ಬೆಂಗಳೂರು: ಸಿನೆಮಾರಂಗದಲ್ಲಿ ನಟರ ನಡುವೆ ಕೋಳಿ ಜಗಳಿಗೇನು ಕಮ್ಮಿಯಿಲ್ಲ. ಈ ಜಗಳಗಳು ಕೆಲವೊಮ್ಮೆ ಅವರ ಸಿನೆಮಾಗಳ ಪ್ರಚಾರಕ್ಕೆ ಸಹಕಾರಿಯಾದರೆ ಮತ್ತೆ ಕೆಲವೊಮ್ಮೆ ಮಾರಕವಾಗಿರುವ ಉದಾಹರಣೆಗಳಿವೆ. ಆದರೆ ನಟರ ನಡುವಿನ ಅನ್ಯೋನ್ಯತೆ-ಗೆಳೆತನ ತುಸು ಅಪರೂಪವೇ!
ಆದರೆ ವಿಭಿನ್ನ ಪಾತ್ರಗಳಲ್ಲಿ ತೊಡಗಿಸಿಕೊಂಡು ಚಲನಶೀಲವಾಗಿರುವ ಈ ಇಬ್ಬರು ಸ್ಯಾಂಡಲ್ ವುಡ್ ನಟಿಯರು, ತಮ್ಮ ವೃತ್ತಿ ಜೀವನ ಮತ್ತು ವೈಯಕ್ತಿಕ ಜೀವನವನ್ನು ಆಪ್ತವಾಗಿ ಮತ್ತು ಆತ್ಮೀಯವಾಗಿ ಕಟ್ಟಿಕೊಂಡಿದ್ದಾರೆ.
ನಟಿ ಶ್ರುತಿ ಹರಿಹರನ್ ಮತ್ತು ಶ್ರದ್ಧಾ ಶ್ರೀನಾಥ್ ಒಟ್ಟಿಗೆ ಸಾಕಷ್ಟು ಸಮಯವನ್ನು ಕಳೆಯುತ್ತಿದ್ದಾರೆ. ಈಗ ಇವರಿಬ್ಬರು 'ಉರ್ವಿ' ಚಿತ್ರದ ಪ್ರಚಾರಕ್ಕಾಗಿ ಸದ್ಯಕ್ಕೆ ಯುರೋಪ್ ದೇಶಗಳನ್ನು ಒಟ್ಟಿಗೆ ಸುತ್ತುತ್ತಿದ್ದಾರೆ.
ಅಂದಹಾಗೆ ಈಗ ಈ ಇಬ್ಬರು ಗಾಂಧಿನಗರ ಬೆಸ್ಟ್ ಫ್ರೆಂಡ್ ಗಳು ಕೂಡ. ಯು-ಟರ್ನ್ ದಿನಗಳಲ್ಲಿ ಇಬ್ಬರಿಗೂ ಪರಸ್ಪರ ಪರಿಚಯವಾಗಿ ಜೀವನದ ಗೆಳತಿಯರಾಗಿದ್ದಾರೆ. ಶ್ರದ್ಧಾ ನನಗೆ ಕಿರಿಯ ಸಹೋದರಿ ಇದ್ದಹಾಗೆ ಎನ್ನುವ ಶ್ರುತಿ, ತಮ್ಮ ಹೆಚ್ಚಿನ ಸಮಯವನ್ನು ಅವರ ಜೊತೆಗೆ ಕಳೆಯಲು ಇಚ್ಛಿಸುತ್ತೇನೆ ಎನ್ನುತ್ತಾರೆ.
"ಅವರು ಮಣಿರತ್ನಂ ಸಿನೆಮಾದಲ್ಲಿ ನಟಿಸುತ್ತಿರುವುದು ಮತ್ತು ಮಾಧವನ್ ಎದುರು ನಟಿಸುತ್ತಿರುವುದು ನನಗೆ ಸಂತಸ ತಂದಿದೆ ಮತ್ತು ನನ್ನ ಕನಸುಗಳು ಅವರ ಮೂಲಕ ಸಾಕಾರವಾಗುತ್ತಿರುವುದನ್ನು ಕಾಣುತ್ತಿದ್ದೇನೆ" ಎನ್ನುತ್ತಾರೆ ಶ್ರುತಿ.
"ಶ್ರುತಿ ನನ್ನ ಪ್ರಯಾಣದಲ್ಲಿ ಆತ್ಮೀಯ ಮತ್ತು ಅತ್ಯುತ್ತಮ ಗೆಳತಿ. ನಾವಿಬ್ಬರು ಹೊಸ ಹೊಸ ಜಾಗಗಳನ್ನು ಒಟ್ಟಿಗೆ ಹುಡುಕಿ ಸುತ್ತುತ್ತಿದ್ದೇವೆ" ಎನ್ನುವ ಶ್ರದ್ಧಾ ಜುಲೈನಲ್ಲಿ ಮತ್ತೊಂದು ಪ್ರವಾಸಕ್ಕೆ ಒಟ್ಟಿಗೆ ತೆರಳುವುದಾಗಿ ತಿಳಿಸುತ್ತಾರೆ.