
ಬೆಂಗಳೂರು: ನೀರ್ ದೋಸೆ ಸಿನಿಮಾ ಬಿಡುಗಡೆಯಾಗಿ ಹೆಚ್ಚು ಕಮ್ಮಿ ನಾಲ್ಕು ತಿಂಗಳುಗಳೇ ಕಳೆದಿವೆ. ಚಿತ್ರದ ನಾಯಕಿ ಹರಿಪ್ರಿಯಾ ಅವರ ಮುಂದಿನ ಸಿನಿಮಾ ಬಗ್ಗೆ ಕೇಳಿದಾಗ ಸದ್ಯ ಯಾವುದೇ ದೊಡ್ಡ ಸಿನಿಮಾಗಳಿಗೆ ಸಹಿ ಹಾಕಲು ನಾನು ಸಿದ್ದವಿಲ್ಲ ಎಂದು ಹೇಳಿದ್ದಾರೆ.
ನೀರ್ ದೋಸೆ ಸಿನಿಮಾ ನಂತರ, ಹರಿಪ್ರಿಯಾಗೆ ಅದೇ ರೀತಿಯ ಪಾತ್ರದ ಹಲವು ಆಫರ್ ಗಳು ಹುಡುಕಿಕೊಂಡು ಬಂದಿವೆ, ನೀರ್ ದೋಸೆ ಸಿನಿಮಾದಲ್ಲಿ ನನಗೆ ಕಥೆ ಇಷ್ಟವಾಯಿತು, ಹಾಗಾಗಿ ಆ ಪಾತ್ರಕ್ಕೆ ಒಪ್ಪಿಕೊಂಡೆ. ಹಣಕ್ಕಾಗಿ ನಾನು ಆ ಸಿನಿಮಾ ಮಾಡಲಿಲ್ಲ, ಮುಂದೆ ಆ ರೀತಿಯ ಪಾತ್ರ ಮಾಡಲು ನಾನು ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
ನೀರ್ ದೋಸೆಯಲ್ಲಿನ ಕುಮುದಾ ಪಾತ್ರಕ್ಕೆ ನನ್ನ ಅಭಿನಯದ ಮೂಲಕ ಸೂಕ್ತ ನ್ಯಾಯಒದಗಿಸಿಕೊಟ್ಟಿದ್ದೇನೆ.ಆ ಚಿತ್ರಕ ಪಾತ್ರ ಕಲಾವಿದೆಯೊಬ್ಬಳ ಮೇಲಿನ ಪ್ರಯೋಗವಾಗಿತ್ತು, ನಾನು ಮುಂದೆ ಆ ರೀತಿಯ ಸಿನಿಮಾ ಮಾಡುವುದಿಲ್ಲವೆಂದು ಹರಿಪ್ರಿಯಾ ಸ್ಪಷ್ಟಪಡಿಸಿದ್ದಾರೆ.
ನಾನು ಸಿನಿಮಾ ರಂಗ ಪ್ರವೇಶಿಸಿದ ಆರಂಭದಲ್ಲಿ ಹಲವು ರೀತಿಯ ಪಾತ್ರಗಳಲ್ಲಿ ನಟಿಸಿದ್ದೇನೆ,. ವೇಶ್ಯೆ ಮತ್ತು ನಕ್ಸಲೈಟ್ ರೀತಿಯ ಪಾತ್ರಗಳಲ್ಲು ಅಭಿನಯಿಸಿದ್ದೇನೆ. ಇನ್ನು ಮುಂದೆ ನಾನು ಕೇವಲ ಒಳ್ಳೆಯ ಪಾತ್ರಗಳನ್ನಷ್ಟೆ ಮಾಡಬೇಕೆಂದು ನಿರ್ಧರಿಸಿರುವುದಾಗಿ ಅವರು ತಿಳಿಸಿದ್ದಾರೆ.
ಉತ್ತಮ ಅವಕಾಶಗಳಿಗಾಗಿ ಕಾಯುವುದು ಸಮಯ ವ್ಯರ್ಥ ಎಂದು ನಾನಂದುಕೊಂಡಿದ್ದೆ. ಕೆಟ್ಟ ಪ್ರಾಜೆಕ್ಟ್ ಗಳಿಗೆ ಸಹಿ ಮಾಡಿ ನಂತರ ಪಶ್ಚಾತ್ತಾಪ ಪಡುವ ಬದಲು ಕಾಯುವುದೇ ಸರಿ ಎಂದು ನಂತರ ನನಗೆ ನಾನೇ ಹೇಳಿಕೊಂಡೆ ಎಂದು ಹರಿಪ್ರಿಯಾ ತಿಳಿಸಿದ್ದಾರೆ.
ತಮ್ಮ 16 ನೇ ವಯಸ್ಸಿಗೆ ಸ್ಯಾಂಡಲ್ ವುಡ್ ಪ್ರವೇಶಿಸಿದ ಹರಿಪ್ರಿಯಾ ಕಳೆದ 18 ವರ್ಷಗಳಿಂದ ಸಿನಿಮಾ ರಂಗದಲ್ಲಿದ್ದಾರೆ. ದಶಕದ ನಂತರ ನಾನು ನನ್ನ ನಿಲುವು ಬದಲಿಸಿಕೊಂಡಿದ್ದೇನೆ. ನನ್ನ ಪಾತ್ರಗಳಲ್ಲಿ ಬದಲಾವಣೆ ಮಾಡಿಕೊಳ್ಳಬೇಕು ಎಂದು ನನಗೆ ಅನ್ನಿಸಿದೆ ಎಂದು ಹೇಳಿದ್ದಾರೆ. ನನಗೆ ಒಳ್ಳೆಯ ಸಿನಿಮಾದಲ್ಲಿ ನಟಿಸಲು ಅವಕಾಶ ಸಿಗದಿದ್ದರೂ ಪರವಾಗಿಲ್ಲ, ಕೆಟ್ಟ ಪ್ರಾಜೆಕ್ಟ್ ನ ಭಾಗವಾಗಲು ನಾನು ಇಷ್ಟ ಪಡುವುದಿಲ್ಲ, ನಾನು ಕೆಟ್ಟ ರೀತಿಯಲ್ಲಿ ಸಿನಿಮಾ ರಂಗದಿಂದ ಎಕ್ಸಿಟ್ ಆಗುವುದಿಲ್ಲ ಎಂದು ಹರಿಪ್ರಿಯಾ ಹೇಳಿದ್ದಾರೆ.
ಯಾವುದೇ ಗಾಡ್ ಫಾದರ್ ಇಲ್ಲದೇ ಯಾರದೇ ಬೆಂಬಲವಿಲ್ಲದೇ ನಾನು ಕನ್ನಡ ಸಿನಿಮಾ ರಂಗಕ್ಕೆ ಬಂದ ನಾನು ಮಾಡಿರುವ ಸಾಧನೆ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ಅವರು ಹೇಳಿದ್ದಾರೆ.
Advertisement