'ಜಾಗ್ವಾರ್' ಸಿನೆಮಾ ನಿರ್ಮಾಪಕರು ಅಕ್ಟೊಬರ್ 7ರ ಗಡುವಿನೊಳಗೆ ಚಿತ್ರೀಕರಣ ಮುಗಿಸಲು ಶತಪ್ರಯತ್ನ ನಡೆಸಿದ್ದಾರೆ. ಈ ಸಿನೆಮಾದ ಮುಖ್ಯಪಾತ್ರದಲ್ಲಿರುವ ನಿಖಿಲ್ ಕುಮಾರ್ ಸದ್ಯಕ್ಕೆ ಮೈಸೂರಿನಲ್ಲಿ ಚಿತ್ರೀಕರಣ
ಬೆಂಗಳೂರು: 'ಜಾಗ್ವಾರ್' ಸಿನೆಮಾ ನಿರ್ಮಾಪಕರು ಅಕ್ಟೊಬರ್ 7ರ ಗಡುವಿನೊಳಗೆ ಚಿತ್ರೀಕರಣ ಮುಗಿಸಲು ಶತಪ್ರಯತ್ನ ನಡೆಸಿದ್ದಾರೆ. ಈ ಸಿನೆಮಾದ ಮುಖ್ಯಪಾತ್ರದಲ್ಲಿರುವ ನಿಖಿಲ್ ಕುಮಾರ್ ಸದ್ಯಕ್ಕೆ ಮೈಸೂರಿನಲ್ಲಿ ಚಿತ್ರೀಕರಣ ನಡೆಸುತ್ತಿದ್ದು ಹಗಲು ರಾತ್ರಿ ಎನ್ನದೆ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಅವರು ದಿನಕ್ಕೆ ಕೇವಲ ನಾಲ್ಕು ಘಂಟೆಯಷ್ಟೇ ಮಲಗುತ್ತಿರುವುದಂತೆ!
'ಜಾಗ್ವಾರ್' ಸ್ಯುಟ್ ತೊಟ್ಟು, ಬೈಕ್ ಓಡಿಸುತ್ತಿರುವ ನಿಖಿಲ್ ಅವರ ಹೊಸ ಸ್ಟಿಲ್ ಒಂದು ಈಗ ಲಭ್ಯವಿದೆ "ಬಲ್ಗೇರಿಯಾ ಇಂದ ಬಂದ ನಂತರ ಚಿತ್ರತಂಡ ವಿರಮಿಸಿಯೇ ಇಲ್ಲ. ನೇರವಾಗಿ ಮೈಸೂರಿನ ಇನ್ಫೋಸಿಸ್ ಕ್ಯಾಂಪಸ್ ಗೆ ತೆರಳಿ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದೇವೆ. ಚಿತ್ರೀಕರಣದ ಮಧ್ಯೆ ಯಾವುದೇ ದಿನ ರಜೆ ಇಲ್ಲದೆ ಆಗಸ್ಟ್ 30 ರವರೆಗೆ ಚಿತ್ರೀಕರಣ ನಡೆಸಲಿದ್ದೇವೆ" ಎಂದು ತಿಳಿಸುತ್ತಾರೆ ಕಾರ್ಯಕಾರಿ ನಿರ್ಮಾಪಕ ಸುನಿಲ್ ಗೌಡ.
ಸದ್ಯಕ್ಕೆ ಬ್ರಹ್ಮಾನಂದಂ, ಸಾಧು ಕೋಕಿಲಾ, ಸಂಪತ್ ರಾಜ್, ಆದಿತ್ಯಾ ಮೆನನ್ ಮತ್ತು ನಿಖಿಲ್ ಅವರ ಮಾತುಕತೆಯ ಚಿತ್ರೀಕರಣ ಭಾಗ ಜಾರಿಯಲ್ಲಿದ್ದು, ಸೂರ್ಯಾಸ್ತದ ನಂತರ ಫೈಟ್ ದೃಶ್ಯಗಳನ್ನು ಚಿತ್ರೀಕರಣ ಮಾಡಲಾಗುತ್ತಿದೆಯಂತೆ.
ಚಿತ್ರೀಕರಣದ ನಂತರದ ಕಾರ್ಯಗಳಯಾದ ಡಬ್ಬಿಂಗ್, ರೀರೆಕಾರ್ಡಿಂಗ್, ಸಂಕಲನ ಎಲ್ಲವು ಇನ್ಫೋಸಿಸ್ ಕ್ಯಾಂಪಸ್ ನಲ್ಲಿಯೇ ನಡೆಯಲಿದೆಯಂತೆ. ಅದಕ್ಕಾಗಿ ಅಲ್ಲಿಯೇ ಎಲ್ಲವನ್ನು ಸಿದ್ಧಪಡಿಸಿಕೊಳ್ಳಲಾಗಿದೆ.
ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವ ಈ ಸಿನೆಮಾವನ್ನು ನಿಖಿಲ್ ಅವರ ತಂದೆ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ನಿರ್ಮಿಸುತ್ತಿದ್ದು, ದೀಪ್ತಿ ಸಾಟಿ ನಾಯಕ ನಟಿ. ಜಗಪತಿ ಬಾಬು, ಶರತ್ ಕುಮಾರ್ ಮತ್ತು ಮೀನಾ ಕೂಡ ತಾರಾಗಣದಲ್ಲಿದ್ದು ಎ ಮಹಾದೇವ ನಿರ್ದೇಶಕ. ಮನೋಜ್ ಪದ್ಮನಾಭ ಸಿನೆಮ್ಯಾಟೋಗ್ರಾಫರ್ ಮತ್ತು ಎಸ್ ಎಸ್ ತಮನ್ ಅವರ ಸಂಗೀತ ಚಿತ್ರಕ್ಕಿದೆ.