ನಟಿ ಸಂಯುಕ್ತ ಹೆಗಡೆ
ಸಿನಿಮಾ ಸುದ್ದಿ
'ಕಾಲೇಜ್'ಗೆ ಹಿಂದಿರುಗಿ ಸಮಸ್ಯೆ ಬಗೆಹರಿಸಿಕೊಂಡ ಸಂಯುಕ್ತ
ತಮಿಳು ಚಿತ್ರರಂಗದಲ್ಲಿ ಈಗ ಅವಕಾಶ ಪಡೆದಿರುವ 'ಕಿರಿಕ್ ಪಾರ್ಟಿ' ನಟಿ ಸಂಯುಕ್ತ ಹೆಗಡೆ ಮೋಡದ ಮೇಲಿದ್ದಾರೆ. ಕಾಲಿವುಡ್ ಸಿನೆಮಾದ ಬಗ್ಗೆ ಸದ್ಯಕ್ಕೆ ಹೆಚ್ಚು ಹೇಳಲಾರೆ ಎಂದು ನಟಿ ತಿಳಿಸಿದರೂ,
ಬೆಂಗಳೂರು: ತಮಿಳು ಚಿತ್ರರಂಗದಲ್ಲಿ ಈಗ ಅವಕಾಶ ಪಡೆದಿರುವ 'ಕಿರಿಕ್ ಪಾರ್ಟಿ' ನಟಿ ಸಂಯುಕ್ತ ಹೆಗಡೆ ಮೋಡದ ಮೇಲಿದ್ದಾರೆ. ಕಾಲಿವುಡ್ ಸಿನೆಮಾದ ಬಗ್ಗೆ ಸದ್ಯಕ್ಕೆ ಹೆಚ್ಚು ಹೇಳಲಾರೆ ಎಂದು ನಟಿ ತಿಳಿಸಿದರೂ, ಕಾರ್ತಿಕ್ ಸುಬ್ಬರಾಜ್ ನಿರ್ದೇಶನದ ಸಿನೆಮಾದಲ್ಲಿ ಪ್ರಭುದೇವ್ ಒಟ್ಟಿಗೆ ನಟಿಸಲು ಸಂಯುಕ್ತ ಅವರಿಗೆ ಅವಕಾಶ ದೊರೆತಿದ್ದು ಇದು ಅವರ ಕನಸಿನ ಯೋಜನೆಯಾಗಲಿದೆ ಎನ್ನುತ್ತವೆ ಮೂಲಗಳು.
ಆದರೆ ರೋಡೀಸ್ ಟಿವಿ ರಿಯಾಲಿಟಿ ಕಾರ್ಯಕ್ರಮದ ನಂತರ ಎರಡು ಕನ್ನಡ ಯೋಜನೆಗಳನ್ನು ನಟಿ ಒಪ್ಪಿಕೊಂಡಿದ್ದರು. ಇವರ ತಮಿಳು ಸಿನೆಮಾ ಈ ಎರಡು ಕನ್ನಡ ಯೋಜನೆಗಳ ದಿನಾಂಕಕ್ಕೆ ಅಡ್ಡಿ ಮಾಡಲಿದೆ ಎಂಬ ವಿವಾದ ನೆನ್ನೆ ಎದ್ದಿತ್ತು.
ಈಗ ನಟಿ ಅನಿಲ್ ಅವರ ಚೊಚ್ಚಲ ನಿರ್ಮಾಣದ 'ವಾಸು ... ನಾನು ಪಕ್ಕ ಕಮರ್ಷಿಯಲ್' ಚಿತ್ರದಿಂದ ಹೊರನಡೆದಿದ್ದಾರೆ. ಜೊತೆಗೆ ತಮಿಳು ಸಿನೆಮಾದ ದಿನಾಂಕಗಳು ಸಂತೋಷ್ ನಿರ್ದೇಶನದ 'ಕಾಲೇಜ್ ಕುಮಾರ್' ಸಿನೆಮಾದ ಕಾಲ್ ಶೀಟ್ ಗೆ ಹೊಂದಿಕೆಯಾಗದೆ ಹೋಗಿದ್ದರಿಂದ ಸಮಸ್ಯೆ ಉಂಟಾಗಿ ವಿವಾದ ಕರ್ನಾಟಕ ವಾಣಿಜ್ಯ ಮಂಡಳಿಯ ಮೆಟ್ಟಿಲು ಹತ್ತಿತ್ತು. ಈಗ ನಟಿ ವಿವಾದ ಬಗೆಹರಿಸಿಕೊಂಡಿದ್ದು ಇಂದಿನಿಂದ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ.
ಈ ವಿವಾದ ಮಾಧ್ಯಮಗಳಲ್ಲಿ ವರದಿಯಾದ ನಂತರ ನಟಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಟ್ರಾಲ್ ಮಾಡಲಾಗಿತ್ತು. ಇದಕ್ಕೆ ಉತ್ತರಿಸಿ ಫೇಸ್ಬುಕ್ ನಲ್ಲಿ ಬರೆದಿದ್ದ ನಟಿ "ಕನ್ನಡ ನನ್ನ ಮಾತೃಭಾಷೆ ಮತ್ತು ಅದನ್ನು ನಾನು ಗೌರವಿಸುತ್ತೇನೆ. ನನ್ನ ಮೊದಲ ಆದ್ಯತೆ ಕನ್ನಡಕ್ಕೆ. ತೀರ್ಪು ಕೊಡುವುದಕ್ಕೆ ಮುಂಚೆ ಪರಿಸ್ಥಿತಿ ಮತ್ತು ಸತ್ಯವನ್ನು ಅರ್ಥ ಮಾಡಿಕೊಳ್ಳಿ. ಟಿವಿಯಲ್ಲಿ ಕೇಳುವುದು ನೋಡುವುದು ಎಲ್ಲವು ನಿಜವಲ್ಲ" ಎಂದಿದ್ದರು.
ಈ ವಿವಾದದ ಬಗ್ಗೆ ಮಾತನಾಡಿರುವ ನಿರ್ದೇಶಕ ಸಂತೋಷ್ "ನಾವು ಫೋಟೋಶೂಟ್ ಮುಗಿಸಿದ್ದೆವು. ಚಿತ್ರೀಕರಣ ಇಂದಿನಿಂದ ಪ್ರಾರಂಭವಾಗಬೇಕಿತ್ತು ಮತ್ತು ಸಂಯುಕ್ತ ಕೂಡ ಭಾಗಿಯಾಗಬೇಕಿತ್ತು.
"ಆದರೆ ನಂತರ ಅವರು ತಮಿಳು ಸಿನೆಮಾದ ಬಗ್ಗೆ ಪ್ರಸ್ತಾಪಿಸಿ, ಜೂನ್ ನಲ್ಲಿ, ಅಲ್ಲಿ ಚಿತ್ರೀಕರಣದಲ್ಲಿ ತೊಡಗಿಸಿಕೊಳ್ಳಬೇಕಾದ ಬಗ್ಗೆ ತಿಳಿಸಿದರು. ಈ ದಿನಾಂಕಗಳನ್ನು ಅವರು ಮೊದಲು ನಮಗೆ ನೀಡಿದ್ದರು. .. ಮತ್ತು ಆ ದಿನಗಳಲ್ಲಿ ಅವರು ನಟ ರವಿ ಶಂಕರ್, ಶ್ರುತಿ ಮತ್ತು ವಿಕ್ಕಿ ಜೊತೆ ನಟಿಸಬೇಕಿತ್ತು. ಇದನ್ನು ಸಂಯುಕ್ತ ಅವರಿಗೆ ವಿವರಿಸಿದ ಮೇಲೆ ಅವರು ಪರಿಸ್ಥಿತಿ ಅರ್ಥ ಮಾಡಿಕೊಂಡರು" ಎನ್ನುತ್ತಾರೆ.
"ದಿನಾಂಕಗಳ ಬಗ್ಗೆ ಬಹಳ ಗೊಂದಲವಿತ್ತು. ಎಲ್ಲವನ್ನು ಸರಿಪಡಿಸಿಕೊಳ್ಳುತ್ತಿದ್ದೇನೆ. ಇಂದಿನಿಂದ 'ಕಾಲೇಜ್ ಕುಮಾರ್' ಸೆಟ್ ಸೇರಲಿದ್ದೇನೆ. ತಮಿಳು ಯೋಜನೆಯ ಬಗ್ಗೆ ಸದ್ಯಕ್ಕೆ ಏನನ್ನು ಹೇಳಲು ಇಚ್ಛಿಸುವುದಿಲ್ಲ" ಎನ್ನುತ್ತಾರೆ ನಟಿ ಸಂಯುಕ್ತ.

