
ಬೆಂಗಳೂರು: ನಟ ಪುನೀತ್ ರಾಜಕುಮಾರ್ ಗಾಯಕನಾಗಿಯೂ ಕನ್ನಡ ಪ್ರೇಕ್ಷಕರ ಮನಗೆದ್ದವರು. ಈ ಅಂಶವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡಿರುವ ಹರ್ಷ, ತಮ್ಮ ನಿರ್ದೇಶನದ ಮುಂದಿನ ಚಿತ್ರದ ಶೀರ್ಷಿಕೆ ಹಾಡನ್ನು ಅವರಿಂದಲೇ ಹಾಡಿಸಿದ್ದಾರೆ.
ಚೇತನ್ ಕುಮಾರ್ ಬರದಿರುವ 'ಜೈ ಮಾರುತಿ ೮೦೦' ಸಿನೆಮಾದ ಶೀರ್ಷಿಕೆ ಹಾಡಿಗೆ ಅರ್ಜುನ್ ಜನ್ಯ ಸಂಗೀತ ನೀಡಿದ್ದು, ಸೋಮವಾರ ಬೆಂಗಳೂರಿನ ಸ್ಟುಡಿಯೋ ಒಂದರಲ್ಲಿ ಪುನೀತ್ ಈ ಹಾಡನ್ನು ಹಾಡಿದ್ದಾರೆ.
"ಇದೇ ಮೊದಲ ಬಾರಿಗೆ ನನ್ನ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಸಿನೆಮಾದಲ್ಲಿ ಪುನೀತ್ ಹಾಡುತ್ತಿದ್ದಾರೆ. ಹಾಡಿನ ಟ್ಯೂನ್ ಕೇಳಿದಾಗ ಪುನೀತ್ ಕೂಡ ಉತ್ಸುಕರಾಗಿದ್ದರು. ಹನುಮಾನ್ ಮೇಲೆ ಅವರು ಕೇಳಿರುವ ಅತ್ಯುತ್ತಮ ಹಾಡುಗಳಲ್ಲಿ ಇದೊಂದು ಎಂಬುದು ಅವರ ಅಭಿಪ್ರಾಯವಾಗಿತ್ತು" ಎಂದು ಭಜರಂಗಿ, ವಜ್ರಕಾಯ ಸಿನೆಮಾದ ನಿರ್ದೇಶಕ ಹೇಳಿದ್ದಾರೆ.
ಬೇಸಿಗೆಗೆ ಸಿನೆಮಾ ಬಿಡುಗಡೆ ಮಾಡಲು ಮುಂದಾಗಿರುವ ಹರ್ಷ, ಕ್ರಿಕೆಟ್ ಜ್ವರದ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಎನ್ನುತ್ತಾರೆ. "ಈ ಸಿನೆಮಾದಲ್ಲಿ ಮಕ್ಕಳ ಮನರಂಜನೆಯನ್ನು ಗುರಿಯಾಗಿಸಿಕೊಂಡಿದ್ದೇವೆ. ಬೇಸಿಗೆ ರಜೆಗೆ ಮಕ್ಕಳಿಗೆ ಇದು ಮುದ ನೀಡಲಿದೆ. ಇಡೀ ಕುಟುಂಬವೇ ಈ ಹಾಸ್ಯ ಚಿತ್ರವನ್ನು ನೋಡಿ ಖುಷಿ ಪಡಬಹುದಾಗಿದೆ" ಎನ್ನುತ್ತಾರೆ ಹರ್ಷ.
ಜಯಣ್ಣ ಕಂಬೈನ್ಸ್ ಸಂಸ್ಥೆ ನಿರ್ಮಿಸಿರುವ ಈ ಸಿನೆಮಾ ಚಿತ್ರೀಕರಣ ನಂತರದ ಕೆಲಸದಲ್ಲಿ ನಿರತವಾಗಿದೆ. ಈ ವಾರದಲ್ಲೇ ಆಡಿಯೋ ಬಿಡುಗಡೆಯನ್ನು ಹಮ್ಮಿಕೊಳ್ಳಲಾಗಿದೆ.
"ಶರಣ್ ಮತ್ತು ಚಿಕ್ಕಣ್ಣ ಜೋಡಿಯನ್ನು ಪ್ರೇಕ್ಷಕರು ಖುಷಿಯಿಂದ ನೋಡಿದಂತೆ, ಜೈ ಮಾರುತಿ ೮೦೦ ನಲ್ಲಿ ಶರಣ್ ಮತ್ತು ಅರುಣ್ ಜೋಡಿಯನ್ನು ಇಷ್ಟ ಪಡಲಿದ್ದಾರೆ. ಇಬ್ಬರೂ ಒಳ್ಳೆಯ ಹಾಸ್ಯ ಪ್ರವೃತ್ತಿಯವರು. ಶೃತಿ ಹರಿಹರನ್ ನಾಯಕ ನಟಿ ಮತ್ತು ಶುಭ ಪೂಂಜಾ ಕೂಡ ವಿಶೇಶ ಪಾತ್ರದಲ್ಲಿ ನಟಿಸಿರುವ್ದು ಈ ಸಿನೆಮಾದ ಮುಖ್ಯಾಂಶಗಳು" ಎನ್ನುತ್ತಾರೆ ನಿರ್ದೇಶಕ ಹರ್ಷ.
Advertisement