
ಗುಲಾಬಿ ಸ್ಟ್ರೀಟ್ ಮೂಲಕ ನಿರ್ದೇಶಕರಾಗಿ ಸ್ಯಾಂಡಲ್ ವುಡ್ ಗೆ ಪರಿಚಿತರಾಗಬೇಕಿದ್ದ ಪ್ರದೀಪ್ ವರ್ಮಾ, ಈಗ ಉರ್ವಿ ಎಂಬ ಮಹಿಳಾ ಕೇಂದ್ರಿತ ಚಿತ್ರದ ಮೂಲಕ ಮೊದಲ ನಿರ್ದೇಶನದ ಚಿತ್ರವನ್ನು ತೆರೆಗೆ ತರುತ್ತಿದ್ದಾರೆ.
ಎಲ್ಲವೂ ಯೋಜನೆ ಪ್ರಕಾರ ನಡೆದಿದ್ದರೆ 2014 ರಲ್ಲೇ ಪ್ರಸಿದ್ಧ ಕಲಾವಿದ ಬಿಕೆಎಸ್ ವರ್ಮಾ ಪುತ್ರ ಪ್ರದೀಪ್ ವರ್ಮಾ ನಿರ್ದೇಶಕನಾಗಿ ಪರಿಚಯವಾಗಬೇಕಿತ್ತು. ಆದರೆ ಗುಲಾಬಿ ಸ್ಟ್ರೀಟ್ ಯೋಜನೆ ಯಶಸ್ವಿಯಾಗಲಿಲ್ಲವಾದ ಕಾರಣ ಅದನ್ನು ಬಿಟ್ಟು ಉರ್ವಿ ಎಂಬ ಹೊಸ ಪ್ರಾಜೆಕ್ಟ್ ನ್ನು ಕೈಗೆತ್ತಿಕೊಂಡಿದ್ದಾರೆ.
ಐದು ಮಹಿಳಾ ಪಾತ್ರಗಳ ಸುತ್ತ ಸುತ್ತುವ ಉರ್ವಿ ಕತೆಯಲ್ಲಿ ಶೃತಿ ಹರಿಹರನ್, ಶ್ವೇತಾ ಪಂಡಿತ್, ಶ್ರದ್ಧಾ ಶ್ರೀನಾಥ್, ಭವಾನಿ ಪ್ರಕಾಶ್ ಹಾಗೂ ಹೊಸ ಪ್ರತಿಭೆ ಜಾಹ್ನವಿ ನಟಿಸುತ್ತಿದ್ದಾರೆ. ನಟ ಅಚ್ಯುತ್ ಕುಮಾರ್ ಸಹ ನಟಿಸುತ್ತಿದ್ದಾರೆ. ಫೆ.4 ರಿಂದ ಚಿತ್ರೀಕರಣ ಪ್ರಾರಂಭವಾಗಲಿದೆ ಎಂದು ನಿರ್ದೇಶಕ ಪ್ರದೀಪ್ ವರ್ಮಾ ಹೇಳಿದ್ದಾರೆ.
ಉರ್ವಿ ಕಾಳಿಕಾ ದೇವಿಯ ಮತ್ತೊಂದು ಹೆಸರಾಗಿದ್ದು, ಮಹಿಳಾ ಕೇಂದ್ರಿತ ಚಿತ್ರವಾಗಿರುವುದರಿಂದ ಈ ಹೆಸರು ಸೂಕ್ತ ಎಂದೆನಿಸಿತು ಎಂದು ವರ್ಮಾ ತಿಳಿಸಿದ್ದಾರೆ. ಉರ್ವಿ ಚಿತ್ರವನ್ನು ರವಿ ಪ್ರಕಾಶ್ ಭಟ್ ನಿರ್ಮಾಣ ಮಾಡುತ್ತಿದ್ದಾರೆ. ಆನಂದ್ ಸುಂದರೇಶ ಛಾಯಾಗ್ರಹಣ, ಮನೋಜ್ ಜಾರ್ಜ್ ಹಾಗೂ ರಿಕಿ ಕೇಜ್ ಸಂಗೀತ ನೀಡುತ್ತಿದ್ದಾರೆ.
Advertisement