ಬೆಂಗಳೂರು: ನಟ ಧನಂಜಯ್ ಅಭಿನಯದ 'ಬದ್ಮಾಶ್' ಕೊನೆಗೂ ನವೆಂಬರ್ 18 ರಂದು ಚಿತ್ರಮಂದಿರಗಳಿಗೆ ಬರಲಿದೆ. ಆಕಾಶ್ ಶ್ರೀವತ್ಸ ಬರೆದು ನಿರ್ದೇಶಿಸಿರುವ ರೊಮ್ಯಾಂಟಿಕ್ ಥ್ರಿಲ್ಲರ್ ಕೆಲವು ದಿನಗಳಿಂದ ಬಿಡುಗಡೆಗೆ ಕಾಯುತ್ತಿತ್ತು.
ನಾಯಕನಟ ಧನಂಜಯ್ ಈ ಸಿನೆಮಾದಲ್ಲಿ 10 ಅವತಾರಗಳಲ್ಲಿ ಕಾಣಿಸಿಕೊಳ್ಳಲಿದ್ದು ಇದು ಸಿನೆಮಾದ ಮುಖ್ಯ ಅಂಶಗಳಲ್ಲಿ ಒಂದಂತೆ. ಸಂಚಿತ ಶೆಟ್ಟಿ ನಾಯಕ ನಟಿಯಾಗಿದ್ದರೆ, ಅಚ್ಯುತ್ ಕುಮಾರ್ ಮತ್ತು ಸುಚೇಂದ್ರ ಪ್ರಸಾದ್ ಪೋಷಕ ನಟರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಇತ್ತೀಚಿಗೆ ಸಲ್ಮಾನ್ ಖಾನ್ 'ಬದ್ಮಾಶ್' ಸಿನೆಮಾದ ಟ್ರೇಲರ್ ನೋಡಿ ಹಿಂದಿಯಲ್ಲಿ ರಿಮೇಕ್ ಮಾಡಲು ಆಸಕ್ತಿ ತೋರಿದ್ದಾರೆ ಎಂಬ ವಿಷಯಕ್ಕೆ ಈ ಸಿನೆಮಾ ಕೆಲವು ದಿನಗಳಿಂದ ಸುದ್ದಿಯಲ್ಲಿತ್ತು.
ಹಿಂದಿನ ವರದಿಗಳ ಪ್ರಕಾರ ಚಿತ್ರತಂಡ ಸಲ್ಮಾನ್ ಖಾನ್ ಅವರಿಗಾಗಿಯೇ ವಿಶೇಷ ಪ್ರದರ್ಶನವೊಂದನ್ನು ಏರ್ಪಡಿಸಿ ಅವರ ಪ್ರತಿಕ್ರಿಯೆ ಪಡೆಯಲಿದ್ದಾರಂತೆ.
ಜುಡಾನ್ ಸ್ಯಾಂಡಿ ಸಿನೆಮಾಗೆ ಸಂಗೀತ ನೀಡಿದ್ದು, ಶ್ರೀಶಾ ಕುಡುವಲ್ಲಿ ಅವರು ಛಾಯಾಗ್ರಹಣ ಮಾಡಿದ್ದಾರೆ.