ತನೀಶ್ ಅಲ್ಲಾಡಿ
ಸಿನಿಮಾ ಸುದ್ದಿ
ಟಾಲಿವುಡ್ ಡ್ರಗ್ ಹಗರಣ: ಎಸ್ ಐಟಿಯಿಂದ ನಟ ತನೀಶ್ ಅಲ್ಲಾಡಿ ವಿಚಾರಣೆ
ಟಾಲಿವುಡ್ ಡ್ರಗ್ಸ್ ಹಗರಣ ಸಂಬಂಧ ತೆಲಂಗಾಣ ಅಬಕಾರಿ ಇಲಾಖೆ ಎಸ್ ಐ ಟಿ ಅಧಿಕಾರಿಗಳ ಮುಂದೆ ನಟ ತನೀಶ್ ...
ಹೈದರಾಬಾದ್: ಈ ತಿಂಗಳ ಆರಂಭದಲ್ಲಿ ಬೆಳಕಿಗೆ ಬಂದ ಟಾಲಿವುಡ್ ಡ್ರಗ್ಸ್ ಹಗರಣ ಸಂಬಂಧ ತೆಲಂಗಾಣ ಅಬಕಾರಿ ಇಲಾಖೆ ಎಸ್ ಐ ಟಿ ಅಧಿಕಾರಿಗಳ ಮುಂದೆ ನಟ ತನೀಶ್ ಅಲ್ಲಾಡಿ ಹಾಜರಾದರು.
ಬಾಲ ನಟನಾಗಿ ವೃತ್ತಿ ಜೀವನ ಆರಂಭಿಸಿದ ತನೀಶ್ ಇದುವರೆಗೂ 19 ಸಿನಿಮಾಗಳಲ್ಲಿ ನಟಿಸಿದ್ದಾರೆ. ಇಂದು ಬೆಳಗ್ಗೆ ಎಸ್ ಐಟಿ ಅಧಿಕಾರಿಗಳ ಮುಂದೆ ಹಾಜರಾಗಿದ್ದರು.
ಡ್ರಗ್ಸ್ ಪ್ರಕರಣ ಸಂಬಂಧ ಇದುವರೆಗೂ ಎಸ್ ಐಟಿ ಅಧಿಕಾರಿಗಳು ತೆಲುಗು ಸಿನಿಮಾ ರಂಗದ ನಟರು ಹಾಗೂ ನಿರ್ದೇಶಕರು ಸೇರಿದಂತೆ ಒಟ್ಟು 12 ಮಂದಿಯನ್ನು ವಿಚಾರಣೆಗೊಳಪಡಿಸಿದ್ದಾರೆ.
ಜುಲೈ 2 ರಂದು ಸ್ಪೋಟಗೊಂಡ ಟಾಲಿವುಡ್ ಡ್ರಗ್ ಮಾಫಿಯ ಅಲ್ಲೋಲಕಲ್ಲೋ ಸೃಷ್ಟಿಸಿತ್ತು, ತೆಲುಗು ಸಿನಿಮಾ ರಂಗದ ಘಟಾನುಘಟಿ ಕಲಾವಿದರ ಹೆಸರುಗಳು ಕೇಸ್ ಜೊತೆ ಥಳುಕು ಹಾಕಿಕೊಂಡಿದೆ. ಕಲಾವಿದರಿಗೆ ಡ್ರಗ್ ಕೇಸ್ ಸಂಬಂಧ ಲಿಂಕ್ ಇರುವ ಶಂಕೆಯಲ್ಲಿ ಎಸ್ ಐಟಿ ವಿಚಾರಣೆ ನಡೆಸುತ್ತಿದೆ.
ಜುಲೈ 19 ರಂದು ಎಸ್ ಐಟಿ ಅಧಿಕಾರಿಗಳು ನಿರ್ದೇಶಕ ಪುರಿ ಜಗನ್ನಾಥ್, ಛಾಯಾಗ್ರಾಹಕ ಶ್ಯಾಮ್ ಕೆ. ನಾಯ್ಡು, ನಟರಾದ ಪಿ. ಸುಬ್ಬರಾಜು, ಕರುಣ್ ಕುಮಾರ್, ಪಿ. ನವದೀಪ್ ಮತ್ತು ರವಿತೇಜಾ, ನಟಿಯರಾದ ಚಾರ್ಮಿ ಕೌರ್ ಮತ್ತು ಮುಮೈತ್ ಖಾನ್ ಸೇರಿದಂತೆ ಹಲವರನ್ನು ವಿಚಾರಣೆಗೊಳಪಡಿಸಿತ್ತು.
ಎಸ್ ಐಟಿ ನಡೆಸುತ್ತಿರುವ ಎಲ್ಲಾ ವಿಚಾರಣೆಗಳನ್ನು ವಿಡಿಯೋ ಮಾಡುತ್ತಿದ್ದು, ವಿಚಾರಣೆಗೊಳಪಟ್ಟವರ, ದೇಹದ ರಕ್ತ, ಕೂದಲು ಮತ್ತು ಉಗುರುಗಳ ಮಾದರಿ ಸಂಗ್ರಹಿಸಿ ಪರೀಕ್ಷೆಗೊಳಪಡಿಸಲಾಗಿದೆ. ಹೈದರಾಬಾದ್ ವಿವಿಧ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದ ಅಮೆರಿಕಾ ,ಡಚ್ ಪ್ರಜೆಗಳು ಸೇರಿದಂತೆ ಒಟ್ಟು 20 ಮಂದಿಯನ್ನು ಬಂಧಿಸಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ