ಸ್ವತಂತ್ರ ನಿರ್ದೇಶಕನಾಗುವತ್ತ 'ತಿಥಿ' ಕಥೆಗಾರನ ಚಿತ್ತ

ಅಂತರಾಷ್ಟ್ರೀಯ ಮನ್ನಣೆ ಪಡೆದ ರಾಮ್ ರೆಡ್ಡಿ ನಿರ್ದೇಶನದ 'ತಿಥಿ' ಸಿನೆಮಾದ ಸಂಭಾಷಣೆಗೆ ರಾಜ್ಯ ಪ್ರಶಸ್ತಿ ಪಡೆದ ಈರೆ ಗೌಡ ಈಗ ಸ್ವತಂತ್ರ ನಿರ್ದೇಶಕರಾಗಲಿದ್ದಾರೆ.
'ತಿಥಿ' ಕಥೆಗಾರ ಈರೆ ಗೌಡ
'ತಿಥಿ' ಕಥೆಗಾರ ಈರೆ ಗೌಡ

ಬೆಂಗಳೂರು: ಅಂತರಾಷ್ಟ್ರೀಯ ಮನ್ನಣೆ ಪಡೆದ ರಾಮ್ ರೆಡ್ಡಿ ನಿರ್ದೇಶನದ 'ತಿಥಿ' ಸಿನೆಮಾದ ಸಂಭಾಷಣೆಗೆ ರಾಜ್ಯ ಪ್ರಶಸ್ತಿ ಪಡೆದ ಈರೆ ಗೌಡ ಈಗ ಸ್ವತಂತ್ರ ನಿರ್ದೇಶಕರಾಗಲಿದ್ದಾರೆ.

ಅತ್ಯುತ್ತಮ ಪ್ರಾದೇಶಿಕ ಚಿತ್ರ ಎಂದು ರಾಷ್ಟ್ರಪ್ರಶಸ್ತಿಯ ಹೆಗ್ಗಳಿಕೆಗೂ ಪಾತ್ರವಾಗಿದ್ದ 'ತಿಥಿ' ಸಿನೆಮಾದ ಕಥೆ-ಸ್ಕ್ರಿಪ್ಟ್ ಮತ್ತು ಸಂಭಾಷಣೆಯನ್ನು ರಚಿಸಿದ್ದವರು ಈರೆ ಗೌಡ. ಈಗ ಅವರೇ ಸ್ವಂತ ನಿರ್ದೇಶನಕ್ಕೆ ಇಳಿಯುವುದಕ್ಕೆ ಸಿದ್ಧರಾಗಿದ್ದಾರೆ.

"ಮುಂದಿನ ಸಿನೆಮಾಗೆ ಸ್ಕ್ರಿಪ್ಟ್ ಸಿದ್ಧವಿದೆ. ಜುಲೈ ಅಥವಾ ಆಗಸ್ಟ್ ನಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ. ನಾನು 'ತಿಥಿ'ಯಲ್ಲಿ ಎರಡನೇ ಯುನಿಟ್ ನಿರ್ದೇಶಕನಾಗಿ ಕೆಲಸ ಮಾಡಿದ್ದರೂ, ಇದು ನನ್ನ ಸ್ವತಂತ್ರ ಯೋಜನೆಯಾಗಲಿದೆ" ಎನ್ನುತ್ತಾರೆ ಉತ್ಸಾಹಿ ತರುಣ ಈರೆ ಗೌಡ.

ಹೊಸ ಸಿನೆಮಾಗೆ ಇನ್ನೂ ಹೆಸರು ನೀಡಿಲ್ಲವಾದರೂ ಇದು ಸಂಬಂಧಗಳ ಬಗೆಗಿನ ಡ್ರಾಮ. ಮಧ್ಯವಯಸ್ಕ ಗಂಡ ಮತ್ತು ಹೆಂಡತಿಯ ಸುತ್ತ ಸುತ್ತುವೆ ಕಥೆ ಎನ್ನುತ್ತಾರೆ ಚೊಚ್ಚಲ ನಿರ್ದೇಶಕ.

"ನನಗೆ ಕಮರ್ಷಿಯಲ್ ಮತ್ತು ಆರ್ಟ್ ಸಿನೆಮಾಗಳ ನಡುವಿನ ವ್ಯತ್ಯಾಸದ ಬಗ್ಗೆ ಹೆಚ್ಚು ಚಿಂತೆಯಿಲ್ಲ. ನನಗೆ ಈಗ ಅರ್ಥವಾಗಿರುವುದೇನೆಂದರೆ, ಒಳ್ಳೆಯ ಕಥೆಗೆ ಜನ ಬೆನ್ನು ತಟ್ಟಿದ್ದಾರೆ. ಅದನ್ನು ಮುಂದುವರೆಸಬೇಕೆಂದಿದ್ದೇನೆ" ಎನ್ನುತ್ತಾರೆ ಈರೆ ಗೌಡ.

'ತಿಥಿ' ರಾಷ್ಟ್ರ ಮಟ್ಟದಲ್ಲಿ ಬಿಡುಗಡೆಗೆ ಸಿದ್ಧವಾಗುತ್ತಿರುವ ಸಮಯದಲ್ಲೇ, ಈರೆ ಗೌಡ ತಮ್ಮ ಮುಂದಿನ ಸಿನೆಮಾದ ಪಾತ್ರವರ್ಗದ ಆಯ್ಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.

"ಈ ಬಾರಿ ನಾನು ವೃತ್ತಿಪರ ನಟರ ಹುಡುಕಾಟದಲ್ಲಿದ್ದೇನೆ" ಎನ್ನುತ್ತಾರೆ. 'ತಿಥಿ'ಯ ಬಹುತೇಕ ತಾರಾಗಣದಲ್ಲಿ ವೃತ್ತಿಪರ ನಟರಿರಲಿಲ್ಲ ಎಂಬುದು ವಿಶೇಷ.

"ಮುಖ್ಯ ಪಾತ್ರಧಾರಿಗೆ ನುರಿತ ನಟನ ಅವಶ್ಯಕ್ಜತೆ ಇದೆ. ಉಳಿತ ಪಾತ್ರಗಳಿಗೆ ಹೊಸಬರ ಆಯ್ಕೆ ಸಾಧ್ಯತೆ ಇದೆ. ತಂತ್ರಜ್ಞರಿಗೂ ಹುಡುಕಾಟ ನಡೆಸಿದ್ದೇನೆ. ರಾಮ್ ರೆಡ್ಡಿ ನನ್ನ ಬೆಂಬಲಕ್ಕೆ ಇರುತ್ತಾರೆ. ಅಧಿಕೃತವಾಗಿ ಚಾಲನೆ ಸಿಕ್ಕ ಮೇಲೆ ಹೆಚ್ಚಿನ ವಿವರ ನೀಡುತ್ತೆನೆ" ಎನ್ನುತ್ತಾರೆ ಈರೆ ಗೌಡ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com