
ತಿರುವನಂತಪುರಂ: ಮಲೆಯಾಳಿ ಸಿನೆಮಾ 'ಕಥಕ್ಕಳಿ' ನಗ್ನತೆ ಮತ್ತು ಸಭ್ಯತೆಯನ್ನು ಪ್ರದರ್ಶಿಸಿದೆ ಎಂದು ಪ್ರಮಾಣ ಪತ್ರ ನೀಡಲು ನಿರಾಕರಿಸಿರುವ ಸಿನೆಮಾ ಪ್ರಮಾಣಪತ್ರ ಕೇಂದ್ರ ಮಂಡಳಿಯ (ಸಿ ಎಫ್ ಬಿ ಸಿ) ಕಚೇರಿಯ ಮುಂದೆ ಚಿತ್ರತಂಡ ಪ್ರತಿಭಟನೆ ನಡೆಸಿದೆ.
ಸೈಜೋ ಕನ್ನನೈಕ್ಕಲ್ ನಿರ್ದೇಶನದ ಈ ಚಿತ್ರದ ಕೈಮ್ಯಾಕ್ಸ್ ದೃಶ್ಯವನ್ನು ಸೇರಿದಂತೆ ಮೂರು ಕಡೆ ಕತ್ತರಿ ಹಾಕುವಂತೆ ಸೆನ್ಸಾರ್ ಮಂಡಲಿ ಹೇಳಿತ್ತು. ಇದನ್ನು ಪ್ರಶ್ನಿಸಿ ಈಗಾಗಲೇ ಕೇರಳದ ಸಿನೆಮಾ ನೌಕರರ ಸಂಘ (ಎಫ್ ಇ ಎಫ್ ಕೆ ಎ) ಹೈಕೋರ್ಟ್ ಮೆಟ್ಟಿಲು ಹತ್ತಿದ್ದು, ಈ ಪ್ರತಿಭಟನೆಗೂ ಕೈಜೋಡಿಸಿದೆ.
ಸಂಘದ ಪ್ರಧಾನ ಕಾರ್ಯದರಿ ಬಿ ಉನ್ನಿಕೃಷ್ಣನ್ ನೇತೃತ್ವದಲ್ಲಿ ಎಫ್ ಇ ಎಫ್ ಕೆ ಎ ಸದಸ್ಯರು ಸಿ ಬಿ ಎಫ್ ಸಿ ಪ್ರಾದೇಶಿಕ ಕಚೇರಿ ಎದುರು ಪ್ರತಿಭಟನೆಯನ್ನು ಸೇರಿಕೊಂಡಿದ್ದಾರೆ.
ಸಿನೆಮಾದ ಆತ್ಮದಂತಿರುವ ದೃಶ್ಯಗಳಿಗೇ ಕತ್ತರಿ ಹಾಕಲು ಸೆನ್ಸಾರ್ ಮಂಡಲಿ ಸೂಚಿಸಿದೆ ಎಂದು ೨೭ ವರ್ಷದ ಕನ್ನನೈಕ್ಕಲ್ ಆರೋಪಿಸಿದ್ದಾರೆ. ಮಂಡಳಿಯ ಈ ತೀರ್ಪು ನಿರ್ದೇಶಕನ ಸೃಜನಶೀಲ ಸ್ವಾತಂತ್ರ್ಯಕ್ಕೆ ಧಕ್ಕೆ ಎಂದು ಕೂಡ ಅವರು ಹೇಳಿದ್ದಾರೆ.
ಇತ್ತೀಚೆಗಷ್ಟೇ ಬಾಲಿವುಡ್ ಸಿನೆಮಾ 'ಉಡ್ತಾ ಪಂಜಾಬ್' ಗೆ ಪ್ರಮಾಣ ಪತ್ರ ನೀಡಲು ನಿರಾಕರಿಸಿ ೧೩ ಕಟ್ ಸುಚಿಸಿದ್ದ ಸೆನ್ಸಾರ್ ಮಂಡಳಿ ಹೈಕೋರ್ಟ್ ನಿಂದ ಛೀಮಾರಿ ಹಾಕಿಸಿಕೊಂಡಿತ್ತು. ಒಂದು ಕಡೆ ಮಾತ್ರ ಕಟ್ ಸೂಚಿಸಿ ಸಿನೆಮಾದ ಬಿಡುಗಡೆಗೆ ಹಾದಿ ಸುಗಮಗೊಳಿಸಿತ್ತು.
Advertisement