೧೦೦ ಕೋಟಿ ಕ್ಲಬ್ - ಸಿನೆಮಾ ನಿರ್ದೇಶನದ ಸಂವೇದನೆಗಳಿಗೆ ವಿಷ ಹಿಂಡಿದೆ: ನಾಸಿರುದ್ದೀನ್ ಷಾ

೧೦೦ ಕೋಟಿ ಕ್ಲಬ್ ಒಳಗೆ ಸೇರುವ ಆಕಾಂಕ್ಷೆ ಭಾರತೀಯ ಸಿನೆಮಾ ರಂಗಕ್ಕೆ ವಿಷವಾಗಿ ಪರಿಣಮಿಸಿದೆ ಎಂದು ಖ್ಯಾತ ನಟ ನಾಸಿರುದ್ದೀನ್ ಷಾ ಹೇಳಿದ್ದಾರೆ.
ಖ್ಯಾತ ನಟ ನಾಸಿರುದ್ದೀನ್ ಷಾ
ಖ್ಯಾತ ನಟ ನಾಸಿರುದ್ದೀನ್ ಷಾ

ನವದೆಹಲಿ: ೧೦೦ ಕೋಟಿ ಕ್ಲಬ್ ಒಳಗೆ ಸೇರುವ ಆಕಾಂಕ್ಷೆ ಭಾರತೀಯ ಸಿನೆಮಾ ರಂಗಕ್ಕೆ ವಿಷವಾಗಿ ಪರಿಣಮಿಸಿದೆ ಎಂದು ಖ್ಯಾತ ನಟ ನಾಸಿರುದ್ದೀನ್ ಷಾ ಹೇಳಿದ್ದಾರೆ.

ಕಳೆದ ತಿಂಗಳಷ್ಟೇ ನಾಸಿರುದ್ದೀನ್ ಷಾ ಅವರ ಎರಡು ಸಿನೆಮಾಗಳು 'ದ ಬ್ಲೂಬೆರ್ರಿ ಹಂಟ್' ಮತ್ತು 'ವೇಯ್ಟಿಂಗ್' ಬಿಡುಗಡೆಯಾಗಿದ್ದವು.

"'ದಿ ಬ್ಲೂಬೆರ್ರಿ ಹಂಟ್' ಹೀಗೆ ಬಂದು ಹಾಗೆ ಹೋಯಿತು. ಆದರೆ ಆಸ್ಪತ್ರೆಯಲ್ಲಿ ಸುಶ್ರೂಷೆಯಲ್ಲಿ ತೊಡಗಿದ ಇಬ್ಬರು ವಿಭಿನ್ನ ವ್ಯಕ್ತಿಗಳ ನಡುವಿನ ಭಾವನಾತ್ಮಕ ಸಂಬಂಧ ಹೊಂದಿರುವ 'ವೇಯ್ಟಿಂಗ್' ಹಲವಾರು ಪ್ರೇಕ್ಷಕರನ್ನು ಸೆಳೆದುಕೊಂಡಿತು.

"೧೦೦ ಕೋಟಿ ಕ್ಲಬ್ ಸಿನೆಮಾ ನಿರ್ದೇಶನದ ಸಂವೇದನೆಗಳಿಗೆ ವಿಷ ಹಿಂಡಿದೆ. ನಾವು ಸಿನೆಮಾ ಮಾಡುವುದೇ ಅದಕ್ಕಾಗಿ ಎನ್ನುವಂತಾಗಿದೆ... ಒಳ್ಳೆಯ ವಿಷಯ-ಕಥೆ ಹೊಂದಿರುವ ಸಿನೆಮಾಗಳು ಕೂಡ ಆರ್ಥಿಕವಾಗಿ ಒಳ್ಳೆಯ ಪ್ರದರ್ಶನ ನೀಡುವುದು ಮುಖ್ಯ" ಎಂದು ನಾಸಿರುದ್ದೀನ್ ಷಾ ಹೇಳಿದ್ದಾರೆ.

ಇದಕ್ಕೆ ಕಾರಣಗಳನ್ನು ತಿಳಿಸುವ ನಟ "ರಿಕ್ಷಾ ಎಳೆಯುವವನಿಗೆ ಅಥವಾ ದಿನವಿಡೀ ರಸ್ತೆಯ ಮೇಲೆ ಕೆಲಸ ಮಾಡುವವನು 'ವೇಯ್ಟಿಂಗ್' ಸಿನೆಮಾ ನೋಡಬೇಕೆಂದು ನಿರೀಕ್ಷಿಸುವುದು ತಪ್ಪು. ಅವನು ನೋಡುವುದಿಲ್ಲ ಕೂಡ. ಅವನು 'ಭಜರಂಗಿ ಭಾಯಿಜಾನ್' ಅಥವಾ 'ಹ್ಯಾಪಿ ನ್ಯೂ ಇಯರ್' ನೋಡುತ್ತಾನೆ. ಏಕೆಂದರೆ ಅದು ಅವನಿಗೆ ಅವಶ್ಯಕ.

"ಅವನ ಜೀವನದ ಬಗ್ಗೆಯೇ ಸಿನೆಮಾ ನೋಡಬೇಕು ಎಂದು ನಿರೀಕ್ಷಿಸಲು ಸಾಧ್ಯವಿಲ್ಲ... ಅದನ್ನು ಬಯಸುವುದು ಸರಿಯಲ್ಲ" ಎಂದು ಕಮರ್ಷಿಯಲ್ ಮತ್ತು ಕಲಾತ್ಮಕ ಸಿನೆಮಾಗಳೆರಡರಲ್ಲೂ ನಟಿಸಿರುವ ೬೬ ವರ್ಷದ ನಟ ಹೇಳುತ್ತಾರೆ.

೧೯೭೦ ರ ದಶಕ ಮತ್ತು ಪ್ರಸಕ್ತ ಸಮಯಗಳನ್ನು ಹೋಲಿಸುವ ನಾಸಿರುದ್ದೀನ್ ಷಾ ಆಗ ೨-೩ ಒಳ್ಳೆಯ ಕಂಟೆಂಟ್ ಉಳ್ಳ ಸಿನೆಮಾಗಳು ಬರುತ್ತಿದ್ದವು ಆದರೆ ಈಗ ಕನಿಷ್ಠ ೨೦ ರಿಂದ ೩೦ ಸಿನೆಮಾಗಳು ಬರುತ್ತಿವೆ.

"ಆದರೆ ಕಸದಂತಹ ಸಿನೆಮಾಗಳು ಕೂಡ ಹೆಚ್ಚಳಗೊಂಡಿವೆ. ಹೊಸ ಅಲೆಯ ಸಿನೆಮಾಗಳನ್ನು ನಿರ್ದೇಶಿಸುತ್ತಿರುವವರ ಸಂಖ್ಯೆ ಬಹಳ ಸಣ್ಣದಿದೆ" ಎನ್ನುತ್ತಾರೆ ನಟ.

ಪ್ರಾದೇಶಿಕ ಮಾರುಕಟ್ಟೆಯ ಮೇಲೆ ಭರವಸೆ ಇಟ್ಟಿರುವ ನಟ "ಪ್ರಾದೇಶಿಕ ಸಿನೆಮಾಗಳ ಅಭಿವೃದ್ಧಿ ಎಂದಿಗೂ ಆಸಕ್ತಿದಾಯಕ. ಮರಾಠಿ ಮತ್ತು ಕನ್ನಡದಲ್ಲಿ ಇದು ಸಾಧ್ಯವಾಗಿದೆ. ಸಮಾನಾಂತರ ಸಿನೆಮಾಗಳು ಮಲಯಾಳಂ ನಲ್ಲೂ ಹೆಚ್ಚಿವೆ. ಇದು ಒಳ್ಳೆಯ ಸೂಚನೆ ಆದರೆ ಎಲ್ಲರೂ ೧೦೦ ಕೋಟಿ ಕ್ಲಬ್ ಸೇರಲು ಹವಣಿಸುತ್ತಿರುವುದೇ ತೊಂದರೆ" ಎನ್ನುತ್ತಾರೆ ನಾಸಿರುದ್ದೀನ್ ಷಾ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com