ಬೆಂಗಳೂರು: 'ಜೂಮ್' ಸಿನೆಮಾದ ನಂತರ ನಿರ್ದೇಶಕ ಪ್ರಶಾಂತ್ ರಾಜ್ ಮತ್ತು ನಟ ಗಣೇಶ್ ಮತ್ತೆ 'ಆರೆಂಜ್'ಗೆ ಒಂದಾಗಿದ್ದಾರೆ. ಚಿತ್ರೀಕರಣಕ್ಕೆ ಅಣಿಯಾಗಿರುವ ಗಣೇಶ್ ಅವರ ಮುಂದಿನ ಸಿನೆಮಾ ಇದಾಗಿದೆ. ಚಿತ್ರೀಕರಣ ಪ್ರಾರಂಭಕ್ಕೂ ಮುಂಚೆ, ಜುಲೈ ೨ ರ ಗಣೇಶ್ ಹುಟ್ಟುಹಬ್ಬದ ಮಧ್ಯರಾತ್ರಿಯಂದು ಶೀರ್ಷಿಕೆ ಬಿಡುಗಡೆ ಮಾಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ ನಿರ್ದೇಶಕ.
ಇಂದಿಗೆ ಇಂತಹ ಕಾರ್ಯಕ್ರಮ ಅವಶ್ಯಕವಾಗಿದೆ ಎಂದು ವಿವರಿಸುವ ಪ್ರಶಾಂತ್ "ಇದು ಪ್ರಮುಖ ಏಕೆಂದರೆ, ಶೀರ್ಷಿಕೆ ಮೂಲಕ ಸಿನೆಮಾದ ಮೊದಲ ನೋಟವನ್ನು ಪರಿಚಯಿಸುತ್ತದೆ ಮತ್ತು ಶೀರ್ಷೆಕೆಯ ವಿನ್ಯಾಸ ಅತ್ಯುತ್ತಮವಾಗದೇ ಹೋದರೆ ಅದರ ವಿಶಿಷ್ಟತೆಯೇ ಕಳೆದುಹೋಗುತ್ತದೆ. ನಾನು ಯಾವ ಅಂಶವನ್ನು ಕಡೆಗಣಿಸಲಾರೆ" ಎನ್ನುತ್ತಾರೆ.
ಈಗ ಜೋಶುವಾ ಶ್ರೀಧರ್ ಸಂಗೀತ ನಿರ್ದೇಶಕನಾಗಿ ಚಿತ್ರತಂಡ ಸೇರಿರುವುದಕ್ಕೆ ಸಂತಸ ವ್ಯಕ್ತಪಡಿಸುವ ಪ್ರಶಾಂತ್ "ನನ್ನ ಸಿನೆಮಾಗಳಾದ 'ಲವ್ ಗುರು' ಮತ್ತು 'ಗಾನ ಬಜಾನ'ಗಳಿಗೆ ಅವರು ಸಂಗೀತದ ಮೂಲಕ ಮಾಂತ್ರಿಕ ಸ್ಪರ್ಶ ನೀಡಿದ್ದರು. ಅವರು ಪುನೀತ್ ರಾಜಕುಮಾರ್ ಅವರ 'ಅರಸು', ಯಶ್ ಅವರ 'ಗೂಗ್ಲಿ' ಸಿನಿಮಾಗಳಿಗೂ ಸಂಗೀತ ನೀಡಿದ್ದಾರೆ. ಹಲವು ದಿನಗಳ ನಂತರ ಶ್ರೀಧರ್ ಕನ್ನಡಕ್ಕೆ ಮರಳಿದ್ದು, ಅವರ ಜೊತೆಗೆ ಕೆಲಸ ಮಾಡಲು ಹರ್ಷನಾಗಿದ್ದೇನೆ" ಎನ್ನುತ್ತಾರೆ. 'ಆರೆಂಜ್'ನಲ್ಲಿ ಐದು ಹಾಡುಗಳು ಇರುವುದಾಗಿಯೂ ಅವರು ತಿಳಿಸುತ್ತಾರೆ.
ಈ ಸಿನೆಮಾಗೆ ಸಂತೋಷ್ ರೈ ಪಾತಾಜೆ ಛಾಯಾಗ್ರಹಣ ಮಾಡಲಿದ್ದು, ರವಿವರ್ಮಾ ಅವರ ಸಾಹಸ ನಿರ್ದೇಶನ ಇರಲಿದೆ. ಈಮಧ್ಯೆ ಪ್ರಶಾಂತ್, ಪ್ರೇಮ್ ಅಭಿನಯದ 'ದಳಪತಿ' ಬಿಡುಗಡೆಗೆ ಸಿದ್ಧಾರಾಗಿದ್ದಾರೆ. "ಆಡಿಯೋ ಬಿಡುಗಡೆ ಜುಲೈ ೨೪ ರಂದು ನಡೆಯಲಿದ್ದು, ಸಿನೆಮಾ ಆಗಸ್ಟ್ ಗೆ ಬಿಡುಗಡೆಯಾಗಲಿದೆ" ಎನ್ನುತ್ತಾರೆ.