ಬೆಂಗಳೂರು: ತೆರೆಯ ಮೇಲಿನ ಕೆಮಿಸ್ಟ್ರಿ ಕೇವಲ ಹೀರೊ ಮತ್ತು ಹೀರೋಯಿನ್ ಗಳಿಗೆ ಸೀಮಿತವಾಗಬೇಕಿಲ್ಲ ಮತ್ತು ಸಿನೆಮಾದ ಯಶಸ್ಸಿಗೆ ವಿವಿಧ ನಟರ ನಡುವಿನ ತೆರೆಯ ಮೇಲಿನ ಬಾಂಧವ್ಯ ಕೂಡ ಅಷ್ಟೇ ಪ್ರಮುಖ ಪಾತ್ರ ವಹಿಸುತ್ತದೆ. ಕನ್ನಡ ಚಿತ್ರರಂಗದಲ್ಲಿ ಅಂತಹ ಒಂದು ಉತ್ತಮ ಉದಾಹರಣೆ ನಟ ಶರಣ್ ಮತ್ತು ಚಿಕ್ಕಣ್ಣನವರದ್ದು.
ನಂದಕಿಶೋರ್ ನಿರ್ದೇಶನದ 'ಅಧ್ಯಕ್ಷ' ಸಿನೆಮಾದಲ್ಲಿ ಇವರಿಬ್ಬರು ಒಟ್ಟಿಗೆ ನಟಿಸಿದ್ದು ಜನಕ್ಕೆ ಬಹಳ ಮೆಚ್ಚುಗೆಯಾಗಿತ್ತು ಮತ್ತು ಈಗ ಅದೇ ಮಾಂತ್ರಿಕತೆಯನ್ನು ಈ ಇಬ್ಬರೂ ನಟಿಸಿರುವ 'ರಾಜ್-ವಿಷ್ಣು'ವಿನಲ್ಲಿ ಕಾಣಲು ಕಾತರಿಸುತ್ತಿದ್ದಾರೆ.
ಮತ್ತೊಂದು ಆಸಕ್ತಿದಾಯಕ ವಿಷಯದಲ್ಲಿ ಈ ಇಬ್ಬರ ಜೋಡಿ ಮುಂದಿನ ಎರಡು ಸಿನೆಮಾಗಳಿಗೆ ಮುಂದುವರೆಯಲಿದೆ. ಈ ಸಿನೆಮಾಗಳನ್ನು ಅನಿಲ್ ಮತ್ತು ಯೋಗಾನಂದ್ ಮುದ್ದಣ್ಣ ನಿರ್ದೇಶಿಸಲಿದ್ದಾರೆ.
ಈಮಧ್ಯೆ 'ರಾಜ್-ವಿಷ್ಣು' ನಿರ್ಮಾಪಕರು ಚಿತ್ರದ ಆಡಿಯೋವನ್ನು ಚಿಕ್ಕಣ್ಣನವರ ಹುಟ್ಟುಹಬ್ಬದ ದಿನವಾದ ಇಂದು ಬಿಡುಗಡೆ ಮಾಡಲು ಮುಂದಾಗಿದ್ದಾರೆ. ರಾಮು ನಿರ್ಮಿಸಿರುವ ಮತ್ತು ಕೆ ಮಾದೇಶ್ ನಿರ್ದೇಶನದ ಈ ಚಿತ್ರ ತಮಿಳು ಸಿನೆಮಾ 'ರಜನಿ ಮುರುಗನ್'ನಿಂದ ಸ್ಫೂರ್ತಿ ಪಡೆದಿದೆ.