ಕನ್ನಡ ಚಿತ್ರರಂಗವನ್ನು ಉತ್ತುಂಗಕ್ಕೇರಿಸಿದ ತಾರಾನಟಿಯರು; ಮಹಿಳಾ ದಿನಾಚರಣೆ ವಿಶೇಷ

ಕನ್ನಡ ಚಿತ್ರರಂಗ ಮಹಿಳೆಯರಿಗೆ ಉನ್ನತ ಸ್ಥಾನ ಮತ್ತು ಗೌರವಗಳನ್ನು ನೀಡುತ್ತಲೇ ಬಂದಿದೆ. ಹಾಗೆಯೇ ಕನ್ನಡ ಚಿತ್ರರಂಗದ ಉನ್ನತಿಗೂ ಈ ನಟಿಯರು ಮತ್ತು ಇತರ ಮಹಿಳಾ ತಂತ್ರಜ್ಞರ ಕಾಣಿಕೆ ಅಪಾರ.
ಸುಧಾರಾಣಿ-ತಾರಾ-ಜಯಮಾಲಾ-ಭಾರತಿ
ಸುಧಾರಾಣಿ-ತಾರಾ-ಜಯಮಾಲಾ-ಭಾರತಿ
ಬೆಂಗಳೂರು: ಕನ್ನಡ ಚಿತ್ರರಂಗ ಮಹಿಳೆಯರಿಗೆ ಉನ್ನತ ಸ್ಥಾನ ಮತ್ತು ಗೌರವಗಳನ್ನು ನೀಡುತ್ತಲೇ ಬಂದಿದೆ. ಹಾಗೆಯೇ ಕನ್ನಡ ಚಿತ್ರರಂಗದ ಉನ್ನತಿಗೂ ಈ ನಟಿಯರು ಮತ್ತು ಇತರ ಮಹಿಳಾ ತಂತ್ರಜ್ಞರ ಕಾಣಿಕೆ ಅಪಾರ. ಸರೋಜಾ ದೇವಿ, ಜಯಂತಿ, ಸಾವುಕಾರ್ ಜಾನಕಿ, ಭಾರತಿ ವಿಷ್ಣುವರ್ಧನ್, ಕಲ್ಪನಾ, ಆರತಿ, ಮಂಜುಳಾ ಹೀಗೆ ಕನ್ನಡ ಚಿತ್ರರಂಗದ ಕೀರ್ತಿ ಪತಾಕೆಯನ್ನು ೬೦, ೭೦ ಮತ್ತು ೮೦ರ ದಶಕದಲ್ಲಿ ಎತ್ತಿಹಿಡಿದ ನಟಿಯರ ಸಂಖ್ಯೆ ಬೆಳೆಯುತ್ತಲೇ ಹೋಗುತ್ತದೆ. ಇಂದಿಗೂ ಕೂಡ ಈ ಚಿತ್ರರಂಗದಲ್ಲಿ ಅಸ್ಮಿತೆಯನ್ನು ಉಳಿಸಿಕೊಂಡು ಬಂದಿರುವ ನಟಿಯರು, ತಮ್ಮ ನಿರಂತರ ಚಟುವಟಿಕೆಯಿಂದ ಅದನ್ನು ಬೆಳಗುತ್ತಲೇ ಇದ್ದಾರೆ. ಮಹಿಳಾ ದಿನಾಚರಣೆಯ ಪ್ರಯುಕ್ತ ಅವರಲ್ಲಿ ಕೆಲವರು ಸಿಟಿ ಎಕ್ಸ್ಪ್ರೆಸ್ ನೊಂದಿಗೆ ಮಾತಿಗೆ ಸಿಕ್ಕಿದ್ದು ಹೀಗೆ. 
ಸುಧಾರಾಣಿ:
ಸುಧಾರಾಣಿಯವರು ತಮ್ಮ ಸಿನೆಮಾ ವೃತ್ತಿಜೀವನವನ್ನು ಎರಡು ಭಾಗಗಳಾಗಿ ವಿಂಗಡಿಸಿಕೊಂಡರೆ, ಮೊದಲ ಭಾಗ ನಾಯಕ ನಟಿಯಾಗಿ ನಟಿಸಿದ ಶಕ್ತಿಯುತ ಸಂದೇಶಗಳನ್ನು ಹೊತ್ತ ಸಿನೆಮಾಗಳಲ್ಲಿ ನಟಿಸಿ ಮನಸೂರೆಗೊಂಡವರು. ವಿಧವೆ ಮರುವಿವಾಹದ ವಿಷಯ ಹೊಂದಿದ್ದ 'ಅವನೇ ನನ್ನ ಗಂಡ' ಆಗಲಿ ದೇವದಾಸಿ ಪದ್ಧತಿಯ 'ಅರಗಿಣಿ' ಇಂತಹ ಜನಮಾನಸದಲ್ಲಿ ಉಳಿಯುವ ಸಿನೆಮಾಗಳು. ಕುಟುಂಬಗಳಿಗಾಗಿ ಎಲ್ಲವನ್ನು ತ್ಯಾಗ ಮಾಡುವ ಮಾಮೂಲಿ ಕಥೆಗಳಾಗಿರಲಿಲ್ಲ ಅವು. ಈಗ ಅಂತಹುದ್ದೇ ಸಿನೆಮಾ 'ಮೂಡಲ ಸೀಮೇಲಿ'ಯಲ್ಲಿ ನಟಿಸುತ್ತಿರುವ ನಟಿ "ಇದು ಅತ್ಯುತ್ತಮ ವಿಷಯದ ಚಿತ್ರ" ಎನ್ನುತ್ತಾರೆ. "ಸಾಮಾಜಿಕವಾಗಿ ಬದ್ಧತೆಯಿರುವ ಸಿನೆಮಾಗಳಲ್ಲಿಯೇ ನಾನು ನಟಿಸುತ್ತಾ ಬಂದಿದ್ದೇನೆ" ಎನ್ನುತ್ತಾರೆ. 
ತುಮಕೂರಿನ ಪಾವಗಡದಲ್ಲಿ ಇನ್ನು ಜೀವಂತವಾಗಿರುವ ಸಾಮಾಜಿಕ ಪದ್ಧತಿಯ ಬಗೆಗಿನ ಸಿನೆಮಾ 'ಮೂಡಲ ಸೀಮೇಲಿ'.  ಇದು "ಬಿದಿರು ಹೆಣೆಯುವವರ ಕಥೆ" ಎನ್ನುತ್ತಾರೆ. "ಇಂದಿಗೂ ಕೂಡ ಪುರುಷರು ಆ ಸಮುದಾಯದಲ್ಲಿ ಮಹಿಳೆಯರನ್ನು ಮಾರಾಟ ಮಾಡಬಹುದು. ಪತ್ನಿ, ಪುತ್ರಿ ಅಥವಾ ಸೊಸೆಯರನ್ನು ಕೂಡ. ೨೦೧೫ ರಲ್ಲಿ ನಡೆದ ಘಟನೆಯನ್ನು ಆದರಿಸಿದ ಈ ಸಿನೆಮಾವನ್ನು ಶಿವರುದ್ರಯ್ಯ ನಿರ್ದೇಶಿಸುತ್ತಿದ್ದಾರೆ. ಈ ಪಾತ್ರ ನನ್ನ ಹೃದಯಕ್ಕೆ ಹತ್ತಿರ. ಸಿನೆಮಾ ಸಂಪೂರ್ಣಗೊಂಡಿದ್ದು, ರಾಷ್ಟ್ರೀಯ ಪ್ರಶಸ್ತಿ ಮತ್ತು ಪನೋರಮಾ ಉತ್ಸವಗಳಿಗೆ ಕಳುಹಿಸಲಾಗಿದೆ" ಎನ್ನುತ್ತಾರೆ ಸುಧಾರಾಣಿ. 
ತಾರಾ
ಇತರ ನಟಿಯರಿಗಿಂತಲೂ ಹೆಚ್ಚು ಕಾದಂಬರಿ ಆಧಾರಿತ ಸಿನೆಮಾಗಳಲ್ಲಿ ನಟಿಸಿರುವ ನಟಿ ತಾರಾ, ತಮ್ಮಿಂದ ಇನ್ನು ಅತ್ಯುತ್ತಮವಾದದ್ದು ಬರಬೇಕಿದೆ ಎಂದು ನಂಬಿದ್ದಾರೆ. ತಮ್ಮ ಅಭಿನಯದ ಒಂದು ಅತ್ಯುತ್ತಮ ಪಾತ್ರವನ್ನು ಆಯ್ಕೆ ಮಾಡಿಕೊಳ್ಳುವುದು ಸುಲಭದ ಮಾತಲ್ಲ ಎನ್ನುವ ನಟಿ ತಾರಾ "ಕೆಲವುಗಳನ್ನು ಹೆಸರಿಸಬಹುದಾದರೆ ಮುನ್ನುಡಿ, ಹಸೀನಾ, ಕೋಟೆ, ಸೈನೈಡ್ ಮತ್ತು ಕಾನೂರು ಹೆಗ್ಗಡತಿ ಸಿನೆಮಾಗಳಲ್ಲಿ ಅತ್ಯುತ್ತಮ ಪಾತ್ರಗಳು ನನಗೆ ಬಂದಿವೆ. ಅವೆಲ್ಲಾವೂ ಮಹಿಳಾ ಕೇಂದ್ರಿತ ಚಿತ್ರಗಳಾಗಿದ್ದು ಅತ್ಯುತ್ತಮ ಸಂದೇಶಗಳು ಇದ್ದಂತವು" ಎನ್ನುತ್ತಾರೆ. 
"ಇತ್ತೀಚಿಗೆ ನಾನು ಸಾವಿತ್ರಿಭಾಯಿ ಫುಲೆ ಅವರ ಬಯೋಪಿಕ್ ನಲ್ಲಿ ನಿರತಳಾಗಿದ್ದೇನೆ... ಈ ಪಾತ್ರ ಸಿಕ್ಕಿರುವುದು ನನಗೆ ಗೌರವ ಸಿಕ್ಕಂತೆ. ಇತ್ತೀಚಿನ ದಿನಗಳಲ್ಲಿ ಸಿಕ್ಕ ಅತ್ಯುತ್ತಮ ಪಾತ್ರ ಇದು" ಎನ್ನುತ್ತಾರೆ ತಾರಾ. ಮಹಿಳಾ ಶಿಕ್ಷಣ, ಜಾತಿ ನಿರ್ಮೂಲನೆಗಾಗಿ ಅವಿರತವಾಗಿ ಶ್ರಮಿಸಿದ ೧೮ ನೇ ಶತಮಾನದ ಮಹಿಳೆ ಸವಿತ್ರಾಭಾಯಿ ಫುಲೆ. "ಆ ಕಾಲದ ಮದರ್ ತೆರೆಸಾ ಅವರು" ಎನ್ನುವ ತಾರಾ "ಗಾಂಧೀ ಬಿಟ್ಟರೆ ಮಹಾತ್ಮಾ ಎಂದು ಕರೆಸಿಕೊಂಡ ಮತ್ತೊಬ್ಬ ಶ್ರೇಷ್ಠ ವ್ಯಕಿ ಜ್ಯೋತಿಭಾಯಿ ಫುಲೆ ಬಗ್ಗೆ ನಾವು ಸಿನೆಮಾ ಮಾಡಬೇಕೆಂದಿದ್ದೆವು. ಮತ್ತು ಅವರು ತಮ್ಮ ಕೆಲಸವನ್ನು ಸಾವಿತ್ರಿ ಅವರಿಗೆ ಅರ್ಪಣೆ ಮಾಡಿದ್ದಾರೆ" ಎನ್ನುತ್ತಾರೆ ತಾರಾ. 
ಭಾರತಿ
೬೦ ರ ದಶಕದಲ್ಲಿ ನಟನೆಯ ವೃತ್ತಿ ಜೀವನ ಪ್ರಾರಂಭಿಸಿದ ಭಾರತಿ ವಿಷ್ಣುವರ್ಧನ್ ದಕ್ಷಿಣ ಭಾರತದ ಎಲ್ಲ ಚಿತ್ರರಂಗಗಳಲ್ಲಿ ಮತ್ತು ಬಾಲಿವುಡ್ ನಲ್ಲಿಯೂ ಹೆಸರು ಮಾಡಿದವರು. ಹಲವಾರು ಕ್ಲಾಸಿಕ್ ಸಿನೆಮಾಗಳನ್ನು ನೀಡಿರುವ ನಟಿ ಈಗಲೂ ಕೆಲವು ಸಿನೆಮಾಗಳಲ್ಲಿ ನಟಿಸಿ ನಟನೆಯಲ್ಲಿ ನಿರತರಾಗಿದ್ದಾರೆ. ಅತ್ಯುತ್ತಮ ಪಾತ್ರಗಳು ನನಗೆ ಸಿಕ್ಕಿದ್ದು ಅದೃಷ್ಟ ಎನ್ನುವ ನಟಿ 'ಭಾಗ್ಯ ಜ್ಯೋತಿ' ಸಿನೆಮಾದಲ್ಲಿ ಹರಿಜನ ಪಾತ್ರ ನನ್ನ ಮೆಚ್ಚಿನದು ಎನ್ನುತ್ತಾರೆ. ಈ ಸಿನೆಮಾ ಬಹಳ ಮೆಚ್ಚುಗೆ ಗಳಿಸಿತ್ತು. "ಈ ಸಿನೆಮಾವನ್ನು ಕೆ ಎಸ್ ಎಲ್ ಸ್ವಾಮಿ ನಿರ್ದೇಶಿಸಿದ್ದರು. ದೇವಸ್ಥಾನಕ್ಕೆ ಮತ್ತಿತರ ಸ್ಥಳಗಳಿಗೆ ಪ್ರವೇಶವಿಲ್ಲದ ಅಸ್ಪೃಶ್ಯ ಹರಿಜನಳ ಪಾತ್ರ ನನ್ನದಾಗಿತ್ತು... ಇಂದಿಗೆ ಪರಿಸ್ಥಿತಿ ಬದಲಾಗಿರುವುದಕ್ಕೆ ನನಗೆ ಸಂತಸವಿದೆ. ಮಹಿಳೆಯರು ಶಕ್ತಿಯುತವಾಗಿದ್ದಾರೆ ಮತ್ತು ಸ್ವತಂತ್ರವಾಗಿದ್ದಾರೆ ಮತ್ತು ಭೂಮಿಯ ಮೇಲೆ ಏನು ಬೇಕಾದರೂ ಸಾಧಿಸಲು ದೇವರು ಅವರಿಗೆ ಶಕ್ತಿ ನೀಡಿದ್ದಾನೆ" ಎನ್ನುತ್ತಾರೆ ಭಾರತಿ.
ಜಯಮಾಲಾ
'ದಾರಿ ತಪ್ಪಿದ ಮಗ' ಸಿನೆಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ವೃತ್ತಿಜೀವನ ಪ್ರಾರಂಭಿಸಿದ ನಟಿ ಜಯಮಾಲಾ ಬಹುಶ್ರುತ ವ್ಯಕ್ತಿತ್ವ. ಸುಮಾರು ೫೦ ಕ್ಕೂ ಹೆಚ್ಚು ಸಿನೆಮಾಗಳಲ್ಲಿ ನಟಿಸಿರುವ ನಟಿ, 'ತಾಯಿ ಸಾಹೇಬ'ದಲ್ಲಿನ ಪಾತ್ರ ಅಚ್ಚುಮೆಚ್ಚು ಎನ್ನುತ್ತಾರೆ. ಈ ಸಿನೆಮಾ ರಾಷ್ಟ್ರೀಯ ತೀರ್ಪುಗಾರರ ವಿಶೇಷ ಪ್ರಶಸ್ತಿ ಗೆದ್ದರೆ, ಜಯಮಾಲಾ ಅವರಿಗೆ ಅತ್ಯತ್ತಮ ನಟಿ ರಾಜ್ಯ ಪ್ರಶಸ್ತಿ ಸಿಕ್ಕಿತ್ತು. "ಗಿರೀಶ್ ಕಾಸರವಳ್ಳಿ ನಿರ್ದೇಶನದ 'ತಾಯಿ ಸಾಹೇಬ' ಸಿನೆಮಾ ಹಲವು ಪದರುಗಳಲ್ಲಿ ನಡೆಯುತ್ತದೆ" ಎನ್ನುವ ಜಯಮಾಲಾ "ಸ್ವತಂತ್ರ ಪೂರ್ವ ಮತ್ತು ನಂತರದ ಸಾಮಾಜಿಕ ಕಾಲಘಟ್ಟದ ಬದಲಾವಣೆಯನ್ನು ಸಿನೆಮಾ ಹಿಡಿದಿಡುತ್ತದೆ. ನರ್ಮದಾ ತಾಯಿ ಪಾತ್ರ ಸವಾಲಿನದಾಗಿತ್ತು" ಎನ್ನುತ್ತಾರೆ ಜಯಮಾಲ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com