ಮಾಸ್ತಿಗುಡಿ ದುರಂತ: ಶೂಟಿಂಗ್ ಗಾಗಿ ತಿಪ್ಪಗೊಂಡನಹಳ್ಳಿ ಕೆರೆ ಆರಿಸಿಕೊಂಡಿದ್ದು ಯಾರು?

ರಾಸಾಯನಿಕ ತ್ಯಾಜ್ಯಗಳಿಂದ ತುಂಬಿ ಹೋಗಿರುವ ತಿಪ್ಪಗೊಂಡನಹಳ್ಳಿ ಕೆರೆಯನ್ನು ಮಾಸ್ತಿಗುಡಿ ಸಿನಿಮಾದ ಕ್ಲೈಮ್ಯಾಕ್ಸ್ ಶೂಟಿಂಗ್ ಗಾಗಿ ...
ಅನಿಲ್ ಕುಮಾರ್ ಮತ್ತು ರಾಘವ್
ಅನಿಲ್ ಕುಮಾರ್ ಮತ್ತು ರಾಘವ್

ತಿಪ್ಪಗೊಂಡನಹಳ್ಳಿ: ರಾಸಾಯನಿಕ ತ್ಯಾಜ್ಯಗಳಿಂದ ತುಂಬಿ ಹೋಗಿರುವ ತಿಪ್ಪಗೊಂಡನಹಳ್ಳಿ ಕೆರೆಯನ್ನು ಮಾಸ್ತಿಗುಡಿ ಸಿನಿಮಾದ ಕ್ಲೈಮ್ಯಾಕ್ಸ್ ಶೂಟಿಂಗ್ ಗಾಗಿ ಯಾರು ಆಯ್ದುಕೊಂಡಿದ್ದು ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ.

ಹೆಲಿಕಾಪ್ಟರ್ ನಿಂದ ಜಲಾಶಯಕ್ಕೆ ಬಿದ್ದ ಖಳನಟರಾದ ರಾಘವ್ ಉದಯ್ ಮತ್ತು ಅನಿಲ್ ಕುಮಾರ್ ಅವರ ಶವಗಳಿಗೆ ನಡೆಯುತ್ತಿರುವ ಶೋಧ ಕಾರ್ಯಾಚರಣೆಯನ್ನು ಸ್ಥಳೀಯರು ಗಮನಿಸುತ್ತಿದ್ದಾರೆ.

ಪೀಣ್ಯ ಕೈಗಾರಿಕಾ ವಲಯ ಮತ್ತು ನೆಲಮಂಗಲದ ಕೊಳಚೆ ನೀರು ತಿಪ್ಪಗೊಂಡನಹಳ್ಳಿ ಕೆರೆ ಸೇರುತ್ತದೆ. ಜಲಾಶಯ ಸಂಪೂರ್ಣ ರಾಸಾಯನಿಕ ತ್ಯಾಜ್ಯಗಳಿಂದ ತುಂಬಿ ಹೋಗಿದೆ. ಪರಿಸ್ಥಿತಿ ಹೀಗಿರುವಾಗ ಇಲ್ಲಿ ಶೂಟಿಂಗ್ ಮಾಡಲು ಕೆಟ್ಟ ಐಡಿಯಾ ಕೊಟ್ಟವರು ಯಾರು ಎಂದು ಪ್ರಶ್ನಿಸಿದ್ದಾರೆ. ಒಂದು ವೇಳೆ ಶೂಟಿಂಗ್ ಮಾಡಲೇಬೇಕು ಎಂದಿದ್ದರೇ ಮೊದಲು ರಿಹರ್ಸಲ್ ನಡೆಸಿ  ಶೂಟಿಂಗ್ ಮಾಡಬೇಕಿತ್ತು ಎಂದು ಹೇಳಿದ್ದಾರೆ.

ಇನ್ನು ತಿಪ್ಪಗೊಂಡನಹಳ್ಳಿ ಜಲಾಶಯದ ಪೂರ್ತಿ ಕಳೆ ಬೆಳೆದು ನಿಂತಿದೆ.ಶವ ಶೋಧ ಕಾರ್ಯಾಚರಣೆಗೆ ಈ ಕಳೆ ಪ್ರಮುಖ ಅಡ್ಡಿಯಾಗಿದೆ. ಹೀಗಾಗಿ ರಕ್ಷಣಾ ತಂಡ ಕೆರೆಯಲ್ಲಿ ಆಳವಾಗಿ ಬೆಳೆದಿರುವ ಕಳೆಯನ್ನು ತೆಗೆದು ಹಾಕುತ್ತಿದೆ.

ಏರಿಯಲ್ ಶೂಟಿಂಗ್ ಮಾಡಲು ಸಿನಿಮಾ ತಂಡ ಅನುಮತಿ ಪಡೆದಿರಲಿಲ್ಲ. ಒಂದು ಗಂಟೆ ಅವಧಿಗೆ ಸಿನಿಮಾ ತಂಡ ಹೆಲಿಕಾಪ್ಟರ್ ಬಾಡಿಗೆಗೆ ಪಡೆದಿದ್ದ ಕಾರಣ ಚಿತ್ರತಂಡ ಆತುರಾತುರವಾಗಿ ಶೂಟಿಂಗ್ ಮುಗಿಸಲು ಹವಣಿಸಿದೆ, ಕೆರೆಯ ಒಳಗೆ ಏನೂ ಕಾಣದ ಕಾರಣ ವೃತ್ತಿಪರ ಈಜುಗಾರರಿಗೂ ಈ ಕೆರೆಯಲ್ಲಿ ಈಜಲು ಸಾಧ್ಯವಿಲ್ಲ ಎಂದು ಜಲಾಶಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ದೃಶ್ಯ ಚಿತ್ರೀಕರಿಸುವಾಗ ಸ್ಥಳಿಯ ನುರಿತ ಮೀನುಗಾರರನ್ನಾದರೂ ಸ್ಥಳದಲ್ಲಿ ನಿಯೋಜಿಸಬೇಕಿತ್ತು ಎಂದು ಕೆಲವರು ಅಭಿಪ್ರಾಯ ಪಟ್ಟಿದ್ದಾರೆ.

ಚಿತ್ರತಂಡ ಶೂಟಿಂಗ್ ಮಾಡಲು ಈ ಸ್ಥಳವನ್ನು ಆರಿಸಿಕೊಂಡಿದ್ದು, ನನಗೆ ನಿಜಕ್ಕೂ ಆಘಾತವಾಗಿದೆ. ನಮಗೆ ಈಜು ಗೊತ್ತಿದ್ದರೂ ಒಂದು ಬಾರಿಯೂ ಈ ರಾಸಾಯನಿಕ ಮಿಶ್ರಿತ ನೀರಲ್ಲಿ ಈಜಿಲ್ಲ, ಬೆಳದು ನಿಂತಿರುವ ಕಳೆ ಹಾಗೂ ಹಸಿರು ನೀರು ನೋಡಿದರೆ ತಿಳಿಯುತ್ತದೆ ನೀರು ಎಷ್ಟು ಕಲುಷಿತವಾಗಿದೆ ಎಂದು.ಇಲ್ಲಿ ನಾವು ಕೇವಲ ಮೀನುಗಾರಿಕೆ ಮಾತ್ರ ನಡೆಸುತ್ತೇವೆ ಎಂದು ಇಮ್ರಾನ್ ಎಂಬ ಮೀನುಗಾರನೊಬ್ಬ ತಿಳಿಸಿದ್ದಾನೆ.

ಒಂದು ವರ್ಷದ ಕೆಳಗೆ ಬೆಂಗಳೂರಿನ ಇಬ್ಬರ ವಿದ್ಯಾರ್ಥಿಗಳು ಇಲ್ಲಿ ಸ್ವಿಮ್ ಮಾಡಲು ಹೋಗಿ ಮುಳುಗಿಹೋಗಿದ್ದರು, ಮೂರು ದಿನಗಳ ನಂತರ ಶವ ದೊರೆಯಿತು ಎಂದು ಹೇಳಿದ್ದಾರೆ.

ಕೆರೆಯ ನೀರಿನ ಆಳ ಸುಮಾರು 50 ಅಡಿ ಇದೆ. ಆದರೆ ಒಂದು ಅಡಿ ಕೆಳಗೆ ಹೋದರು ಈಜುಗಾರರಿಗೆ ಏನೊಂದು ಸ್ಪಷ್ಟವಾಗಿ ಕಾಣಿಸದು ಎಂದು ಕರ್ನಾಟಕ ರಾಜ್ಯ ಅಗ್ನಿ ಶಾಮಕ ದಳ ಹಾಗೂ ತುರ್ತು ಸೇವೆಯ ಉಪ ನಿರ್ದೇಶಕ ಎಚ್.ಎಸ್ ವರದರಾಜನ್ ಹೇಳಿದ್ದಾರೆ. ಶವ ಶೋಧ ಕಾರ್ಯಾಚರಣೆಗೆ ಕಳೆ ಮತ್ತು ಹೂಳು ಅಡ್ಡಿಯಾಗಿದೆ, ಜಲಾಶಯದಲ್ಲಿ ನೀರು ಕಡಿಮೆ ಇದೆ. ಆದರೆ ನಿರಲ್ಲಿ ಏನೂ ಕಾಣಿಸದು,  ಕೆರೆಯ ದಡಗಳಲ್ಲಿೂ ನಾವು ಶವಕ್ಕಾಗಿ ಶೋಧ ನಡೆಸಿದ್ದೇವೆ. ಪ್ರಬಲ ಸಾಮರ್ಥ್ಯವುಳ್ಳ ಲೈಟ್ ಗಳನ್ನು ಬಳಸುತ್ತಿದ್ದರು ನೀರೊಳಗೆ ಏನು ಕಾಣಿಸುತ್ತಿಲ್ಲ ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com