ಬೆಂಗಳೂರು: ಈ ಮೊದಲೆ ವರದಿಯಾದಂತೆ ದಕ್ಷಿಣ ಭಾರತದ ಖ್ಯಾತ ನಟ ಅರ್ಜುನ್ ಸರ್ಜಾ ತಮ್ಮ ಹಿರಿಯ ಪುತ್ರಿ ಐಶ್ವರ್ಯ ಅರ್ಜುನ್ ಅವರ ಸಿನೆಮಾ ಒಂದನ್ನು ನಿರ್ದೇಶಿಸುವುದಾಗಿ ತಿಳಿದಿತ್ತು. ಈಗ ಆ ಸಿನೆಮಾದ ಚಿತ್ರೀಕರಣ ಈ ತಿಂಗಳಲ್ಲೇ ಪ್ರಾರಂಭವಾಗಲಿದೆಯಂತೆ.
ಅರ್ಜುನ್ ಸರ್ಜಾ ಇನ್ನೂ ಅಧಿಕೃತ ಘೋಷಣೆ ಮಾಡಬೇಕಾಗಿದ್ದರೂ, ವದಂತಿಗಳ ಪ್ರಕಾರ ಮೇ ೨೨ಕ್ಕೆ ಚಲನಚಿತ್ರದ ಮುಹೂರ್ತ ನೆರವೇರಲಿದೆ.
ಇದು ದ್ವಿಭಾಷಾ ಚಲನಚಿತ್ರವಾಗಿದ್ದು ತಮಿಳು ಮತ್ತು ಕನ್ನಡದಲ್ಲಿ ನಿರ್ಮಾಣವಾಗಲಿದೆ. ಕನ್ನಡದಲ್ಲಿ 'ಪ್ರೇಮ ಬರಹ' ಎಂದು ಹೆಸರಿಸಲಾಗಿದೆಯಂತೆ. ಅವರದ್ದೇ ಸಿನೆಮಾ 'ಪ್ರತಾಪ್'ನ, 'ಪ್ರೇಮ ಬರಹ ಕೋಟಿ ತರಹ ಬರೆದರೆ ಮುಗಿಯದ ಕಾವ್ಯ ಇದು' ಎಂಬ ಹಾಡಿನ ಮೊದಲೆರಡು ಪದಗಳಾಗಿವೆ ಶೀರ್ಷಿಕೆ. ಇದು ಅರ್ಜುನ್ ಸರ್ಜಾ ಅವರ ಅತಿ ಮೆಚ್ಚಿನ ಹಾಡಾಗಿದ್ದು, ಅವರ ಕಾಲರ್ ಟ್ಯೂನ್ ಕೂಡ ಅಂತೆ!
ಈಗ ತಾರಾಗಣದಲ್ಲಿ ಕೆಲವು ಬದಲಾವಣೆಗಳಾಗಿವೆ. ಇದಕ್ಕೂ ಮುಂಚಿತವಾಗಿ ಎರಡೂ ಭಾಷೆಗಳಲ್ಲಿ ಚೇತನ್ ನಾಯಕನಟನಾಗಬೇಕಿತ್ತು ಆದರೆ ಈಗ ನಿರ್ದೇಶಕ ಅವರನ್ನು ಬದಲಿಸಿದ್ದಾರೆ. ಪಾತ್ರದ ಪರಿಕಲ್ಪನೆಯಲ್ಲಿ ಬದಲಾವಣೆಯಾಗಿದ್ದರಿಂದ ಚೇತನ್ ಈ ಸಿನೆಮಾದಿಂದ ಹಿಂದೆ ಸರಿದಿದ್ದಾರಂತೆ. ಅವರ ಬದಲಿಗೆ ಚಂದನ್ ಆಯ್ಕೆಯಾಗಿದ್ದಾರೆ. ಇದು ಚಂದನ್ ಗೆ ತಮಿಳಿನಲ್ಲಿ ಪಾದಾರ್ಪಣೆಯಾಗಲಿದ್ದರೆ, ಐಶ್ವರ್ಯಾಗೆ ಕನ್ನಡ ಸಿನೆಮಾದ ಪಾದಾರ್ಪಣೆಯಾಗಲಿದೆ.
ಚಂದನ್ ಕಿರುತೆರೆಯಿಂದ, ಬೆಳ್ಳಿತೆರೆಗೆ ಜಿಗಿದು ಎರಡು ಮೂರು ಸಿನೆಮಾಗಳಲ್ಲಿ ನಟಿಸಿದ್ದರು ಯಾವುದೂ ನಿರೀಕ್ಷಿತ ಯಸಸ್ಸು ತಂದುಕೊಟ್ಟಿಲ್ಲ. ಅರ್ಜುನ್ ಸರ್ಜಾ ಅವರ ಸ್ವಂತ ಬ್ಯಾನರ್ ಶ್ರೀ ರಾಮ್ ಇಂಟರ್ನ್ಯಾಶನಲ್ ನಡಿ ಈ ಸಿನೆಮಾ ನಿರ್ಮಾಣವಾಗುತ್ತಿದೆ.
Advertisement