ಬೆಂಗಳೂರು: ನಿರ್ದೇಶಕ ಎಚ್ ಲೋಹಿತ್, ಹಾರರ್ ಸಿನೆಮಾ 'ಮಮ್ಮಿ-ಸೇವ್ ಮಿ' ಸಿನೆಮಾದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲು ಮುಂದಾಗಿದ್ದಾರೆ. ಚೊಚ್ಚಲ ಪ್ರಯತ್ನದಲ್ಲೇ, ಜನರನ್ನು ಭಯಭೀತಗೊಳಿಸುವ ಚಿತ್ರದ ಮೂಲಕ ಯಶಸ್ಸು ಕಾಣಲು ಹವಣಿಸುತ್ತಿದ್ದಾರೆ.
"ಪ್ರತಿಭಾವಂತ ನಟನಿಗೆ ನಿರ್ದೇಶಕ ಸಿಗುವುದು ಸುಲಭ ಆದರೆ ಪ್ರತಿಭಾವಂತ ನಿರ್ದೇಶಕನಿಗೆ ಒಳ್ಳೆಯ ನಟರು ಸಿಗುವುದು ಅಷ್ಟು ಸುಲಭವಲ್ಲ. ಆದರೆ ನಾನು ಹೊಸಬನಾಗಿದ್ದರೂ, ನನ್ನ ಚಿತ್ರದಲ್ಲಿ ಪ್ರಿಯಾಂಕಾ ಉಪೇಂದ್ರ ಮತ್ತು ಯುವಿನಾ ಪಾರ್ಥವಿ ನಟಿಸಲು ಒಪ್ಪಿದ್ದು ನನ್ನ ಅದೃಷ್ಟ" ಎನ್ನುತ್ತಾರೆ ಲೋಹಿತ್.
ಈ ಸಿನೆಮಾ ಡಿಸೆಂಬರ್ ೨ ಕ್ಕೆ ಬಿಡುಗಡೆಯಾಗಲಿದೆ, ಮತ್ತು ಇದರ ತೆಲುಗು ಅವತರಿಣಿಕೆ 'ಚಿನ್ನಾರಿ' ಕೂಡ ಅಂದೇ ಬಿಡುಗಡೆ ಕಾಣಲಿದೆ.
ನಟ ಉಪೇಂದ್ರ ಪತ್ನಿ ಪ್ರಿಯಾಂಕಾ ಜನಪ್ರಿಯ ನಟಿಯಾಗಿರಿವುದರಿಂದ ಹಲವರನ್ನು ಸಿನೆಮಾಗೆ ಸೆಳೆಯಲು ಸುಲಭವಾಗಿದೆ ಎನ್ನುವ ನಿರ್ದೇಶಕ "ಯುವಿನ ಪಾರ್ಥವಿ ಈಗಾಗಲೇ ತೆಲುಗಿನಲ್ಲಿ ಬಾಲನಟಿಯಾಗಿ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿದ್ದಾರೆ. ಇದು ಕೂಡ ನಮಗೆ ವರವಾಗಲಿದೆ. ಹಾಗೆಯೇ 'ಗೋಲಿಸೋಡಾ' ಖ್ಯಾತಿಯ ಮಧುಸೂಧನ್ ಕೂಡ ಇದ್ದಾರೆ. ಈ ತಾರಾಗಣ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರನ್ನು ಸೆಳೆಯಲು ಸಾಧ್ಯವಾಗುತ್ತದೆ" ಎನ್ನುತ್ತಾರೆ ಲೋಹಿತ್.