ರಾಜ್ಯದ ಮಲ್ಟಿಪ್ಲೆಕ್ಸ್ ಗಳಲ್ಲಿ ಟಿಕೆಟ್ ದರ ಕಡಿತ ಕೋರಿ ಆನ್ ಲೈನ್ ನಲ್ಲಿ ಸಹಿ ಸಂಗ್ರಹ

ಕರ್ನಾಟಕದ ಮಲ್ಟಿಪ್ಲೆಕ್ಸ್ ಗಳ ಸಿನೆಮಾ ಟಿಕೆಟ್ ಗಳು ಅತಿ ದುಬಾರಿ ಎಂದಿರುವ ಚೇಂಜ್.ಆರ್ಗ್ ನ ಅಂತರ್ಜಾಲದ ಅರ್ಜಿಗೆ ಸಹಿ ಹಾಕುವಂತೆ ಸಿನೆಮಾ ಮಂದಿ ಮತ್ತು ಸಾರ್ವಜನಿಕರನ್ನು
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕರ್ನಾಟಕದ ಮಲ್ಟಿಪ್ಲೆಕ್ಸ್ ಗಳ ಸಿನೆಮಾ ಟಿಕೆಟ್ ಗಳು ಅತಿ ದುಬಾರಿ ಎಂದಿರುವ ಚೇಂಜ್.ಆರ್ಗ್ ನ ಅಂತರ್ಜಾಲದ ಅರ್ಜಿಗೆ ಸಹಿ ಹಾಕುವಂತೆ ಸಿನೆಮಾ ಮಂದಿ ಮತ್ತು ಸಾರ್ವಜನಿಕರನ್ನು ಕೋರಲಾಗಿದೆ.

ನಿರ್ದೇಶಕ ದಯಾಳ್ ಪದ್ಮನಾಭನ್, ನಟ ರಕ್ಷಿತ್ ಶೆಟ್ಟಿ ಮತ್ತು ಧನಂಜಯ್ ಇನ್ನಿತರರು ಬೆಂಬಲಿಸಿರುವ ಈ ಅಂತರ್ಜಾಲ ಅರ್ಜಿ ಭಾನುವಾರ ೧೧ ಘಂಟೆಯಿಂದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಂಜೆ ೬:೧೫ರ ವೇಳೆಗೆ ೫೦೦೦ಕ್ಕು ಹೆಚ್ಚು ಜನ ಬೆಂಬಲಿಸಿ ಸಹಿ ಹಾಕಿರುವುದು ವಿಶೇಷ. ೧೦ ದಿನಗಳ ಒಳಗೆ ೧೦ ಲಕ್ಷ ಜನರ ಸಹಿ ಹೊಂದುವ ಇರಾದೆ ಹೊಂದಿದ್ದಾರೆ ಅರ್ಜಿದಾರರು.

ಕರ್ನಾಟಕದಲ್ಲಿ ಮಲ್ಟಿಪ್ಲೆಕ್ಸ್ ಗಳು ಅವರ ಅನುಕೂಲಕ್ಕೆ ತಕ್ಕಂತೆ ರೂ ೧೨೦ರಿಂದ ರೂ ೪೫೦ರವರೆಗೆ ದರ ನಿಗದಿಪಡಿಸಿದ್ದಾರೆ ಎಂದು ದೂರುತ್ತಾರೆ ಉದ್ಯಮಿ ಪ್ರಶಾಂತ್ ಸಂಬರಗಿ. ಆದರೆ ಪಕ್ಕದ ರಾಜ್ಯವಾದ ತಮಿಳುನಾಡಿನಲ್ಲಿ, ವಾರದಾದ್ಯಂತ ಟಿಕೆಟ್ ದರ ೧೨೦ಕ್ಕಿಂತಲೂ ಹೆಚ್ಚಾಗದಂತೆ ನೋಡಿಕೊಳ್ಳಲು ಅಲ್ಲಿನ ಸರ್ಕಾರ ನೀತಿ ರೂಪಿಸಿದೆ ಎಂದು ಕೂಡ ಅವರು ತಿಳಿಸಿದ್ದಾರೆ.

ಗ್ರಾಹಕರ ಹಗಲುದರೋಡೆಯನ್ನು ತಪ್ಪಿಸಲು ಕರ್ನಾಟಕ ಸರ್ಕಾರ ಕೂಡ ಇಂತಹ ನೀತಿಯನ್ನು ರೂಪಿಸಬೇಕು ಎಂದು ಅರ್ಜಿ ತಿಳಿಸಿದೆ.

"ಟಿಕೆಟ್ ದರ ಕಡಿತವಾದರೆ, ಹೆಚ್ಚೆಚ್ಚು ಜನ ಮಲ್ಟಿಪ್ಲೆಕ್ಸ್ ಗಳಲ್ಲಿ ಸಿನೆಮಾ ನೋಡುತ್ತಾರೆ. ಆಗ ಆದಾಯ ಕೂಡ ಹೆಚ್ಚುತ್ತದೆ" ಎನ್ನುವ ಸಂಬರಗಿ ಈ ಅರ್ಜಿ ಹಿಡಿದು ಮುಖ್ಯಮಂತ್ರಿಯವರನ್ನು ಭೇಟಿ ಮಾಡುತ್ತೇವೆ ಎಂದಿದ್ದಾರೆ.

ಈ ಮಧ್ಯೆ, ರಾಜೇಂದ್ರ ಸಿಂಗ್ ಬಾಬು, ಗಿರೀಶ್ ಕಾಸರವಳ್ಳಿ, ಭಾರತಿ ವಿಷ್ಣುವರ್ಧನ್, ರಾಘವೇಂದ್ರ ರಾಜಕುಮಾರ್, ರಾಕ್ಲೈನ್ ವೆಂಕಟೇಶ್, ಭಾಷಾ, ಜಯಮಾಲ, ಥಾಮಸ್ ಡಿಸೋಜಾ, ಕೆ ವಿ ಚಂದ್ರಶೇಖರ್ ಮತ್ತು ಗಂಗಾಧರ್ ಮೊದಲಿಯಾರ್ ಅವರುಗಳನ್ನು ಒಳಗೊಂಡ ೧೭ ಜನರ ಸದಸ್ಯರ ಸಮಿತಿ ಸರ್ಕಾರಕ್ಕೆ ಪ್ರಸ್ತಾವನೆ ನೀಡಿದ್ದು, ಟಿಕೆಟ್ ದರಕ್ಕೆ ಗರಿಷ್ಠ ಮಿತಿಯನ್ನು ನಿಗದಿಪಡಿಸಬೇಕು ಹಾಗೂ ಪ್ರೈಮ್ ಸಮಯದಲ್ಲಿ ಪ್ರತಿ ಮಲ್ಟಿಪ್ಲೆಕ್ಸ್ ನಲ್ಲಿ ಎರಡು ಕನ್ನಡ ಸಿನೆಮಾಗಳನ್ನು ಕಡ್ಡಾಯವಾಗಿ ತೋರಿಸಲು ನಿಯಮ ಹೇರುವಂತೆ ಸರ್ಕಾರಕ್ಕೆ ವರದಿ ನೀಡಿದೆ.

"ಇದು ಜಾರಿಯಾದರೆ ಕನ್ನಡ ಸಿನೆಮಾಗಳಿಗೆ ಪುಷ್ಟಿ ನೀಡಲಿದೆ" ಎನ್ನುತ್ತಾರೆ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ರಾಜೇಂದ್ರ ಸಿಂಗ್ ಬಾಬು. "ಕರ್ನಾಟಕದಲ್ಲಿ ಪ್ರತಿವರ್ಷ ಅನ್ಯಭಾಷೆಯ ಸುಮಾರು ೬೫೦ ಸಿನೆಮಾಗಳು ಬಿಡುಗಡೆಯಾಗುತ್ತವೆ ಮತ್ತು ಅವುಗಳು ಸುಮಾರು ೧೦೦೦ ಕೋಟಿ ಹಣ ಗಳಿಸುತ್ತವೆ, ಇದರಿಂದ ಕನ್ನಡ ಸಿನೆಮಾ ನಿರ್ಮಾಪಕರಿಗೆ ತೊಂದರೆಯಾಗುತ್ತಿದೆ" ಎನ್ನುತ್ತಾರೆ.

ಇದು ಮಧ್ಯಂತರ ವರದಿಯಾಗಿದ್ದು "ರಾಜ್ಯದಾದ್ಯಂತ ೧೦೦ ಜನತಾ ಚಿತ್ರಮಂದಿರಗಳ ನಿರ್ಮಾಣಕ್ಕೂ ನಾವು ಮನವಿ ಮಾಡಿದ್ದೇವೆ ಮತ್ತು ಇದಕ್ಕೆ ಮುಖ್ಯಮಂತ್ರಿಗಳು ಒಪ್ಪಿಗೆ ನೀಡಿದ್ದಾರೆ" ಎನ್ನುತ್ತಾರೆ ರಾಜೇಂದ್ರ ಸಿಂಗ್ ಬಾಬು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com