ಕೊಚ್ಚಿ: ಆನೆ ದಂತ ಇಟ್ಟುಕೊಂಡಿದ್ದರು ಎಂಬ ಆರೋಪ ಎದುರಿಸುತ್ತಿರುವ ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ವಿರುದ್ಧ ತನಿಖೆ ನಡೆಸುವಂತೆ ಜಾಗೃತ ಇಲಾಖೆಗೆ ಶನಿವಾರ ನ್ಯಾಯಾಲಯ ಆದೇಶಿಸಿದೆ.
ವನ್ಯಜೀವಿ ಕಾರ್ಯಕರ್ತ ಎ ಎ ಪೌಲೋಸ್ ಎಂಬುವವರು ನೀಡಿರುವ ದೂರಿನ ಮೇರೆಗೆ ಈ ತನಿಖೆ ನಡೆಸಿ ನವೆಂಬರ್ 28 ರೊಳಗೆ ವರದಿ ಸಲ್ಲಿಸುವಂತೆ ಮಾವುಟ್ಟುಪುಳ ಜಾಗೃತಿ ನ್ಯಾಯಾಲಯ ಆದೇಶಿಸಿದೆ.
ಮೋಹನ್ ಲಾಲ್ ಅಲ್ಲದೆ ಹಿಂದಿನ ಅರಣ್ಯ ಸಚಿವ ತಿರುವಂಚೂರ್ ರಾಧಾಕೃಷ್ಣ ಮತ್ತು ಇತರ ಮೂರೂ ಜನರ ಪಾತ್ರವನ್ನು ತನಿಖೆ ಮಾಡಲು ಆದೇಶಿಸಲಾಗಿದೆ.
2011 ರಲ್ಲಿ ಆದಾಯ ತೆರಿಗೆ ಇಲಾಖೆ ನಟನ ಮನೆಯ ಮೇಲೆ ದಾಳಿ ನಡೆಸಿ ಆನೆ ದಂತಗಳನ್ನು ವಶಪಡಿಸಿಕೊಂಡಿದ್ದಾಗ ಈ ಪ್ರಕರಣ ಬೆಳಕಿಗೆ ಬಂದಿತ್ತು.
2012 ರಲ್ಲಿ ಅರಣ್ಯ ಇಲಾಖೆ ಮೋಹನ್ ಲಾಲ್ ಮತ್ತು ಇನ್ನಿಬ್ಬರ ವಿರುದ್ಧ ಪ್ರಕರಣ ದಾಖಲಿಸಿ ಎಫ್ ಐ ಆರ್ ಹಾಕಿದ್ದರು. ಎಫ್ ಐ ಆರ್ ನಲ್ಲಿ ನಟನನ್ನು ಮೊದಲ ಆಪಾದಿತನನ್ನಾಗಿ ಹೆಸರಿಸಲಾಗಿತ್ತು.
ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆ ಕಾಯ್ದೆಯ ಪ್ರಕಾರ ಆನೆ ದಂತಗಳನ್ನು ವಶದಲ್ಲಿಟ್ಟುಕೊಳ್ಳುವುದು ಅಪರಾಧ.