
ಬೆಂಗಳೂರು: 'ಮಠ', 'ಎದ್ದೇಳು ಮಂಜುನಾಥ' ಮತ್ತು 'ಡೈರೆಕ್ಟರ್ ಸ್ಪೆಶಲ್' ಸಿನೆಮಾಗಳ ಮೂಲಕ ಕನ್ನಡ ಚಿತ್ರೋದ್ಯಮದ ಗಮನ ಸೆಳೆದ ನಿರ್ದೇಶಕ ಗುರುಪ್ರಸಾದ್ ಈಗ ಪ್ರೇಮ ಕಥೆಯುಳ್ಳ 'ಎರಡನೇ ಸಲ'ದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಧನಂಜಯ್ ಮತ್ತು ಸಂಗೀತಾ ಭಟ್ ಮುಖ್ಯ ಪಾತ್ರಗಳಲ್ಲಿರುವ ಈ ಸಿನೆಮಾದ ಚಿತ್ರೀಕರಣ ೬೦ ಪ್ರತಿಶತ ಮುಗಿದಿದ್ದು, ಅಂತಿಮ ಘಟ್ಟದ ಚಿತ್ರೀಕರಣ ಇಂದಿನಿಂದ ಬೆಂಗಳುರಿನಲ್ಲಿ ಪ್ರಾರಂಭವಾಗಲಿದ್ದು, ನಂತರ ಚಿತ್ರತಂಡ ಗೋಕರ್ಣಕ್ಕೆ ತೆರಳಲಿದೆ.
ಇನ್ನು ೩೦ ದಿನಗಳ ಚಿತ್ರೀಕರಣ ಬಾಕಿಯಿದೆ ಎಂದು ತಿಳಿಸುವ ಗುರುಪ್ರಸಾದ್ ಮೊದಲ ಬಾರಿಗೆ ಪ್ರೇಮ ಕಥೆಯ ವಿಷಯ ನಿಭಾಯಿಸುತ್ತಿರುವುದಕ್ಕೆ ಉತ್ಸುಕರಾಗಿದ್ದಾರೆ. "ನನ್ನ ಸಿನೆಮಾದಲ್ಲಿ ಕಂಡುಬರುವ ಹಾಸ್ಯ ಇದ್ದೇ ಇರುತ್ತದೆ ಜೊತೆಜೊತೆಗೇ ಪ್ರೀತಿಯ ಭಾವನೆಗಳು ಕೂಡ ಮೂಡಲಿವೆ" ಎಂದು ವಿವರಿಸುತ್ತಾರೆ ನಿರ್ದೇಶಕ.
ಈ ಪ್ರೇಮ ಕಥೆಯಲ್ಲಿ ತಮ್ಮ ನಿಜ ಜೀವನದ ಪ್ರೇಮ ಘಟನೆಗಳನ್ನು ತರಲಿದ್ದಾರೆ ಎಂದು ಗುಟ್ಟು ಬಿಚ್ಚಿಡುವ ಗುರುಪ್ರಸಾದ್ "ಈ ಸಿನೆಮಾ ಸಂಪೂರ್ಣವಾಗಿ ನನ್ನ ಪ್ರೇಮ ಕಥೆ ಅಲ್ಲದೆ ಹೋದರೂ, ಕೆಲವು ಘಟನೆಗಳು ಮತ್ತು ದೃಶ್ಯಗಳು ನಾನು ಪ್ರೀತಿಗೆ ಬಿದ್ದಾಗಿನ ಸಂದರ್ಭದಿಂದ ಸ್ಪೂರ್ಥಿಗೊಂದಿವೆ. ಜನರಿಗೆ ಇದು ಹೊಸತರದ ಅನುಭವವಾಗಲಿದೆ" ಎನ್ನುತ್ತಾರೆ.
ನಟಿ ಲಕ್ಷ್ಮಿ, ಧನಂಜಯ್ ಅವರ ತಾಯಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ ಅನೂಪ್ ಸೀಳಿನ್ ಸಂಗೀತ ನೀಡಿದ್ದಾರೆ.
Advertisement