
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಮಗ ನಿಖಿಲ್ ಪಾದಾರ್ಪಣೆ ಮಾಡುತ್ತಿರುವ 'ಜಾಗ್ವಾರ್' ಚಿತ್ರ, ಚಿತ್ರೀಕರಣ ಗುಣಮಟ್ಟಕ್ಕೆ ತಾವುದೇ ರಾಜಿ ಮಾಡಿಕೊಳ್ಳದೆ ಮುಂದುವರೆಯುತ್ತಿದೆ.
ಸೂಪರ್ ಹೀರೋ ಕಥಾಹಂದರ ಹೊಂದಿರುವ ಈ ಸಿನೆಮಾವನ್ನು ಅದ್ದೂರಿಯಾಗಿಸುವ ಎಲ್ಲ ಪ್ರಯತ್ನಗಳೂ ಜಾರಿಯಲ್ಲಿವೆ. ಈಗ ಸೂಪರ್ ಹೀರೋ ಅವತಾರದಲ್ಲಿರುವ ನಿಖಿಲ್ ಕುಮಾರ್ ಅವರ ಫೋಟೋ ಲಭ್ಯವಾಗಿದೆ.
ಆದರೆ ಇದರ ಬಗ್ಗೆ ಗುಟ್ಟು ಬಿಚ್ಚಿಡಲು ನಿರಾಕರಿಸುವ ನಟ ನಿಖಿಲ್ "ನನ್ನ ಜೀವನದಲ್ಲಿ ಇಷ್ಟು ಬೆವರು ಸುರಿಸಿದ್ದೆ ಇಲ್ಲ ಆದರೆ ಈಗ ಈ ಬ್ಯಾಗ್, ಮುಖವಾಡ ಮತ್ತು ಕವಚ ಧರಿಸಿ ಹೋರಾಡುತ್ತಿದ್ದೇನೆ" ಎನ್ನುತ್ತಾರೆ.
ಕಾರ್ಯಕಾರಿ ನಿರ್ಮಾಪಕ ಸುನಿಲ್ ಗೌಡ ತಿಳಿಸುವಂತೆ "ಈ ಜಾಗ್ವಾರ್ ಕವಚ ೧೪ ಕೆಜಿ ತೂಗುತ್ತದಂತೆ ಮತ್ತು ದುಬಾರಿ ಬೆಲೆಯಲ್ಲಿ ಸಿದ್ಧಪಡಿಸಿರುವ ಈ ಕವಚವನ್ನು, ಹಾಲಿವುಡ್ ಸಿನೆಮಾಗಳಾದ ಹಾಬಿಟ್, ಟ್ರಾಯ್, ೩೦೦ ಮತ್ತಿತರ ಸಿನೆಮಾಗಳಿಗೆ ಶಸ್ತ್ರಾಸ್ತ್ರಗಳನ್ನು ಸಿದ್ಧಪಡಿಸುವ ನ್ಯೂಜೀಲ್ಯಾಂಡ್ ಮೂಲದ ವೇಟಾ ಕಮ್ಮಟದಲ್ಲಿ ಸಿದ್ಧಪಡಿಸಲಾಗಿದೆ" ಎನ್ನುತ್ತಾರೆ.
ಈ ಸಿನೆಮಾದಲ್ಲಿ ಎರಡು ಅವತಾರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ನಿಖಿಲ್. ಒಂದು ವೈದ್ಯಕೀಯ ವಿದ್ಯಾರ್ಥಿ ಪಾತ್ರವಾದರೆ ಮತ್ತೊಂದು ಜಾಗ್ವಾರ್ ಎಂಬ ಸೂಪರ್ ಹೀರೋ ಪಾತ್ರ. ನಿರ್ದೇಶಕ ಎ ಮಹದೇವ ೧೧೦ ದಿನಗಳ ಚಿತ್ರೀಕರಣ ಮುಗಿಸಿ ಜೂನ್ ೧೦ ಕ್ಕೆ ಬಲ್ಗೇರಿಯಾಗೆ ತೆರಳಿ, ಫೈಟ್ ಸನ್ನಿವೇಶದ ಚಿತ್ರೀಕರಣವನ್ನು ನಡೆಸಲಿದ್ದಾರಂತೆ. ದೀಪ್ತಿ ಸೇಥ್ 'ಜಾಗ್ವಾರ್'ನ ನಾಯಕ ನಟಿ.
ಈ ಮಧ್ಯೆ ಪಿವಿಪಿ ವಿತರಕರು 'ಜಾಗ್ವಾರ್' ನ ತೆಲುಗು ಅವತರಿಣಿಕೆಯ ವಿತರಣೆಗೆ ಆಸಕ್ತಿ ತೋರಿದ್ದಾರತೆ. "ದಕ್ಷಿಣ ಭಾರತದ ಅತಿ ದೊಡ್ಡ ನಿರ್ಮಾಣ ಸಂಸ್ಥೆಯೊಂದಿಗೆ ಸಂಬಂಧ ಒಳ್ಳೆಯದು. ನಮ್ಮ ತಂದೆಯವರನ್ನು ಭೇಟಿ ಮಾಡಿ ಟಾಲಿವುಡ್ ನಲ್ಲಿ ವಿತರಣೆಗೆ ಆಸಕ್ತಿ ತೋರಿದ್ದಾರೆ. ಕೆಲವು ದೃಶಗಳನ್ನು ನೋಡಿ ಮುಂದಿನ ಹೆಜ್ಜೆ ಇಡಲಿದ್ದಾರೆ" ಎನ್ನುವ ನಿಖಿಲ್ "ಪಿವಿಪಿ ನನ್ನ ಜೊತೆ ಮುಂದಿನ ಚಿತ್ರ ಮಾಡಲು ಕೂಡ ಆಸಕ್ತಿ ತೋರಿದ್ದಾರೆ. ಆದರೆ ನಿರ್ಧಾರ ಮಾಡಲು ಇದಿನ್ನೂ ಆರಂಭ. ಸ್ಕ್ರಿಪ್ಟ್ ಸಿದ್ಧವಾಗಿದೆ. ಆದರೆ ನಮ್ಮ ತಂದೆಗೆ ತಮ್ಮ ಬ್ಯಾನರ್ ನಲ್ಲೇ ನಿರ್ಮಿಸಲು ಇಷ್ಟ. ಇದು ಹಣದ ವಿಷಯವಲ್ಲ. ಕಥೆಗೆ ಸಂಬಂಧಿಸಿದ್ದು. ಒಂದೊಂದೇ ಹೆಜ್ಜೆ ಇಡಲಿದ್ದೇನೆ" ಎನ್ನುತ್ತಾರೆ.
Advertisement