ನಟ ವಿಜಯ್
ಸಿನಿಮಾ ಸುದ್ದಿ
ಮೆರ್ಸಲ್ ಚಿತ್ರದ ವಿವಾದಾತ್ಮಕ ಜಿಎಸ್ ಟಿ ಸಂಭಾಷಣೆಗೆ ಕತ್ತರಿ ಹಾಕಲು ಸಿದ್ಧ: ನಿರ್ಮಾಪಕರು
ತೀವ್ರ ವಿವಾದಕ್ಕೆ ಕಾರಣವಾಗಿದ್ದ ವಿಜಯ್ ಅಭಿನಯದ ಮೆರ್ಸೆಲ್ ಸಿನಿಮಾದಲ್ಲಿ ಜಿಎಸ್ ಟಿ ಕುರಿತ ಸಂಭಾಷಣೆಯನ್ನು ತೆಗೆದುಹಾಕಲು...
ಚೆನ್ನೈ: ತೀವ್ರ ವಿವಾದಕ್ಕೆ ಕಾರಣವಾಗಿದ್ದ ವಿಜಯ್ ಅಭಿನಯದ ಮೆರ್ಸೆಲ್ ಸಿನಿಮಾದಲ್ಲಿ ಜಿಎಸ್ ಟಿ ಕುರಿತ ಸಂಭಾಷಣೆಯನ್ನು ತೆಗೆದುಹಾಕಲು ಸಿದ್ಧ ಎಂದು ಚಿತ್ರ ನಿರ್ಮಾಣ ಕಂಪನಿ ಥೆನಂದಲ್ ಶನಿವಾರ ಸ್ಪಷ್ಟಪಡಿಸಿದೆ.
ನಾವು ಎಲ್ಲರ ಭಾವನೆಗಳನ್ನು ಗೌರವಿಸುತ್ತೇವೆ. ಸರ್ಕಾರವನ್ನು ಟಾರ್ಗೆಟ್ ಮಾಡುವುದು ನಮ್ಮ ಉದ್ದೇಶವಲ್ಲ. ಅಗತ್ಯಬಿದ್ದರೆ ತಪ್ಪು ಮಾಹಿತಿ ನೀಡುವ ಸಂಭಾಷಣೆಯನ್ನು ತೆಗೆದು ಹಾಕಲು ಸಿದ್ಧವಿರುವುದಾಗಿ ಥೆನಂದಲ್ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.
ಮೆರ್ಸಲ್ ಚಿತ್ರದಲ್ಲಿ ರಾಜಕೀಯದ ಬಗ್ಗೆ ನೇರವಾಗಿ ಎಲ್ಲೂ ಮಾತನಾಡದೇ ಇದ್ದರೂ ಇತ್ತೀಚೆಗಷ್ಟೇ ಜಾರಿಯಾದ ಜಿಎಸ್ ಟಿ, ಡಿಜಿಟಲ್ ಇಂಡಿಯಾದ ಬಗ್ಗೆ ಪ್ರಸ್ತಾಪವಿದ್ದು, ಇದರಿಂದ ಜನರಿಗೆ ತಪ್ಪು ಸಂದೇಶ ರವಾನೆಯಾಗುತ್ತಿದೆ. ಹೀಗಾಗಿ ಚಿತ್ರದ ವಿವಾದಾತ್ಮಕ ಸಂಭಾಷಣೆಗೆ ಕತ್ತರಿ ಹಾಕಬೇಕು ಎಂದು ಬಿಜೆಪಿ ಆಗ್ರಹಿಸಿತ್ತು. ಅಲ್ಲದೆ ಒಂದು ವೇಳೆ ಚಿತ್ರತಂಡ ಸಂಭಾಷಣೆಗೆ ಕತ್ತರಿ ಹಾಕದಿದ್ದರೆ ಚಿತ್ರತಂಡದ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿತ್ತು. ಆದರೆ ಇದಕ್ಕೆ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಸರ್ಕಾರವನ್ನು ಹೊಗಳುವ ಸಾಕ್ಷ್ಯಚಿತ್ರಗಳಿಗೆ ಮಾತ್ರ ಪ್ರದರ್ಶನ ಅನುಮತಿ ಲಭಿಸುವ ಪರಿಸ್ಥಿತಿ ಬರಬಹುದು ಎಂದು ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಟ್ವೀಟ್ ಮಾಡಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ