ಮಾಸ್ತಿ ಗುಡಿ ದುರಂತ: ನಾಗಶೇಖರ್, ರವಿವರ್ಮಾ ಸೇರಿ ಮೂವರಿಗೆ 14 ದಿನ ನ್ಯಾಯಾಂಗ ಬಂಧನ

ಮಾಸ್ತಿ ಗುಡಿ ದುರಂತ ಪ್ರಕರಣ ಸಂಬಂಧ ಶನಿವಾರ ಪೊಲೀಸರಿಗೆ ಶರಣಾಗಿದ್ದ ಚಿತ್ರದ ನಿರ್ದೇಶಕ ನಾಗಶೇಖರ್ ಹಾಗೂ ಸಾಹಸ....
ನಾಗಶೇಖರ್, ರವಿ ವರ್ಮಾ
ನಾಗಶೇಖರ್, ರವಿ ವರ್ಮಾ
ರಾಮನಗರ: ಮಾಸ್ತಿ ಗುಡಿ ದುರಂತ ಪ್ರಕರಣ ಸಂಬಂಧ ಶನಿವಾರ ಪೊಲೀಸರಿಗೆ ಶರಣಾಗಿದ್ದ ಚಿತ್ರದ ನಿರ್ದೇಶಕ ನಾಗಶೇಖರ್ ಹಾಗೂ ಸಾಹಸ ನಿರ್ದೇಶಕ ರವಿವರ್ಮಾ ಸೇರಿದಂತೆ ಮೂವರು ಆರೋಪಿಗಳನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ, 
ಘಟನೆಯ ನಂತರ ತಲೆಮರೆಸಿಕೊಂಡಿದ್ದ ನಿರ್ದೇಶಕ ನಾಗಶೇಖರ್, ಸಾಹಸ ನಿರ್ದೇಶಕ ರವಿವರ್ಮಾ ಹಾಗೂ ಸಹ ನಿರ್ದೇಶಕ ಸಿದ್ದು ಅವರು ಇಂದು ಮಾಗಡಿ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದರು. ಆರೋಪಿಗಳನ್ನು ವಶಕ್ಕೆ ಪಡೆದು ಪೊಲೀಸರು ಬಳಿಕ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ಮಾಗಡಿ 2ನೇ ಜೆಎಂಎಫ್ ಸಿ ಕೋರ್ಟ್ ಗೆ ಹಾಜರುಪಡಿಸಿದರು.
ವಿಚಾರಣೆ ನಡೆಸಿದ ನ್ಯಾಯಾಧೀಶೆ ರೇಖಾ ಅವರು ಮೂವರು ಆರೋಪಿಗಳಿಗೂ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.
ಮಾಸ್ತಿಗುಡಿ ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣದ ವೇಳೆ ಖಳನಟರಾದ ರಾಘವ್ ಉದಯ್ ಮತ್ತು ಅನಿಲ್ ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿ ಹೆಲಿಕಾಪ್ಟರ್ ನಿಂದ ಹಾರಿ ಪ್ರಾಣ ಕಳೆದುಕೊಂಡಿದ್ದರು. ಈ ದುರಂತ ಸಂಬಂಧ ಚಿತ್ರದ ನಿರ್ಮಾಪಕ ಸುಂದರ್ ಪಿ ಗೌಡ, ನಿರ್ದೇಶಕ ನಾಗಶೇಖರ್, ಸಾಹನ ನಿರ್ದೇಶಕ ರವಿವರ್ಮಾ, ಸಹ ನಿರ್ದೇಶಕ ಸಿದ್ದು, ಯೂನಿಟ್ ಮ್ಯಾನೇಜರ್ ಭರತ್ ವಿರುದ್ಧ ಎಫ್ಐಆರ್ ದಾಖಲಾಗಿತ್ತು. 
ಪ್ರಕರಣದ ಬಗ್ಗೆ ಮಾಸ್ತಿಗುಡಿ ಸಿನಿಮಾ ತಂಡದ ವಿರುದ್ಧ ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ದೂರು(ಈಗ ಪ್ರಕರಣವನ್ನು ಮಾಗಡಿ ಠಾಣೆಗೆ ವರ್ಗಾಯಿಸಲಾಗಿದೆ) ದಾಖಲಾಗಿತ್ತು.
ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಮಾಸ್ತಿಗುಡಿ ಚಿತ್ರದ ನಾಯಕ ನಟ ದುನಿಯಾ ವಿಜಯ್ ಅವರು ತಲೆಮರೆಸಿಕೊಂಡಿದ್ದ ಮೂವರು ಆರೋಪಿಗಳನ್ನು ಬೆಳಗ್ಗೆ ಮಾಗಡಿ ಪೊಲೀಸ್ ಠಾಣೆಗೆ ಕರೆತಂದು ಶರಣಾಗತಿ ಮಾಡಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com