ಯೇಸುದಾಸ್ ಜೊತೆಗೆ ನಿರ್ದೇಶಕ ಮಂಜುನಾಥ್ (ಬಲಕ್ಕೆ)
ಸಿನಿಮಾ ಸುದ್ದಿ
ಹೊಸ ನಿರ್ದೇಶಕನ ನಿಗೂಢ ಥ್ರಿಲ್ಲರ್ ಸಿನೆಮಾದಲ್ಲಿ ಯೇಸುದಾಸ್ ಮತ್ತು ಚಿತ್ರ ಗಾಯನ
ಸಿನೆಮಾ ಬಗ್ಗೆ ಅತೀವ ಪ್ಯಾಷನ್ ಇರಿಸಿಕೊಂಡಿರುವ ಮಂಜುನಾಥ್ ಶಿವಲಿಂಗೇಗೌಡ, ತಮ್ಮ ಬ್ಯಾಂಕಿಂಗ್ ವೃತ್ತಿ ತೊರೆದು ಚೊಚ್ಚಲ ಸಿನೆಮಾ ನಿರ್ದೇಶನಕ್ಕೆ ಕೈಹಾಕಿದ್ದಾರೆ.
ಬೆಂಗಳೂರು: ಸಿನೆಮಾ ಬಗ್ಗೆ ಅತೀವ ಪ್ಯಾಷನ್ ಇರಿಸಿಕೊಂಡಿರುವ ಮಂಜುನಾಥ್ ಶಿವಲಿಂಗೇಗೌಡ, ತಮ್ಮ ಬ್ಯಾಂಕಿಂಗ್ ವೃತ್ತಿ ತೊರೆದು ಚೊಚ್ಚಲ ಸಿನೆಮಾ ನಿರ್ದೇಶನಕ್ಕೆ ಕೈಹಾಕಿದ್ದಾರೆ. ಯಾವುದೇ ಚಿತ್ರರಂಗದ ಸಂಪರ್ಕ ಹೊಂದಿರದ ಮಂಜುನಾಥ ಅವರಿಗೆ ನಿರಂತರವಾಗಿ ಸಿನೆಮಾಗಳನ್ನು ನೋಡುವುದರಿಂದಲೇ ನಿರ್ದೇಶನದ ಕಲೆ ಒಲಿದು ಬಂದಿದೆಯಂತೆ.
ಈ ಹಿಂದೆ ಕಿರುಚಿತ್ರಗಳನ್ನು ಮಾಡಿರುವ ಮಂಜುನಾಥ್ ಈಗ ಟ್ರೈಮಾರ್ಕ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿ ಫೀಚರ್ ಸಿನೆಮಾ ನಿರ್ದೇಶಿಸಲು ಸಜ್ಜಾಗಿದ್ದಾರೆ. ಈ ಚೊಚ್ಚಲ ಚಿತ್ರ ಇನ್ನಷ್ಟು ಆಸಕ್ತಿ ಹುಟ್ಟಿಸಿರುವುದು ಏಕೆಂದರೆ ಪ್ರಖ್ಯಾತ ಗಾಯಕರಾದ ಯೇಸುದಾಸ್ ಮತ್ತು ಚಿತ್ರ ಅವರುಗಳನ್ನು ಒಟ್ಟಾಗಿ ಗಾಯನಕ್ಕಾಗಿ ಸಿನೆಮಾಗೆ ಕರೆತಂದಿರುವುದು. ಇದರ ಶ್ರೇಯಸ್ಸನ್ನು ಸಂಗೀತ ನಿರ್ದೇಶಕ ದೇವಾನಂದ ರಾಮಸಂದಾರ ಅವರಿಗೆ ಮಂಜುನಾಥ್ ನೀಡುತ್ತಾರೆ.
"ಮೊದಲಿಗೆ ಎಲ್ಲ ಹಾಡುಗಳನ್ನು ಹಾಡಲು ಹೊಸಬರನ್ನು ಕರೆತರಲು ನಾನು ಮತ್ತು ದೇವಾ ಚಿಂತಿಸುತ್ತಿದ್ದೆವು. ಅದಕ್ಕಾಗಿ ಒಂದಷ್ಟು ಆಡಿಷನ್ ಗಳನ್ನು ನಡೆಸಿ ಹಲವು ಡೆಮೋ ನೋಡಿದೆವು. ಆದರೆ ಯಾವುದು ಒಪ್ಪಿತವಾಗಲಿಲ್ಲ. ಆದುದರಿಂದ ಅನುಭವಿ ಗಾಯಕರ ಮೊರೆ ಹೋಗುವುದೇ ಒಳಿತು ಎಂದು ನಾನು ತಿಳಿಸಿದೆ. ಆಗ ಈ ಪ್ರಖ್ಯಾತ ಗಾಯಕರ ಹೆಸರೇ ಮೊದಲು ಹೊಳೆದದ್ದು" ಎಂದು ತಿಳಿಸುವ ಮಂಜುನಾಥ್ ಕೆ ಕಲ್ಯಾಣ್ ಗೀತರಚನೆ ಮಾಡಿರುವುದಾಗಿ ತಿಳಿಸುತ್ತಾರೆ.
ಇನ್ನು ಹೆಸರಿಡದ ಈ ನಿಗೂಢ ಥ್ರಿಲ್ಲರ್ ಚಿತ್ರಕ್ಕೆ ತಾರಾಗಣವನ್ನು ಆಯ್ಕೆ ಮಾಡಬೇಕಿದ್ದು, ಮುಂದಿನ ತಿಂಗಳು ಆಡಿಷನ್ ನಡೆಸುವುದಾಗಿ ತಿಳಿಸುತ್ತಾರೆ ನಿರ್ದೇಶಕ. "ಮೊದಲಿಗೆ ನಾಯಕನಟನ ಸ್ಥಾನದಲ್ಲಿ ಶಿವರಾಜ್ ಕುಮಾರ್ ಅವರನ್ನು ಕೇಳಿಕೊಳ್ಳುವ ಮನಸ್ಸಿತ್ತು. ಆದರೆ ಇದು ಸಣ್ಣ ಬಜೆಟ್ ನ ಸಿನೆಮಾ ಆಗಿರುವುದರಿಂದ ಮತ್ತು ಕಥಾವಸ್ತುವಿಗೆ ನಿಷ್ಠಾವಂತರಾಗಿರಬೇಕಿರುವುದರಿಂದ, ಯಾರಾದರೂ ಹೆಚ್ಚಿನ ಹೂಡಿಕೆಗೆ ಮುಂದಾಗುತ್ತಾರೆಯೇ ಎಂದು ಕಾಯುತ್ತಿದ್ದೇವೆ" ಎನ್ನುವ ಮಂಜುನಾಥ್, ಕಾರ್ತಿಕ್ ರಾಮ್ ಛಾಯಾಗ್ರಹಣ ಮಾಡುತ್ತಿರುವುದಾಗಿ ತಿಳಿಸುತ್ತಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ