಕವಲ್ಲ ಮತ್ತು ಇದು ಕಥೆಯನ್ನು ಮೀರಿದ್ದು. ಗೋಡೆ ಮೇಲೆ ತೂಗಿ ಹಾಕಿರುವ ವಸ್ತುವಿನಿಂದ ಹಿಡಿದು, ನಟರ ಚಲನವಲನ ಮತ್ತು ನಟ ಅಥವಾ ನಟಿ ಸಂಭಾಷಣೆ ಉಲಿಯುವ ರೀತಿ, ಅವರ ಹಾವ ಭಾವ ಎಲ್ಲವು ನಿರ್ದೇಶಕನ ಕಾಣ್ಕೆಯಲ್ಲಿ ಮೂಡಬೇಕಾಗುತ್ತದೆ. ಮತ್ತು ಒಮ್ಮೆ ಫ್ರೇಮ್ ನಲ್ಲಿ ಮೂಡಿ ರೆಕಾರ್ಡ್ ಆದ ಮೇಲೆ, ಅದು ಉಳಿದುಬಿಡುತ್ತದೆ. 
ಆದುದರಿಂದ ಅತಿ ಜಾಗರೂಕತೆಯ ಮನಸ್ಸು ಅವಶ್ಯಕ ಮತ್ತು ಅದಕ್ಕೆ ಮೌಲ್ಯವನ್ನು ತುಂಬಬೇಕಾಗುತ್ತದೆ ಹಾಗು ಅದು ಎಂದಿಗೂ ಮುಗಿಯದ ಕಾರ್ಯ. ಸೃಜನಶೀಲ ನಿರ್ದೇಶಕನಿಗೆ ಇದು ದೊಡ್ಡ ಥ್ರಿಲ್. ಕ್ಯಾಮೆರಾ ಮೂಲಕ ಕಥೆ ಹೇಳುವ ಕ್ರಿಯೆಯೇ ಅದ್ಭುತ. ಇದಕ್ಕಾಗಿ ಹೊರಾಂಗಣ ಪ್ರದೇಶಗಳನ್ನು ಹುಡುಕುವುದೇ ನನಗೆ ಒಂದು ರೀತಿಯ ಸವಾಲಾಗಿತ್ತು. 'ಸುಂದರಾಂಗ ಜಾಣ'ನಿಗೆ ನಾನು ಬೆಂಗಳೂರಿನ ಹಲವು ಪ್ರದೇಶಗಳನ್ನು ಆಯ್ಕೆ ಮಾಡಿಕೊಂಡೆ, ಅವುಗಳನ್ನೆಲ್ಲಾ ನಾನು ಮೊದಲ ಬಾರಿಗೆ ನೋಡಿದ್ದು. 
* ನಾವು ನಟರು ನಿರ್ದೇಶಕರಾಗುವುದನ್ನು ಸಾಮಾನ್ಯವಾಗಿ ನೋಡಿದ್ದೇವೆ, ಆದರೆ ಅದರ ತದ್ವಿರುದ್ಧವೂ ಸಾಧ್ಯವೇ?
ಇದೆಲ್ಲವೂ ಮನಸ್ಥಿತಿಯ ಮೇಲೆ ನಿಂತಿರುತ್ತದೆ. ನಾನು ಒಂದನ್ನು ಸೇಬು ಮತ್ತೊಂದನ್ನು ಕಿತ್ತಳೆ ಎಂದು ಪರಿಗಣಿಸುತ್ತೇನೆ. ಆದರೆ ನನಗೆ ಹಣ್ಣುಗಳನ್ನು ಕತ್ತರಿಸಿ ಒಟ್ಟಿಗೆ ಸೇರಿಸಿ ತಿನ್ನುವುದು ಇಷ್ಟ. ನಟನಿಗೆ ಅವನ ಪಾತ್ರ, ಅವನ ವೈಭವೀಕರಣ ಮತ್ತು ಸಂಭಾಷಣೆಯನ್ನು ಉಲಿಯುವುದು ಅತಿ ಮುಖ್ಯವಾಗುತ್ತದೆ ಆದರೆ ನಿರ್ದೇಶಕನಿಗೆ ಸಮಗ್ರವಾದ ಚಿತ್ರಣ ಮುಖ್ಯ. ಕ್ಯಾಮೆರಾ ಮುಂದೆ ಸುಮ್ಮನೆ ಕುಳಿತು ವೀಕ್ಷಿಸುವುದು ನಿರ್ದೇಶನ ಅಲ್ಲ. ವಿವಿಧ ಆಯಾಮಗಳನ್ನು ಚಿಂತಿಸಿ ಎಲ್ಲವನ್ನು ಒಳಗೊಳ್ಳಬೇಕಾಗುತ್ತದೆ. ಕೆಲವು ನಟರು ತಮ್ಮ ಅನುಭವದಿಂದ ನಿರ್ದೇಶಕರಾಗುತ್ತಾರೆ ಮತ್ತು ನಿರ್ದೇಶಕ ನಟನಾಗುವುದಕ್ಕೂ ಯಾವುದೇ ನಿರ್ಬಂಧವಿಲ್ಲ ಆದರೆ ಅವರಿಗೆ ಅದರ ಮೇಲೆ ಪ್ರೀತಿಯಿರಬೇಕಾಗುತ್ತದೆ. 
* ನೀವು ನಿರ್ದೇಶಕನಾಗಲು ಮೊದಲು ಕನಸು ಕಂಡದ್ದು ಯಾವಾಗ?
ನಾನು ಕಾಲೇಜಿನಲ್ಲಿ ಸ್ಕಿಟ್ ಗಳನ್ನು ನಿರ್ದೇಶಿಸುವಾಗಲೇ, ಸಿನೆಮಾ ನಿರ್ದೇಶಕನಾಗುವ ತೀವ್ರ ಆಸಕ್ತಿ ಇತ್ತು. ಇನ್ನು ಸಿನೆಮಾಗಳಿಗೆ ಬಂದರೆ, ನನ್ನ ನಾಲ್ಕನೇ ಸಿನೆಮಾ 'ಸಂಗ್ರಾಮ'ದ ಸಮಯದಲ್ಲೇ ನಿರ್ದೇಶಕನ ಹ್ಯಾಟ್ ತೊಡುವ ಯೋಚನೆ ಮಾಡಿದ್ದೆ. ಇದೆ ಮೊದಲ ಬಾರಿಗೆ ಸೆಟ್ ಮೇಲೆ ಏನಾಗುತ್ತದೆ ಎಂದು ತೆರೆಯಾಚೆಗೆ ನೋಡಲು ನಾನು ಪ್ರಾರಂಭಿಸಿದ್ದು. ಕ್ಯಾಮೆರಾ ಹಿಂದೆ ಏನು ಘಟಿಸುತ್ತದೆ ಎಂದು ತಿಳಿಯಲು ನನಗೆ ಭಾರಿ ಕುತೂಹಲ ಇತ್ತು. ಆದರೆ ಇದಕ್ಕೆ ನನ್ನ ೧೦೦ ನೇ ಸಿನೆಮಾವರೆಗೂ ಕಾಯಬೇಕಿತ್ತು. ನನಗೆ ಅದರ ಚಿಂತನೆ ಯಾವಾಗಲೂ ಇತ್ತು ಆದರೆ ನನ್ನ ಗಾಢ ಗಮನವನ್ನು ಬೇರೆಡೆಗೆ ತಿರುಗಿಸಲು ಸಾಧ್ಯವಾಗಲಿಲ್ಲ. 
ಹಿಂದೆ ಹೀರೊ ಆಗಿ ನಾನು ವರ್ಷಕ್ಕೆ ೯ ಸಿನೆಮಾಗಳನ್ನು ಮಾಡುತ್ತಿದ್ದೆ. ನನ್ನ ನಟನೆಯ ಮೊದಲ ವರ್ಷಗಳಲ್ಲಿ ಖ್ಯಾತ ನಿರ್ದೇಶಕ ಕೆ ಬಾಲಚಂದರ್ ಅವರನ್ನು ಭೇಟಿ ಮಾಡಿದ ಯೋಗ ನನ್ನದು. ನನಗೆ ಉತ್ತಮವಾದ ಹಂತ ತಲುಪಿಸಿದ್ದು ಅವರೇ ಮತ್ತು ನಾನು ಅದನ್ನು ಮರೆಯುವ ಹಾಗೆ ಇಲ್ಲ. ಮೆದುಳು ಸರಿಯಾಗಿ ಕೆಲಸ ಮಾಡಿದರೆ ಮುಂದೆ ನಿರ್ದೇಶನಕ್ಕೆ ಇಳಿಯಬಹುದು ಎಂದು ಅವರು ಹೇಳುತ್ತಾ ಇದ್ದರು, ನಾಯಕನಾಗಿ ನಟಿಸುವಾಗ ಅದು ಸಾಧ್ಯವಾಗಲೇ ಇಲ್ಲ. 
* ನೀವು ಸಿನೆಮಾದಲ್ಲಿ ಇಲ್ಲಿಯವರೆಗೂ ನಿಭಾಯಿಸಲು ಸಾಧ್ಯವಾಗದ ವಿಷಯವೇನಾದರೂ ಇದೆಯೇ?
ನಾನು ಸಿನೆಮಾ ಮಾಡಬಹುದಾದ ೧೬ ವಿಷಯಗಳನ್ನು ಸಿದ್ಧಪಡಿಸಿಕೊಂಡಿದ್ದೇನೆ. ಆದರೆ ಪ್ರತಿ ಬಾರಿಯೂ ನಾನು ನಿರ್ಮಾಪಕರಿಗೆ ಕಥೆ ಹೇಳಿದಾಗ ಮತ್ತೇನೋ ಮಾಡಲು ಮುಂದಾಗುತ್ತೇವೆ. ಇದಕ್ಕೆ ಕಮರ್ಷಿಯಲ್ ಒತ್ತಡಗಳು ಹಾಗು ಮತ್ತಿತರ ಕಾರಣಗಳಿವೆ. ಆದುದರಿಂದ ಹಲವಾರು ಕಥೆಗಳನ್ನು ಕೈಬಿಟ್ಟಿದ್ದೇನೆ. ಆದರೆ ಯಾವುದು ನಿಷ್ಪ್ರಯೋಜಕವಲ್ಲ, ಏಕೆಂದರೆ ಆ ಕಥೆಗಳ ಕೆಲವು ಭಾಗಗಳು ನೀವು ತೆಗೆದುಕೊಳ್ಳುವ ಇತರ ಯೋಜನೆಗಳಲ್ಲಿ ಕೆಲಸಕ್ಕೆ ಬರುತ್ತವೆ. ಯಾವುದೇ ಸೃಜನಶೀಲ ಕೆಲಸ ನಿಷ್ಪ್ರಯೋಜನವಾಗುವುದಿಲ್ಲ ಬದಲಾಗಿ ಎಂದಿಗಾದರೂ ಉಪಯೋಗಕ್ಕೆ ಬರುತ್ತವೆ. 
* ಒಂದು ಸಿನೆಮಾದಲ್ಲಿ ನಿರ್ಮಾಪಕ ಎಷ್ಟು ತೊಡಗಿಸಿಕೊಳ್ಳಬೇಕು?
ನನಗೆ ತಿಳಿದಂತೆ ಅವರು ಸೃಜನಶೀಲ ನಿರ್ಧಾರಗಳನ್ನು ನಿರ್ದೇಶಕನಿಗೆ ಬಿಡಬೇಕು ಮತ್ತು ಅನುಭವಿ ನಿರ್ಮಾಪಕರು ಅದನ್ನು ಮಾಡುತ್ತಾರೆ. ಉದಾಹರಣೆಗೆ ರಾಕ್ಲೈನ್ ವೆಂಕಟೇಶ್ ಮತ್ತು ಅಲ್ಲು ಅರವಿಂದ್ ನಿರ್ದೇಶಕನ ಮೌಲ್ಯವನ್ನು ಬಲ್ಲವರು. ಅವರೆಂದಿಗೂ ಸೃಜನಶೀಲ ನಿರ್ಧಾರಗಳ ಜೊತೆಗೆ ಸೆಣಸುವುದಿಲ್ಲ, ಆದರೆ ಹಣದ ವಿಷಯಕ್ಕೆ ಬಂದಾಗ ಅವರದ್ದೇ ಕೊನೆಯ ಮಾತಾಗುತ್ತದೆ. ಆದರೆ ನಾನು ನಿರ್ದೇಶಕನಾಗಿ ಯಾವುದೇ ಸಲಹೆಗಳಿಗೆ ತೆರೆದುಕೊಂಡಿರುತ್ತೇನೆ. 
* ನಟನ ಜೊತೆಗೆ ನಿರ್ದೇಶಕನ ಸಂಬಂಧ ಎಂತಾದ್ದು?
ಒಳ್ಳೆಯ ಹೀರೊ ಮತ್ತು ಹೀರೋಯಿನ್ ಹೊಂದಿರುವುದು ಮುಖ್ಯ. ಒಳ್ಳೆಯ ತಾರಾಗಣದಿಂದ ಅರ್ಧ ಯುದ್ಧ ಗೆದ್ದಂತೆ. ನನ್ನ ಇತ್ತೀಚಿನ ಸಿನೆಮಾಗೆ ಗಣೇಶ್ ಆ ಪಾತ್ರವನ್ನು ನಿಖರವಾಗಿ ತುಂಬಿದರು ಏಕೆಂದರೆ ಅವರ ಹಾಸ್ಯ ಪ್ರವೃತ್ತಿ ಅದ್ಭುತ ಮತ್ತು ಅದನ್ನು ಕಲಿಸಲು ಸಾಧ್ಯವಿಲ್ಲ. ಅದೃಷ್ಟವಶಾತ್ ಹೀರೋಯಿನ್ ಶಾನ್ವಿ ಶ್ರೀವಾಸ್ತವ, ರಂಗಾಯಣ ರಘು, ಸಾಧು ಕೋಕಿಲಾ ಎಲ್ಲರು ಅದ್ಭುತ ಆಯ್ಕೆಗಳಾಗಿದ್ದವು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com