ಮೊದಲ ದಿನವೇ ೪೭ ಕೋಟಿ ರೂ ಗಳಿಕೆ ಕಂಡ ಚಿರಂಜೀವಿ 'ಖೈದಿ ನಂ. ೧೫೦'
ತೆಲುಗು ಮೆಗಾಸ್ಟಾರ್ ಚಿರಂಜೀವಿ ಅವರ ೧೫೦ ನೆಯ ಚಿತ್ರ, 'ಖೈದಿ ನಂ. ೧೫೦' ಬಿಡುಗಡೆಯಾದ ಮೊದಲ ದಿನವೇ ಜಾಗತಿಕವಾಗಿ ಬಾಕ್ಸ್ ಆಫಿಸ್ ನಲ್ಲಿ ೪೭ ಕೋಟಿ ರೂ ಗಳಿಕೆ ಕಂಡಿದೆ ಎಂದು ತಿಳಿಸಿದ್ದಾರೆ
ಚೆನ್ನೈ: ತೆಲುಗು ಮೆಗಾಸ್ಟಾರ್ ಚಿರಂಜೀವಿ ಅವರ ೧೫೦ ನೆಯ ಚಿತ್ರ, 'ಖೈದಿ ನಂ. ೧೫೦' ಬಿಡುಗಡೆಯಾದ ಮೊದಲ ದಿನವೇ ಜಾಗತಿಕವಾಗಿ ಬಾಕ್ಸ್ ಆಫಿಸ್ ನಲ್ಲಿ ೪೭ ಕೋಟಿ ರೂ ಗಳಿಕೆ ಕಂಡಿದೆ ಎಂದು ತಿಳಿಸಿದ್ದಾರೆ ನಿರ್ಮಾಪಕ ಅಲ್ಲು ಅರವಿಂದ್.
"ಮೊದಲ ದಿನವೇ, ಸಿನೆಮಾ ಜಾಗತಿಕವಾಗಿ ೪೭.೭ ಕೋಟಿ ರೂ ಗಳಿಕೆ ಕಂಡಿದೆ. ಚಿರಂಜೀವಿ ಚಿತ್ರರಂಗಕ್ಕೆ ಹಿಂದಿರುಗಲು ಜನ ಕಾತರದಿಂದ ಕಾಯುತ್ತಿದ್ದರು ಎಂಬುದಕ್ಕೆ ಈ ಸಂಖ್ಯೆಗಳೇ ಸಾಕ್ಷಿ. ಎರಡು ತೆಲುಗು ರಾಜ್ಯಗಳಲ್ಲೇ ಸಿನೆಮಾ ೩೦ ಕೋಟಿ ಗಳಿಸಿದೆ" ಎಂದು ಅರವಿಂದ್ ಹೇಳಿದ್ದಾರೆ.
ವಿ ವಿ ವಿನಾಯಕ್ ನಿರ್ದೇಶಿಸಿರುವ ಈ ಸಿನೆಮಾ ಬುಧವಾರ ಬಿಡುಗಡೆಯಾಗಿತ್ತು ಮತ್ತು ಪ್ರೇಕ್ಷಕರಿಂದ ಧನಾತ್ಮಕ ಪ್ರತಿಕ್ರಿಯೆ ಗಳಿಸಿತ್ತು.
ಮಾರುಕಟ್ಟೆ ಪಂಡಿತ ತ್ರಿನಾಥ್ ಪ್ರಕಾರ, 'ಬಾಹುಬಲಿ' ಸಿನೆಮಾ ನಂತರ ಇಂತಹ ಅದ್ಭುತ ಪ್ರತಿಕ್ರಿಯೆ ಸಿಕ್ಕಿರುವ ಎರಡನೇ ತೆಲುಗು ಸಿನೆಮಾ ಇದು ಎಂದಿದ್ದಾರೆ.
"ಸಿನೆಮಾ ಇಷ್ಟು ಭರ್ಜರಿಯಾಗಿ ಪ್ರದರ್ಶನ ಕಾಣಬಹುದು ಎಂದು ಯಾರು ನಂಬಿರಲಿಲ್ಲ. ನನ್ನ ಅಭಿಪ್ರಾಯದಂತೆ ಚಿತ್ರ ನಿರ್ಮಾಪಕರು ಕೂಡ ಇದನ್ನು ಊಹಿಸಿರಲಿಕ್ಕಿಲ್ಲ. ಇವು ಅದ್ಭುತ ಸಂಖ್ಯೆಗಳು ಮತ್ತು ವಾರಾಂತ್ಯದಲ್ಲಿ ಹಬ್ಬ ಬರುವುದರಿಂದ ಇನ್ನು ಉತ್ತಮಗೊಳ್ಳುವ ನಿರೀಕ್ಷೆಯಿದೆ. 'ಬಾಹುಬಲಿ' ಸಿನೆಮಾ ನಂತರ ಇಂತಹ ಅದ್ಭುತ ಪ್ರತಿಕ್ರಿಯೆ ಸಿಕ್ಕಿರುವ ಎರಡನೇ ತೆಲುಗು ಸಿನೆಮಾ ಇದು" ಎಂದು ತ್ರಿನಾಥ್ ಹೇಳಿದ್ದಾರೆ.
ಅಮೆರಿಕಾದಲ್ಲಿ ಕೂಡ 'ಖೈದಿ ನಂ. ೧೫೦' ಉತ್ತಮ ಗಳಿಕೆ ಕಂಡಿದೆ. ಇದು ತಮಿಳು ಬ್ಲಾಕ್ ಬಸ್ಟರ್ ಸಿನೆಮಾ 'ಕತ್ತಿ'ಯ ರಿಮೇಕ್.