ಪ್ರಜಾಪ್ರಭುತ್ವದಲ್ಲಿ ಸೆನ್ಸಾರ್ ಮಂಡಳಿಯೇ ಹಾಸ್ಯಾಸ್ಪದ: ಮನೋಜ್ ಬಾಜಪೇಯಿ

ಸಲಿಂಗಕಾಮದ ವಿಷಯ ಪ್ರಧಾನವಸ್ತುವಾಗಿರುವ, ನಟ ಮನೋಜ್ ಬಾಜಪೇಯಿ ನಟಿಸಿರುವ 'ಆಲಿಘರ್' ಸಿನೆಮಾಗೆ ಸೆನ್ಸಾರ್ ಮಂಡಲಿ ಎ-ಪ್ರಮಾಣಪತ್ರ ನೀಡಿರುವ
'ಆಲಿಘರ್' ಸಿನೆಮಾದಲ್ಲಿ ಸಲಿಂಗಕಾಮಿ ಪ್ರಾಧ್ಯಾಪಕನ ಪಾತ್ರದಲ್ಲಿ ಮನೋಜ್ ಬಾಜಪೇಯಿ
'ಆಲಿಘರ್' ಸಿನೆಮಾದಲ್ಲಿ ಸಲಿಂಗಕಾಮಿ ಪ್ರಾಧ್ಯಾಪಕನ ಪಾತ್ರದಲ್ಲಿ ಮನೋಜ್ ಬಾಜಪೇಯಿ

ನವದೆಹಲಿ: ಸಲಿಂಗಕಾಮದ ವಿಷಯ ಪ್ರಧಾನವಸ್ತುವಾಗಿರುವ, ನಟ ಮನೋಜ್ ಬಾಜಪೇಯಿ ನಟಿಸಿರುವ 'ಆಲಿಘರ್' ಸಿನೆಮಾಗೆ ಸೆನ್ಸಾರ್ ಮಂಡಲಿ ಎ-ಪ್ರಮಾಣಪತ್ರ ನೀಡಿರುವ ಹಿನ್ನಲೆಯಲ್ಲಿ "ಪ್ರಜಾಪ್ರಭುತ್ವದಲ್ಲಿ ಸೆನ್ಸಾರ್ ಮಂಡಳಿಯೇ ಹಾಸ್ಯಾಸ್ಪದ" ಎಂದು ಮನೋಜ್ ಅಭಿಪ್ರಾಯ ಪಟ್ಟಿದ್ದಾರೆ.

ಆಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಶ್ರೀನಿವಾಸ ರಾಮಚಂದ್ರ ಸಿರಸ್ ಅವರ ನೈಜ ಕಥೆ ಆಧಾರಿತ ಸಿನೆಮಾ 'ಆಲಿಘರ್'ನ ನಿರ್ದೇಶಕ ಹಂಸಲ್ ಮೆಹ್ತಾ. ಈ ಪ್ರಾಧ್ಯಾಪಕ ಸಲಿಂಗಕಾಮಿಗಯೆಂದು ಅವರನ್ನು ಕೆಲಸದಿಂದ ವಜಾ ಮಾಡಲಾಗಿತ್ತು.

ಈ ಪ್ರಾಧ್ಯಾಪಕರ ಪಾತ್ರ ನಿರ್ವಹಿಸಿರುವ ಮನೋಜ್ ಬಾಜಪೇಯಿ, ಹಲವು ವಯೋಮಾನಗಳಿಗೆ ಸಿನೆಮಾಗಳನ್ನು ವರ್ಗೀಕರಿಸುವುದು ಪರವಾಗಿಲ್ಲ ಆದರೆ ನಿರ್ದೇಶಕನ ಸೃಜನಶೀಲ ಉತ್ಪತ್ತಿಯಲ್ಲಿ ಹಸ್ತಕ್ಷೇಪ ಮಾಡುವುದು ಸರಿಯಲ್ಲ ಎಂದಿದ್ದಾರೆ.

"ಸಿನೆಮಾಗಳ ವರ್ಗೀಕರಣ ನಾನು ನಂಬುತ್ತೇನೆ... ೧೨ ವರ್ಷಗಳ ಮೇಲ್ಪಟ್ಟವರಿಗೆ ಸಿನೆಮಾ ಎನ್ನುವುದು ಪರವಾಗಿಲ್ಲ. ವಿಶ್ವದಾದ್ಯಂತ ಸೆನ್ಸಾರ್ ಮಂಡಲಿಗಳು ಹಾಗೆಯೇ ಕೆಲಸ ಮಾಡುವುದು ಆದೆರೆ ನಿರ್ದೇಶಕನ ಸೃಜನಶೀಲ ಉತ್ಪತ್ತಿಯಲ್ಲಿ ಹಸ್ತಕ್ಷೇಪ ಮಾಡುವುದು ಸರಿಯಲ್ಲ" ಎಂದಿದ್ದಾರೆ ಮನೋಜ್.

"ಬೇರೊಬ್ಬರ ವಾಕ್ ಸ್ವಾತಂತ್ರಕ್ಕೆ ಅಡ್ಡಿ ಬರುವುದಕ್ಕೆ ಯಾವ ಹಕ್ಕೂ ಇಲ್ಲ. ಲಕ್ಷಾಂತರ ಜನ ಏನು ನೋಡಬೇಕೆನ್ನುವುದನ್ನು ಐದು ಜನ ನಿರ್ಧರಿಸಲು ಸಾಧ್ಯವಿಲ್ಲ. ಪ್ರಜಾಪ್ರಭುತ್ವದಲ್ಲಿ ಇಡಿ ಸೆನ್ಸಾರ್ ಮಂಡಲಿಯೇ ಹಾಸ್ಯಾಸ್ಪದ" ಎಂದು ಕೂಡ ಹೇಳಿದ್ದಾರೆ.

ಭಾರತೀಯ ಅಪರಾಧ ಸಂಹಿತೆಯ ಪ್ರಕಾರ ಸಲಿಂಗಕಾಮ ಕ್ರಿಮಿನಲ್ ಅಪರಾಧ. ಇದರ ಬಗ್ಗೆ ಪ್ರತಿಕ್ರಿಯಿಸಿರುವ ೪೬ ವರ್ಷದ ನಟ "ಇದು ಬಹಳಷ್ಟು ಜನರಿಗೆ ಸ್ವಾಭಾವಿಕ ಆಯ್ಕೆ. ಸಲಿಂಗಕಾಮ ಎನ್ನುವುದು ಹೊಸದೇನಲ್ಲ. ಮಾನವ ಕುಲ ಹುಟ್ಟಿದಾಗಿಲಿಂದಲೂ ಇದು ಇದೆ ಮತ್ತು ಹಲವಾರು ಇತರ ಜೀವಿಗಳಲ್ಲೂ ಇದು ಇದೆ. ಇದು ಸ್ವಾಭಾವಿಕ ಪ್ರಕ್ರಿಯೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿದೆ. ಆದುದರಿಂದ ನಾವು ಒಂದು ಸಮಾಜವಾಗಿ ಬೆಳೆಯಬೇಕಾದರೆ ಇವರ ಒಳಗೊಳ್ಳುವುಕೆ ಅತಿ ಮುಖ್ಯ. ಯಾರೊಬ್ಬರು ನಮ್ಮಿಂದ ವಿಭಿನ್ನ ಎಂದು ಅವರನ್ನು ಅಪರಾಧಿಗಳಂತೆ ಕಾಣುವುದು ಸರಿಯಲ್ಲ" ಎಂದು ಗ್ಯಾಂಗ್ಸ್ ಆಫ್ ವಸೀಪುರ್ ನಟ ತಿಳಿಸಿದ್ದಾರೆ.

ಭಾರತೀಯ ಸಮಾಜದ ಆಷಾಢಭೂತಿತನದ ಬಗ್ಗೆ ಮಾತನಾಡಿರುವ ನಟ "ನಮ್ಮ ಸಮಾಜದಲ್ಲಿ ಹಲವಾರು ಆಶಾಢಭೂತಿಗಳಿದ್ದಾರೆ. ನಾವು ಅವರಿಂದ ಸಂತ್ರಸ್ತರಾಗಿದ್ದೇವೆ. ಒಂದು ಕಡೆ ದೇವತೆಗಳನ್ನು ಪೂಜಿಸುತ್ತೇವೆ ಆದರೆ ಮಹಿಳೆಯರಿಗೆ ಸಮಾನ ಹಕ್ಕುಗಳಿಲ್ಲ. ಹಲವಾರು ಮಹಿಳಾ ಲೈಂಗಿಕ ಶೋಷಣೆಗಳನ್ನು ಕಾಣುತ್ತೇವೆ. ನಮ್ಮ ಮಕ್ಕಳನ್ನು ಜಾಗ್ರತವಾಗಿ ನೋಡಿಕೊಳ್ಳುತ್ತೇವೆ ಎಂದು ಹೇಳುತ್ತೇವೆ ಆದರೆ ಇನ್ನೂ ಬಾಲ ಕಾರ್ಮಿಕ ಪದ್ಧತಿ ಇದೆ" ಎಂದಿದ್ದಾರೆ.

'ಆಲಿಘರ್' ಫೆಬ್ರವರಿ ೨೬ಕ್ಕೆ ಬಿಡುಗಡೆಯಾಗಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com