
ಬೆಂಗಳೂರು: ಸಾಮಾನ್ಯವಾಗಿ ತಮ್ಮ ಹುಟ್ಟುಹಬ್ಬದ ದಿನ ಹೊಸ ಚಿತ್ರವೊಂದರ ಮುಹೂರ್ತ ನಡೆಸಿಕೊಳ್ಳುವ ನಟ ದರ್ಶನ್ ಈ ಬಾರಿ ಅದರಿಂದ ದೂರವುಳಿದಿದ್ದರು. ಸದ್ಯಕ್ಕೆ ತಮ್ಮ ಮುಂದಿನ ಚಿತ್ರವಾದ 'ಜಗ್ಗುದಾದ' ಚಿತ್ರೀಕರಣದಲ್ಲಿ ಹಾಗೂ ಚಿಂತನ್ ಎ ವಿ ಕಥೆ ಬರೆದು ನಿರ್ದೇಶಿಸುತ್ತಿರುವ 'ಚಕ್ರವರ್ತಿ' ಸಿನೆಮಾದ ಸಿದ್ಧತೆಯಲ್ಲಿ ನಿರತರಾಗಿದ್ದರು.
'ಚಕ್ರವರ್ತಿ' ಸಿನೆಮಾದ ಮೊದಲ ಸ್ಟಿಲ್ ನಲ್ಲಿ ದರ್ಶನ್ ಹಿಂದೆಂದು ಕಾಣಿಸಿಕೊಳ್ಳದ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.
'ಚಕ್ರವರ್ತಿ' ಸಿನೆಮಾದ ದರ್ಶನ್ ಅವರ ಮೊದಲ ನೋಟ ೮೦ ರ ದಶಕದ ಚಿತ್ರವನ್ನು ನೆನಪಿಸುತ್ತದೆ. ಇದು ಭೂಗತ ದೊರೆಯ ಕಥೆಯಿರಬಹುದು ಎಂಬ ಸುಳಿವನ್ನು ನೀಡುತ್ತದೆ.
ಸಿನೆಮಾದ ಬಗ್ಗೆ ಹೆಚ್ಚು ಗುಟ್ಟು ಬಿಚ್ಚಿಡದ ಚಿತ್ರತಂಡ, ನೈಜ ಭೂಗತ ಲೋಕದ ಕಥೆಯಿದು ಎಂದಷ್ಟೇ ತಿಳಿಸುತ್ತದೆ. ಮಾರ್ಚ್ ಅಥವಾ ಏಪ್ರಿಲ್ ನಲ್ಲಿ ಸಿನೆಮಾದ ಚಿತ್ರೀಕರಣ ಪ್ರಾರಂಭವಾಗಲಿದೆಯಂತೆ.
ಕೆ ವಿ ಸತ್ಯಪ್ರಕಾಶ್ ಮತ್ತು ಕೆ ಎಸ್ ಸೂರಜ್ ಗೌಡ ನಿರ್ಮಿಸುತ್ತಿರುವ ಈ ಸಿನೆಮಾಗೆ ಅರ್ಜುನ್ ಜನ್ಯ ಸಂಗೀತ ನೀಡಲಿದ್ದು, ಎಚ್ ಸಿ ವೇಣು ಸಿನೆಮ್ಯಾಟೋಗ್ರಾಫರ್. ಕೆ ಎಂ ಪ್ರಕಾಶ್ ಸಂಕಲನಕಾರ ಮತ್ತು ಈಶ್ವರಿ ಕುಮಾರ್ ಕಲಾತ್ಮಕ ನಿರ್ದೇಶಕ.
Advertisement