ಚೆನ್ನೈ: 'ಎಂ ಎಸ್ ಧೋನಿ: ದ ಆನ್ ಟೋಲ್ಡ್ ಸ್ಟೋರಿ' ಸಿನೆಮಾ ನೋಡಿ ಅವಾಕ್ಕಾದ ತಮಿಳು ಸಿನೆಮಾ ನಟ ಸೂರ್ಯ ಪ್ರಖ್ಯಾತ ಕ್ರಿಕೆಟರ್ ಪಾತ್ರ ನಿರ್ವಹಿಸಿರುವ ಸುಶಾಂತ್ ಸಿಂಗ್ ರಜಪೂತ್ ಅವರ ನಟನೆ ಅದ್ಭುತ ಎಂದಿದ್ದಾರೆ.
"ಈಗಷ್ಟೇ 'ಎಂ ಎಸ್ ಧೋನಿ: ದ ಆನ್ ಟೋಲ್ಡ್ ಸ್ಟೋರಿ' ಸಿನೆಮಾ ವೀಕ್ಷಿಸಿದೆ. ಸುಶಾಂತ್ ಅಥವಾ ಧೋನಿ; ನೀವು ಇವುಗಳಿಲ್ಲಿ ನಿಜವಾಗಿಯೂ ಯಾರು? ಅದ್ಭುತ ಪ್ರದರ್ಶನ" ಎಂದು ಸೂರ್ಯ ಟ್ವೀಟ್ ಮಾಡಿದ್ದಾರೆ.
ನೀರಜ್ ಪಾಂಡೆ ನಿರ್ದೇಶನದ ಈ ಸಿನೆಮಾ ಭಾರತೀಯ ಒಂದು ದಿನದ ಕ್ರಿಕೆಟ್ ತಂಡದ ನಾಯಕ ಎಂ ಎಸ್ ಧೋನಿ ಜೀವನಾಧಾರಿತವಾದದ್ದು.
ಸಿನೆಮಾ ಬಗ್ಗೆ ಇನ್ನು ಹೆಚ್ಚು ಪ್ರಶಂಸೆಯ ಮಳೆಗರೆದಿರುವ ಸೂರ್ಯ "ದಂತಕತೆ ಮಹಿ ಅವರಿಗೆ ಸಲಾಂ ಮತ್ತು ಇಡೀ ಚಿತ್ರ ತಂಡದ ಕೆಲಸಕ್ಕೆ. ಕಷ್ಟಕರವಾದ ಬಯೋಪಿಕ್ ಅದ್ಭುತವಾಗಿ ಮಾಡಿದ್ದೀರಿ" ಎಂದು ಬರೆದಿದ್ದಾರೆ.
ಶುಕ್ರವಾರ ಬಿಡುಗಡೆಯಾದ ಈ ಸಿನೆಮಾ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಮೆಚ್ಚುಗೆಯ ಮಾತುಗಳನ್ನು ಪಡೆದಿದೆ.