ಸಿನೆಮಾಗಳಲ್ಲಿ ಗಿಮಿಕ್ ಗಳು ಕೆಲಸ ಮಾಡುವುದಿಲ್ಲ: ನಿರ್ದೇಶಕ ಸೂರಿ

ತಮ್ಮ 10 ವರ್ಷಗಳ ವೃತ್ತಿಜೀವನದಲ್ಲಿ ಕೇವಲ 7 ಸಿನೆಮಾಗಳನ್ನು ನಿರ್ದೇಶಿಸಿ ಬಿಡುಗಡೆ ಮಾಡಿದ್ದರು, ಅವುಗಳಿಂದಲೇ ತಮ್ಮನ್ನು ಚಿತ್ರರಂಗದಲ್ಲಿ ವಿಭಿನ್ನ ಎಂದು ಸಾಬೀತುಪಡಿಸಿಕೊಂಡಿದ್ದಾರೆ ಸೂರಿ.
'ದೊಡ್ಮನೆ ಹುಡುಗ' ಸಿನೆಮಾದಲ್ಲಿ ಪುನೀತ್ ರಾಜಕುಮಾರ್ ಮತ್ತು ಅಂಬರೀಷ್
'ದೊಡ್ಮನೆ ಹುಡುಗ' ಸಿನೆಮಾದಲ್ಲಿ ಪುನೀತ್ ರಾಜಕುಮಾರ್ ಮತ್ತು ಅಂಬರೀಷ್
ಬೆಂಗಳೂರು: ತಮ್ಮ 10 ವರ್ಷಗಳ ವೃತ್ತಿಜೀವನದಲ್ಲಿ ಕೇವಲ 7 ಸಿನೆಮಾಗಳನ್ನು ನಿರ್ದೇಶಿಸಿ ಬಿಡುಗಡೆ ಮಾಡಿದ್ದರು, ಅವುಗಳಿಂದಲೇ ತಮ್ಮನ್ನು ಚಿತ್ರರಂಗದಲ್ಲಿ ವಿಭಿನ್ನ ಎಂದು ಸಾಬೀತುಪಡಿಸಿಕೊಂಡಿದ್ದಾರೆ ಸೂರಿ. ಅವರ ಮೊದಲ ಸಿನೆಮಾ 'ದುನಿಯಾ'ದಿಂದಲೂ ಚಿತ್ರರಂಗದಲ್ಲಿ ಛಾಪು ಮೂಡಿಸಿದ ನಿರ್ದೇಶಕ ಇವರು. 
ಈಗ ಅವರ ಬಹುನಿರೀಕ್ಷಿತ ಸಿನೆಮಾ 'ದೊಡ್ಮನೆ ಹುಡುಗ' ಬಿಡುಗಡೆಗೆ ಸಿದ್ಧವಾಗಿದ್ದು, ಜನರನ್ನು ಈ ಸಿನೆಮಾಗೆ ಎಳೆತರುವುದೇನು ಎಂದು ಕೇಳಿದರೆ "ನಾನು ಇದರ ಬಗ್ಗೆ ಹೆಚ್ಚು ಯೋಚಿಸುತ್ತ ಕೂತರೆ ನಾನು ಸಿನೆಮಾಗಳನ್ನು ನಿರ್ದೇಶಿಸುವುದನ್ನು ನಿಲ್ಲಿಸಬೇಕಾಗುತ್ತದೆ. ಈ ಸಿನೆಮಾಗೆ ಮಾಂತ್ರಿಕ ಶಕ್ತಿ ಇದೆ ಎಂದಷ್ಟೇ ಹೇಳಬಲ್ಲೆ" ಎನ್ನುತ್ತಾರೆ ಸೂರಿ. 
"ನಾನು ನನ್ನ ಸಿನೆಮಾಗಳ ವಿಷಯಗಳಲ್ಲಿ ಅತಿ ಹೆಚ್ಚು ನೇರವಂತಿಕೆ ಪ್ರದರ್ಶಿಸಿದ್ದೇನೆ. ಯಾವುದೇ ಗಿಮಿಕ್ ಗಳು ಇರುವುದಿಲ್ಲ. ಬಹುಶಃ ಜನ ಅದನ್ನು ಮೆಚ್ಚಿದ್ದಾರೆ" ಎನ್ನುವ ನಿರ್ದೇಶಕ "ನಾನು ವಿಷಯಕ್ಕೆ ಸೀಮಿತಗೊಳಿಸಿಕೊಳ್ಳುತ್ತೇನೆ, ಅದರ ಸುತ್ತ ವೈಭವೀಕೃತ ಕಟ್ಟಡ ಕಟ್ಟಲು ಹೋಗುವುದಿಲ್ಲ. ನನಗೆ ಒರಿಜಿನಲ್ ಆಗಿರುವುದು ಇಷ್ಟ" ಎನ್ನುತ್ತಾರೆ. 
ಸಿನೆಮಾರಂಗದಲ್ಲಿ ಗಿಮಿಕ್ ಗಳು ಕೆಲಸ ಮಾಡುವುದಿಲ್ಲ ಎನ್ನುವ ಅವರು "ಕಲೆ ಮತ್ತು ಸಿನಿಮಾದಲ್ಲಿನ ನನ್ನ ದಶಕಗಳ ಕಾಲದ ಅನುಭವದಲ್ಲಿ ಹೇಳುವುದಾದರೆ, ಸತ್ಯಾಂಶ ಇಂದಿಗೂ ಉಳಿದುಕೊಳ್ಳುತ್ತದೆ ಇದಕ್ಕೆ ಅತ್ಯುತ್ತಮ ಉದಾಹರಣೆಗಳು, ಕಾಲವನ್ನು ಮೀರಿ ಉಳಿದುಕೊಂಡಿರುವ ಶಿಲ್ಪಗಳು ಮತ್ತು ಕಲಾಕೃತಿಗಳು. ನಾವು ಸತ್ಯದೆಡೆಗೆ ತೆರಳಬೇಕು" ಎನ್ನುವ ಸೂರಿ "ಎಷ್ಟೋ ಬಾರಿ ಜನಪ್ರಿಯತೆ ನಮ್ಮ ತಲೆಯೇರಿದಾಗ, ನಾವು ತಪ್ಪುಗಳನ್ನು ಮಾಡಲು ಪ್ರಾರಂಭಿಸುತ್ತೇವೆ. ಪ್ರೇಕ್ಷಕರು ಸಿನೆಮಾ ನೋಡಿದ ಮೇಲೆ ನನಗೆ ಬೈಯ್ಯದಂತೆ ನಾನು ಎಚ್ಚರ ವಹಿಸುತ್ತೇನೆ. ನಾನು ನನ್ನ ಸಿನೆಮಾಗಳಲ್ಲಿ ಯಾವಾಗಲಾದರೂ ತಪ್ಪು ಮಾಡಿದರೆ, ಅವುಗಳನ್ನು ಮುಂದಿನ ಸಿನೆಮಾಗಳಲ್ಲಿ ಮಾಡದಂತೆ ಎಚ್ಚರವಹಿಸುತ್ತೇನೆ. ಆದರೂ ತಪ್ಪುಗಳಾಗಬಹುದು, ಅದು ಮಾನವ ಸಹಜ ತಪ್ಪುಗಳು. ಇಂದು ಎಷ್ಟೋ ಜನ ನನ್ನಿಂದ ಕಲಿಯಲು ಬರುತ್ತಾರೆ ಆದರೆ ನಾನು ಅವರುಗಳಲ್ಲೇ ಗುರುವನ್ನು ಕಾಣುತ್ತೇನೆ" ಎನ್ನುತ್ತಾರೆ ಸೂರಿ. 
'ದೊಡ್ಮನೆ ಹುಡುಗ' ಸೂರಿಯವರ ಮೊದಲ ಕೌಟುಂಬಿಕ ಡ್ರಾಮಾ ಸಿನೆಮಾ. "ನಾನು ಕಲಾವಿದನಾಗಿ, ಬ್ಯಾಂಕ್ ಮತ್ತು ಅಂಗಡಿಗಳಿಗೆ ಬೋರ್ಡ್ ಬರೆಯುವ ಕೆಲಸ ಮಾಡಿದ್ದೇನೆ. ನಾನು ಮಾಡುತ್ತಿರುವ ಕೆಲಸವನ್ನು ಸರಿಯಾಗಿ ಅರ್ಥ ಮಾಡಿಕೊಂಡು ಅದರಲ್ಲಿ ಮುಳುಗಿಬಿಡುತ್ತೇನೆ. ನಾನು ಹಲವಾರು ಐಡಿಯಾಗಳ ಜೊತೆಗೆ ಪ್ರಯೋಗ ಮಾಡುತ್ತೇನೆ ಮತ್ತು ಅವುಗಳನ್ನು ಮುಂದಿನ ಸಿನೆಮಾದಲ್ಲಿ ಪುನರಾವರ್ತನೆಯಾಗದಂತೆ ನೋಡಿಕೊಳ್ಳುತ್ತೇನೆ. ಉದಾಹರಣೆಗೆ ನನ್ನ ಮುಂದಿನ ಸಿನೆಮಾ 'ಟಗರು' ದೊಡ್ಮನೆಯನ್ನು ಯಾವುದೇ ರೀತಿ ಹೋಲುವುದಿಲ್ಲ. ಇದು ನಾನು ಬಳಸುವ ಕಲಾವಿದರಿಗೂ ಅನ್ವಯವಾಗುತ್ತದೆ" ಎನ್ನುತ್ತಾರೆ. 
ಸಿಕ್ಸ್ ಪ್ಯಾಕ್ ಸೂರಿ 
'ದೊಡ್ಮನೆ ಹುಡುಗ' ಚಿತ್ರೀಕರಣದ ವೇಳೆ ಜಿಮ್ ಗೆ ಹೋಗಲು ಪ್ರಾರಂಭಿಸಿದ ಸೂರಿ ಈಗ ಸಿಕ್ಸ್ ಪ್ಯಾಕ್ ದೇಹವನ್ನು ಹುರಿಗೊಳಿಸುತ್ತಿದ್ದಾರಂತೆ. "ಇದು ಮಾಡಿದ್ದು ವೈಯಕ್ತಿಕ ಕಾರಣಗಳಿಗಾಗಿ. ಇದಕ್ಕೂ ಸಿನಿಮಾಗಳಿಗೂ ಸಂಬಂಧ ಇಲ್ಲ. ನನಗೆ ಕುಟುಂಬವಿದೆ ಮತ್ತು ಮಗ ಇದ್ದಾನೆ. ನನ್ನ ದಿನಚರಿಯನ್ನು ಬದಲಾಯಿಸಕೊಳ್ಳಬೇಕೆನಿಸಿತು. ನಾನು ಒಂಭತ್ತು  ವರ್ಷದ ಮಗುವಿದ್ದಾಗ ತಂದೆಯನ್ನು ಕಳೆದುಕೊಂಡೆ. ಅವರ ಪ್ರೀತಿಯನ್ನು ಕಳೆದುಕೊಂಡೆ. ನನ್ನ ಮಗನಿಗೆ ಆ ಅನುಭವ ಬೇಡ. ಆದುದರಿಂದ ವ್ಯಾಯಾಮ ನನ್ನನ್ನು ಆರೋಗ್ಯದಿಂದಿರಿಸಲು ಸಹಕರಿಸುತ್ತದೆ. ನನ್ನ ದೊಡ್ಡ ಆಕಾರದ ಬಟ್ಟೆಗಳನ್ನು ಎಸೆದಿದ್ದೇನೆ. ಈಗ ಯಾವುದೇ ಅಂಗಡಿಗೆ ಹೋಗಿ, ಮ್ಯಾನಿಕ್ವೆನ್ (ಉಡುಗೆ ಬೊಂಬೆಗಳು) ತೊಟ್ಟಿರುವ ಬಟ್ಟೆಗಳನ್ನು ಆರಾಮವಾಗಿ ಧರಿಸಬಹುದು" ಎನ್ನುತ್ತಾರೆ ಸೂರಿ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com