
ಬೆಂಗಳೂರು: ಉತ್ತರ ಕರ್ನಾಟಕ ರೈತರ ಮಹತ್ವಾಕಾಂಕ್ಷೆಯ ಕಳಸಾ ಬಂಡೂರಿ ಯೋಜನೆ ಕುರಿತು ಮಹಾಮರಣ' ಹೆಸರಿನ ಸಾಕ್ಷ್ಯಚಿತ್ರವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ತೋರಿಸಲು ಶೀಘ್ರವೇ ಅವರನ್ನು ಭೇಟಿ ಮಾಡುವುದಾಗಿ ನಟಿ ಪೂಜಾ ಗಾಂಧಿ ಹೇಳಿದ್ದಾರೆ.
ಉತ್ತರಕರ್ನಾಟಕ ಭಾಗದ ರೈತರು ನೀರಿಗಾಗಿ ಪರಿತಪಿಸುತ್ತಿರುವ ಸಂಕಟ, ಅವರು ಅನುಭವಿಸುತ್ತಿರುವ ನೋವು, ಎದುರಿಸುತ್ತಿರುವ ಸಂಪೂರ್ಣ ಸಮಸ್ಯೆಯ ಚಿತ್ರಣವನ್ನು ಆ "ಮಹಾಮರಣ' ಸಾಕ್ಷ್ಯಚಿತ್ರದಲ್ಲಿ ಸೆರೆಹಿಡಿದಿದ್ದು, ಪ್ರಧಾನಿ ಅವರ ಮುಂದಿಡುವ ಪ್ರಯತ್ನ ಮಾಡುವುದಾಗಿ ಹೇಳಿದ್ದಾರೆ.
ತುಂಬಾ ಹಿಂದೆಯೇ ಉತ್ತರ ಕರ್ನಾಟಕದ ಹಳ್ಳಿಗಳನ್ನು ಸಂಚರಿಸಿ ರೈತರ ಅಭಿಪ್ರಾಯಗಳನ್ನು ಸಂಗ್ರಹಿಸಿಲಾಗಿದೆ. ದಶಕಗಳಿಂದಲೂ ಕಳಸಾ ಬಂಡೂರಿ ಯೋಜನೆಗಾಗಿ ಆ ಭಾಗದ ರೈತರು ಹೋರಾಟ ನಡೆಸಿದ ಹಾದಿ ಹೇಗಿತ್ತು, ಅವರು ಅನುಭವಿಸಿದ ನೋವೆಷ್ಟು, ಅದಕ್ಕಾಗಿ ಪ್ರಾಣ ತ್ಯಾಗ ಮಾಡಿದ ರೈತರೆಷ್ಟು, ಅವರ ಕುಟುಂಬ ಈಗ ಯಾವ ಸ್ಥಿತಿಯಲ್ಲಿದೆ ಎಂಬಿತ್ಯಾದಿ ಗಂಭೀರ ವಿಷಯಗಳು ಆ ಸಾಕ್ಷ್ಯಚಿತ್ರದಲ್ಲಿ ತೋರಿಸಲಾಗಿದೆ.
ಕಳಸಾಬಂಡೂರಿ ಯೋಜನೆಯ ಬಗ್ಗೆ ರಾಜಕಾರಣಿಗಳಿಗೆ ಮನದಟ್ಟು ಮಾಡಿ, ಸಮಸ್ಯೆ ನಿವಾರಿಸುವಂತೆ ಮನವಿ ಮಾಡುವ ಯೋಚನೆ ಮಾಡಿದರಂತೆ. ಆ ಯೋಚನೆಯೇ "ಮಹಾಮರಣ' ಸಾಕ್ಷ್ಯಚಿತ್ರ. ಈ "ಮಹಾಮರಣ' ಸಾಕ್ಷ್ಯಚಿತ್ರ ಕನ್ನಡ ಹಾಗು ಹಿಂದಿಯಲ್ಲೂ ತಯಾರಾಗಿದೆ. ಮೊದಲು ಪ್ರಧಾನಿ ಮಂತ್ರಿಗಳಿಗೆ ಡಾಕ್ಯುಮೆಂಟರಿಯನ್ನು ತೋರಿಸಿ, ಆ ಬಳಿಕ ನಮ್ಮ ರಾಜ್ಯದ ಸಂಸದರಿಗೂ ತೋರಿಸುವ ಇರಾದೆ ಹೊಂದಿದ್ದಾರೆ.
Advertisement