'ಬದ್ಮಾಶ್' ಮೂಲಕ ಕನ್ನಡ ಚಿತ್ರರಂಗಕ್ಕೆ ಹೊಸ ಸಂಗೀತ ನಿರ್ದೇಶಕ
ಬೆಂಗಳೂರು: ಮತ್ತೊಬ್ಬ ಸಂಗೀತ ನಿರ್ದೇಶಕನಿಗೆ ಕನ್ನಡ ಚಿತ್ರರಂಗ ಕೈಬೀಸಿ ಕರೆದಿದೆ. 'ತಮಿಸ್ರ' ಸಿನೆಮಾಗೆ ಹಿನ್ನಲೆ ಸಂಗೀತ ನೀಡುವ ಮೂಲಕ ಕನ್ನಡ ಚಿತ್ರರಂಗಕ್ಕೆ ಆಗಮಿಸಿದ್ದ ಜುಡಾ ಸ್ಯಾಂಡಿ ಈಗ 'ಬದ್ಮಾಶ್' ಸಿನೆಮಾಗೆ ಸಂಗೀತ ಮತ್ತು ಹಿನ್ನಲೆ ಸಂಗೀತ ಎರಡನ್ನೂ ಒದಗಿಸಲಿದ್ದಾರೆ.
ಹಂಸಲೇಖ ಸಂಗೀತ ನಿರ್ದೇಶನದ ಬಹುತೇಕ ಹಾಡುಗಳಿಗೆ ಪಿಟೀಲುಕಾರರಾಗಿದ್ದ ತಮ್ಮ ತಂದೆ ಅಗಸ್ಟಿನ್ ಸ್ಯಾಂಡಿ ಅವರಿಂದ ತಾವು ಸಂಗೀತದಲ್ಲೇ ಮುಳುಗಿ ಬೆಳೆದಿರುವುದಾಗಿ ತಿಳಿಸುವ ಜುಡಾ "ನಾನು ಸಂಗೀತವನ್ನು ಕೇಳುತ್ತಲೇ ಬೆಳೆದೆ. ಅದು ನನ್ನ ಮೇಲೆ ಭಾರಿ ಪ್ರಭಾವ ಬೀರಿದೆ. ನಾನು ಕಾಲೇಜು ಮುಗಿಸಿದ ಮೇಲೆ ಬ್ಯಾಂಡ್ ನನ್ನನ್ನು ಮುಂದಕ್ಕೆ ಕೊಂಡೊಯ್ದಿತು" ಎನ್ನುತ್ತಾರೆ.
ರಾಕ್ ಮತ್ತು ಪಾಶ್ಚಿಮಾತ್ಯ ಸಂಗೀತ ಕೇಳಿ ಬೆಳೆದಿದ್ದರೂ ತಾವೇ ಸಂಗೀತ ನೀಡುವಾಗ ಎಲ್ಲ ವಿಧದ ಸಂಗೀತ ಬಳಸಲು ಬಲ್ಲೆ ಎನ್ನುವ ಜುಡಾ "ಆಕಾಶ್ ಶ್ರೀವತ್ಸ ಅವರ ನಿರೂಪಣೆಯಂತೆ 'ಬದ್ಮಾಶ್' ಪಾತ್ರ ರಾಮನಿಂದ ಹೆಚ್ಚು ಸ್ಫೂರ್ತಿ ಪಡೆದಿದೆ. ನನ್ನ ಸಂಗೀತ ಆಧುನಿಕ ಮತ್ತು ಭಕ್ತಿಯ ಮಿಳಿತ" ಎನ್ನುತ್ತಾರೆ.
'ಬಹದ್ದೂರ್' ನಿರ್ದೇಶಕ ಚೇತನ್, ಯೋಗರಾಜ್ ಭಟ್ ಎರಡು ಹಾಡುಗಳಿಗೆ ಸಾಹಿತ್ಯ ರಚಿಸಿದ್ದು ಆ ಹಾಡುಗಳನ್ನು ಕ್ರಮವಾಗಿ ಚಂದನ್ ಶೆಟ್ಟಿ ಮತ್ತು ವಿಜಯ್ ಪ್ರಕಾಶ್ ಹಾಡಿದ್ದಾರಂತೆ. ರಘು ದೀಕ್ಷಿತ್, ಶಶಾಂಕ್ ಶೇಷಾದ್ರಿ ಮತ್ತು ಕಾರ್ತಿಕ್ ಕೂಡ ಸಿನೆಮಾಗೆ ಹಾಡಿದ್ದಾರೆ.
ಇನ್ನೂ ಹಲವಾರು ಯೋಜನೆಗಳಲ್ಲಿ ತೊಡಗಿಸಿಕೊಂಡಿರುವ ಜುಡಾ, ನಿರ್ಭಯ್ ಚಕ್ರವರ್ತಿ ನಿರ್ದೇಶನದ 'ವಿಜಯಾದಿತ್ಯ' ಸಿನೆಮಾಗೂ ಸಂಗೀತ ನೀಡಿದ್ದಾರೆ. "ಇನ್ನೂ ಬಿಡುಗಡೆಯಾಗಬೇಕಿರುವ 'ಲೈಫ್ ಸೂಪರ್' ಸಿನೆಮಾಗೂ ಸಂಗೀತ ನೀಡಿದ್ದೇನೆ. ಎರಡು ತಮಿಳು ಸಿನೆಮಾಗಳಿಗೂ" ಎಂದು ವಿವರಿಸುತ್ತಾರೆ.
ಧನಂಜಯ್ ಮತ್ತು ಸಂಚಿತಾ ಶೆಟ್ಟಿ ಮುಖ್ಯಪಾತ್ರದಲ್ಲಿರುವ 'ಬದ್ಮಾಶ್' ಸಿನೆಮಾದಲ್ಲಿ ಅಚ್ಯುತ್ ಕುಮಾರ್, ಜಹಂಗೀರ್, ರಮೇಶ್ ಪಂಡಿತ್, ರಮೇಶ್ ಭಟ್ ಮತ್ತು ಪ್ರಕಾಶ್ ಬೆಳವಾಡಿ ಕೂಡ ತಾರಾಗಣದಲ್ಲಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ