ತೆಲುಗು ನಟಿ ಶ್ರೀರೆಡ್ಡಿ
ಸಿನಿಮಾ ಸುದ್ದಿ
ಕಾಸ್ಟಿಂಗ್ ಕೌಚ್ ವಿರುದ್ಧ ಟಾಲಿವುಡ್ ನಟಿ ಶ್ರೀರೆಡ್ಡಿ ಅರೆನಗ್ನ ಪ್ರತಿಭಟನೆ, ಬಂಧನ
ತೆಲುಗು ಚಿತ್ರರಂಗದಲ್ಲಿನ ನಡೆಯುತ್ತಿರುವ ಕಾಸ್ಟಿಂಗ್ ಕೌಚ್(ಲೈಂಗಿಕ ಕಿರುಕುಳ) ನಿಲ್ಲಿಸಬೇಕು ಎಂದು ಒತ್ತಾಯಿಸಿ...
ಹೈದರಾಬಾದ್: ತೆಲುಗು ಚಿತ್ರರಂಗದಲ್ಲಿನ ನಡೆಯುತ್ತಿರುವ ಕಾಸ್ಟಿಂಗ್ ಕೌಚ್(ಲೈಂಗಿಕ ಕಿರುಕುಳ) ನಿಲ್ಲಿಸಬೇಕು ಎಂದು ಒತ್ತಾಯಿಸಿ ಟಾಲಿವುಡ್ ನಟಿ ಶ್ರೀರೆಡ್ಡಿ ಅವರು ಶನಿವಾರ ತೆಲುಗು ಚಲನಚಿತ್ರ ವಾಣಿಜ್ಯ ಮಂಡಳಿ ಮುಂಭಾಗ ಮಾಧ್ಯಮಗಳ ಮುಂದೆಯೇ ಬಟ್ಟೆ ಕಳಚಿ ಅರೆನಗ್ನ ಪ್ರತಿಭಟನೆ ನಡೆಸಿದರು.
ಈ ಹಿಂದೆ ಟಾಲಿವುಡ್ ನ ಹಲವು ನಿರ್ಮಾಪಕರು ಮತ್ತು ನಿರ್ದೇಶಕರು ತನಗೆ ಲೈಂಗಿಕ ಕಿರುಕುಳ ನೀಡಿರುವುದಾಗಿ ಶ್ರೀರೆಡ್ಡಿ ಆರೋಪಿಸಿದ್ದರು. ಅಲ್ಲದೆ ತನಗೆ ನ್ಯಾಯ ಸಿಗದಿದ್ದರೆ ಫಿಲಂ ಚೇಂಬರ್ ಮುಂದೆ ಬಟ್ಟೆ ಕಳಚಿ ಪ್ರತಿಭಟಿಸುವುದಾಗಿ ಬೆದರಿಕೆ ಹಾಕಿದ್ದರು. ಶ್ರೀರೆಡ್ಡಿ ಇಂದು ಹಾಗೆಯೇ ಮಾಡುವ ಮೂಲಕ ಎಲ್ಲರ ಗಮನಸೆಳೆದಿದ್ದಾರೆ.
ಅರೆನಗ್ನವಾಗಿ ಪ್ರತಿಭಟಿಸುತ್ತಿದ್ದ ಶ್ರೀರೆಡ್ಡಿ ಜೊತೆ ಚಲನಚಿತ್ರ ವಾಣಿಜ್ಯ ಮಂಡಳಿ ಸದಸ್ಯರು ಮಾತುಕತೆಗೆ ಮುಂದಾದರು. ಆದರೆ ಶ್ರೀರೆಡ್ಡಿ ಅವರಿಗೆ ಸಹಕರಿಸಲಿಲ್ಲ. ಬಳಿಕ ಪೊಲೀಸರು ಮಧ್ಯೆ ಪ್ರವೇಶಿಸಿ ಶ್ರೀರೆಡ್ಡಿಯನ್ನು ವಶಕ್ಕೆ ಪಡೆದಿದ್ದಾರೆ.
ತೆಲುಗು ನಿರ್ದೇಶಕರು ಮತ್ತು ನಿರ್ಮಾಪಕರು ಸಿನಿಮಾಗಳಲ್ಲಿ ನಟಿಸುವ ನಟಿಯರಿಗೆ ಲೈಂಗಿಕ ಕಿರುಕುಳ ನೀಡುವ ಪರಿಪಾಠ ಬೆಳೆಸಿಕೊಂಡಿದ್ದಾರೆ. ಇಂತಹ ಕಾಸ್ಟಿಂಗ್ ಕೌಚ್ ತೆಲುಗು ಸಿನಿಮಾ ರಂಗದಲ್ಲಿ ನಿಲ್ಲಬೇಕೆಂದು ಶ್ರೀರೆಡ್ಡಿ ಆಗ್ರಹಿಸಿದ್ದಾರೆ.
ಈ ಸಂಬಂಧ ಕಲಾವಿದರ ಸಂಘ, ಫಿಲಂ ಚೇಂಬರ್ ಕೂಡಲೆ ಕ್ರಮಕೈಗೊಳ್ಳಬೇಕು. ಮಹಿಳೆಯರ ರಕ್ಷಣೆಗೆ ಮುಂದೆ ಬರಬೇಕು ಎಂದಿರುವ ಅವರು ಕೆಲವು ನಿರ್ದೇಶಕರಾದ ಶೇಖರ್ ಕಮ್ಮುಲ, ಗಾಯಕ ಶ್ರೀರಾಮ್ ಮತ್ತು ನಟ ನಾನಿ ವಿರುದ್ಧವೂ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕಾಸ್ಟಿಂಗ್ ಕೌಚ್ ಆರೋಪ ಮಾಡಿದ್ದಾರೆ.
ಕಾಸ್ಟಿಂಗ್ ಕೌಚ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ನಟಿ, ತನ್ನಂತೆಯೇ ಬಹಳಷ್ಟು ಮಂದಿ ಯುವತಿಯರನ್ನು ದೈಹಿಕವಾಗಿ, ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ. ಅವರ ಕಮಿಟ್‍ಮೆಂಟ್ಸ್ ಒಪ್ಪಿಕೊಳ್ಳದಿದ್ದರೆ ಅವಕಾಶಗಳು ಸಿಗದಂತೆ ಮಾಡಲಾಗುತ್ತಿದೆ. ತನಗೆ ಕಲಾವಿದರ ಸಂಘದ ಸದಸ್ಯತ್ವ ನೀಡದಂತೆ ತಡೆಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.


