ಅರ್ಜುನ್ ಸರ್ಜಾ 'ಪ್ರೇಮ ಬರಹ'ಕ್ಕೆ ಚಾಲನೆ
ಅರ್ಜುನ್ ಸರ್ಜಾ 'ಪ್ರೇಮ ಬರಹ'ಕ್ಕೆ ಚಾಲನೆ

ಪುತ್ರಿಯ 'ಪ್ರೇಮ ಬರಹ'ಕ್ಕೆ ಅಪ್ಪನ ಸಾರಥ್ಯ; ಚಿತ್ರಕ್ಕೆ ವೈಭವಯುತ ಚಾಲನೆ

ತಮ್ಮ ಪುತ್ರಿ ಐಶ್ವರ್ಯ ಅರ್ಜುನ್ ಕನ್ನಡ ಪಾದಾರ್ಪಣೆಯ ಚಿತ್ರದ ಚಾಲನೆ ಕಾರ್ಯಕ್ರಮವನ್ನು ನೆನಪಿನಲ್ಲುಳಿಯುವಂತೆ ನೆರವೇರಿಸಿದ್ದಾರೆ ನಟ-ನಿರ್ದೇಶಕ ಅರ್ಜುನ್ ಸರ್ಜಾ.
Published on

ಬೆಂಗಳೂರು: ತಮ್ಮ ಪುತ್ರಿ ಐಶ್ವರ್ಯ ಅರ್ಜುನ್ ಕನ್ನಡ ಪಾದಾರ್ಪಣೆಯ ಚಿತ್ರದ ಚಾಲನೆ ಕಾರ್ಯಕ್ರಮವನ್ನು ನೆನಪಿನಲ್ಲುಳಿಯುವಂತೆ ನೆರವೇರಿಸಿದ್ದಾರೆ ನಟ-ನಿರ್ದೇಶಕ ಅರ್ಜುನ್ ಸರ್ಜಾ.

'ಪ್ರೇಮ ಬರಹ' ಅರ್ಜುನ್ ಸರ್ಜಾ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ೧೫ನೆಯ ಚಿತ್ರ ಮತ್ತು ಕನ್ನಡದಲ್ಲಿ ಎರಡನೆಯದು. ಈ ಸಿನೆಮಾದಲ್ಲಿ ಚಂದನ್ ನಾಯಕ ನಟ. ಖಾಸಗಿ ಹೋಟೆಲ್ ಒಂದರಲ್ಲಿ ನಡೆಸಲಾದ ಈ ವೈಭವಯುತ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ಗಣ್ಯರು ಭಾಗವಹಿಸಿದ್ದರು. ಪಾರ್ವತಮ್ಮ ರಾಜಕುಮಾರ್, ರಾಜೇಶ್ (ಅರ್ಜುನ್ ಅವರ ಮಾವ), ಪತ್ನಿ ಆಶಾ ರಾಣಿ, ಚಿರಂಜೀವಿ ಸರ್ಜಾ, ಧ್ರುವ್ ಸರ್ಜಾ, ಬಿ ಸರೋಜಾ ದೇವಿ, ಭಾರತಿ ವಿಷ್ಣುವರ್ಧನ್, ಶ್ರೀನಾಥ್, ದ್ವಾರಕೀಶ್, ಶಿವರಾಜ್ ಕುಮಾರ್, ಉಪೇಂದ್ರ, ರಾಜೇಂದ್ರ ಸಿಂಗ್ ಬಾಬು, ಲಹರಿ ವೇಲು, ಸಾ ರಾ ಗೋವಿಂದು, ರಾಕ್ ಲೈನ್ ವೆಂಕಟೇಶ್ ಮುಂತಾದವರು ಭಾಗವಹಿಸಿ ತಾರಾಮೆರುಗು ತಂದರು.

ಈ ಅಪರಿಮತ ಪ್ರೀತಿಗೆ ಎಲ್ಲರಿಗೂ ಧನ್ಯವಾದ ತಿಳಿಸಿದ ಅರ್ಜುನ್ "ನನ್ನ ತಂದೆ ಶಕ್ತಿ ಪ್ರಸಾದ್ ಅವರಿಗೋಸ್ಕರ ನೀವೆಲ್ಲರೂ ಇಲ್ಲಿದ್ದೀರಿ. ಕನ್ನಡ ಚಿತ್ರರಂಗದಲ್ಲಿ ನನ್ನ ಮಗಳು ಐಶ್ವರ್ಯಳನ್ನು ಪರಿಚಯಿಸುವುದಕ್ಕೆ ಸಂತಸವಾಗುತ್ತಿದೆ. ಲಂಡನ್ ನಲ್ಲಿ ಫ್ಯಾಶನ್ ವಿನ್ಯಾಸ ಮಾಡಿದ್ದಾಳೆ ಅವಳು ಆದರೆ ಅವಳಿಗೆ ಸಿನೆಮಾಗೆ ಬರಲಿಷ್ಟ. ಅವಳ ಆಸೆಯನ್ನು ಪೂರೈಸುತ್ತಿದ್ದೇನೆ" ಎಂದಿದ್ದಾರೆ.

"ನನ್ನ ತಂದೆ ಮತ್ತು ನನ್ನ ತಾಯಿ ಆಶಾ ರಾಣಿ ಅಲಿಯಾಸ್ ನೀತು ನನಗೆ ಜೀವನದಲ್ಲಿ ಎಲ್ಲವನ್ನೂ ನೀಡಿದ್ದಾರೆ. ಈಗ ಅತ್ಯುತ್ತಮವಾದದ್ದನ್ನು ನೀಡುವ ಸರದಿ ನನ್ನದು" ಎಂದಿದ್ದಾರೆ ಐಶ್ವರ್ಯ.

'ಪ್ರತಾಪ್' ಸಿನೆಮಾದ 'ಪ್ರೇಮ ಬರಹ' ಹಾಡಿಗಾಗಿ ಚಿತ್ರೀಕರಣ ನಡೆಸುವಾಗ ಐಶ್ವರ್ಯ ಜನಿಸಿದ್ದು ಎಂದು ಸುಧಾರಾಣಿ ನೆನಪಿಸಿಕೊಂಡರು. ಈಗ ಅದೇ ಹೆಸರಿನಲ್ಲಿ ಸಿನೆಮಾ ನಿರ್ಮಾಣವಾಗುತ್ತಿದ್ದು, ಕನ್ನಡ ಮತ್ತು ತಮಿಳಿನಲ್ಲಿ ಚಿತ್ರ ಹೊರಬರಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com