ಬೆಂಗಳೂರು: 'ದನ ಕಾಯೋನು' ಮೂಲಕ ಯೋಗರಾಜ್ ಭಟ್ ತಮ್ಮ ಫಾರ್ಮ್ ಗೆ ಮರಳಿದ್ದಾರೆ ಎನ್ನುತ್ತಾರೆ ಅವರ ಅಭಿಮಾನಿಗಳು ಮತ್ತು ಸಿನಿ ಪ್ರೇಕ್ಷಕರು. ವಿಜಯ್, ರಂಗಾಯಣ ರಘು, ಬಿರಾದಾರ್, ಪ್ರಿಯಾಮಾಣಿ ಸೇರಿದಂತೆ ಇಡೀ ಚಿತ್ರತಂಡ ಚಿತ್ರದ ಯಶಸ್ಸಿನಿಂದ ಸಂತಸಗೊಂಡಿದ್ದಾರೆ.
ಸಿನಿಮಾದಲ್ಲಿರುವ ಪ್ರಾಣಿಗಳಿಂದ ನಿಮಗೆ ಅದೃಷ್ಟ ಒಲಿಯಿತೋ ಎಂದು ನಿರ್ದೇಶಕರಿಗೆ ಪ್ರಶ್ನಿಸಿದಾಗ "ನಾನು ಅದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿಲ್ಲ ಆದರೆ ನನಗೆ ಪ್ರಾಣಿಗಳೆಂದರೆ ಇಷ್ಟ ಮತ್ತು ಅವುಗಳನ್ನು ನನ್ನ ಸಿನೆಮಾದಲ್ಲಿ ತೋರಿಸಲು ಕೂಡ ಇಷ್ಟ" ಎನ್ನುತ್ತಾರೆ.
ಪ್ರೇಕ್ಷಕರ ಕೋನದಿಂದಲೂ ಚಿಂತಿಸುವ ಯೋಗರಾಜ್ ಭಟ್ ಭಾವನೆಗಳು ಇಂದಿಗೂ ಹೃದಯಗಳನ್ನು ಗೆಲ್ಲುತ್ತವೆ ಮತ್ತು ಅದನ್ನು ನೈಜವಾಗಿ ತೋರಿಸಿದಾಗಲಂತೂ ಎಲ್ಲರು ಒಪ್ಪಿಕೊಳ್ಳುತ್ತಾರೆ ಎನ್ನುತ್ತಾರೆ. "ಹಾಸ್ಯ ಸಂತಸ ನೀಡಿ ಮಾಯವಾಗುತ್ತದೆ ಆದರೆ ಭಾವನೆಗಳು ಹೆಚ್ಚಿನ ಕಾಲ ಉಳಿಯುತ್ತವೆ ಮತ್ತು ಇದು ಸಂಭವಿಸಿದಾಗ ಸಿನೆಮಾಗಳು 'ಕಲ್ಟ್ ಕ್ಲಾಸಿಕ್'ಗಳಾಗುತ್ತವೆ. 'ದನ ಕಾಯೋನು' ಮೂಲಕ ಹೊಸ ಪ್ರಕಾರದ ಸಿನೆಮಾವೊಂದನ್ನು ಮಾಡಿರುವುದಕ್ಕೆ ನನಗೆ ಸಂತಸವಿದೆ ಮತ್ತು ಜನ ಹೊಸ ಬಗೆಯ ಸಿನೆಮಾವನ್ನು ಒಪ್ಪಿದ್ದಾರೆ" ಎನ್ನುತ್ತಾರೆ ನಿರ್ದೇಶಕ.
ದನ ಕಾಯೋನು ಸಿನೆಮಾದ ಮುಂದಿನ ಭಾಗವನ್ನು ನಿರ್ದೇಶಿಸುವ ಸುಳಿವು ನೀಡುವ ಯೋಗರಾಜ್ ಭಟ್ "ಸಾರ್ವಜನಿಕರಿಂದ ಬೇಡಿಕೆ ಬಂದರಷ್ಟೇ ಮುಂದಿನ ಭಾಗ ನಿರ್ದೇಶಿಸಲಿದ್ದೇನೆ, ಸದ್ಯಕ್ಕಂತೂ ಇಲ್ಲ. ಮನುಷ್ಯರು ಮತ್ತು ಪ್ರಾಣಿಗಳ ನಡುವೆ ಭಾವನಾತ್ಮಕ ಸಂಬಂಧವನ್ನು ಬೆಸೆಯುವುದು ಸವಾಲಿನ ಕೆಲಸ. ಆದರೆ ಇದು ನನ್ನ ಇಷ್ಟದ ಕೆಲಸ, ಪ್ರೇಕ್ಷಕರ ನಿರೀಕ್ಷೆಗಳನ್ನು ಪೂರೈಸಲು ಪ್ರಯತ್ನಿಸುತ್ತೇನೆ" ಎನ್ನುತ್ತಾರೆ.