ತಪ್ಪು ಎಂದು ಗೊತ್ತಾದ ಕೂಡಲೇ ವಿಡಿಯೊ ಡಿಲೀಟ್ ಮಾಡಿದ್ದೇನೆ: ನಿವೇದಿತಾ ಗೌಡ
ಮೈಸೂರು: ಸಾಮಾಜಿಕ ಮಾಧ್ಯಮದಲ್ಲಿ ಕಿಕಿ ಚಾಲೆಂಜ್ ಸ್ವೀಕರಿಸಿ ಡ್ಯಾನ್ಸ್ ವಿಡಿಯೊ ಮಾಡಿ ಅಪ್ ಲೋಡ್ ಮಾಡಿದ್ದನ್ನು ಅದರ ಗಂಭೀರತೆ ತಿಳಿದ ಮೇಲೆ ತೆಗೆದುಹಾಕಿದ್ದೇನೆ, ಆದರೆ ಆ ಬಗ್ಗೆ ಸುದ್ದಿಯಾಗುತ್ತಿಲ್ಲ. ಬದಲಾಗಿ ಮೊದಲು ಡ್ಯಾನ್ಸ್ ಮಾಡಿ ಅಪ್ ಲೋಡ್ ಮಾಡಿದ ವಿಡಿಯೊ ಹೈಲೈಟ್ ಆಗುತ್ತಿದೆ ಎಂದು ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ ಅಳಲು ತೋಡಿಕೊಂಡಿದ್ದಾರೆ.
ಕಿಕಿ ಚಾಲೆಂಜ್ ಸ್ವೀಕರಿಸಿ ಡಾನ್ಸ್ ಮಾಡಿದ್ದ ವಿರುದ್ಧ ದೂರು ದಾಖಲಾಗಿರುವ ಕುರಿತು ಮೈಸೂರಿನಲ್ಲಿ ನಿನ್ನೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ನಾನಿನ್ನೂ ಚಿಕ್ಕವಳು, ಈ ಕ್ಷೇತ್ರಕ್ಕೆ ಹೊಸಬಳು, ಸೆಲೆಬ್ರಿಟಿಯಾದವರು ತಪ್ಪೇ ಮಾಡುವುದಿಲ್ಲ ಅಥವಾ ಮಾಡಬಾರದು ಎಂಬುದಿದೆಯೇ? ನನಗೆ ಬಂದ ಕಿಕಿ ಚಾಲೆಂಜ್ ನ್ನು ಸ್ವೀಕರಿಸಿ ಅದನ್ನು ಕ್ರೇಸ್ ಗೆಂದು ಸಮಾಜಿಕ ಮಾಧ್ಯಮದಲ್ಲಿ ಅಪ್ ಲೋಡ್ ಮಾಡಿದೆ. ನನಗೆ ತಿಳಿಯದೆ ನಾನು ತಪ್ಪು ಮಾಡಿದೆ. ಈ ಬಗ್ಗೆ ನನಗೆ ಗೊತ್ತಿದ್ದರೆ ನಾನು ಖಂಡಿತವಾಗಿಯೂ ಮಾಡುತ್ತಿರಲಿಲ್ಲ. ಆದರೆ ಈ ಬಗ್ಗೆ ಪೊಲೀಸರಿಗೆ ದೂರು ನೀಡುವ ಮುನ್ನ ನನಗೆ ತಿಳಿಹೇಳಬಹುದಾಗಿತ್ತು. ದೂರು ನೀಡಿದವರು ನನ್ನನ್ನು ಸಂಪರ್ಕಿಸಿದ್ದರೆ ನಾನು ತಕ್ಷಣವೇ ವಿಡಿಯೋ ಡಿಲೀಟ್ ಮಾಡುತ್ತಿದ್ದೆ ಎಂದಿದ್ದಾರೆ.
ಕಿಕಿ ಡ್ಯಾನ್ಸ್ ನ ಪರಿಣಾಮದ ಬಗ್ಗೆ ನನಗೆ ಆಮೇಲೆ ಅರಿವಾಯಿತು. ಇದನ್ನು ಯಾರೂ ಅನುಕರಿಸಬಾರದು, ಇದು ಗೊತ್ತಾದ ಬಳಿಕ ತಕ್ಷಣ ನಾನು ವಿಡಿಯೋ ಡಿಲೀಟ್ ಮಾಡಿದ್ದೇನೆ. ಉದ್ದೇಶ ಪೂರ್ವಕವಾಗಿ ನಾನು ಈ ರೀತಿ ಮಾಡಿಲ್ಲ. ನೀವು ಇದನ್ನು ಯಾರು ಪ್ರಯತ್ನ ಮಾಡಬೇಡಿ ಎಂದು ಮನವಿ ಮಾಡಿಕೊಂಡರು.
ಅಪಾಯಕಾರಿ ಕಿಕಿ ಡ್ಯಾನ್ಸ್ ಮಾಡಿದ ಹಿನ್ನೆಲೆಯಲ್ಲಿ ಕನ್ನಡ ಒಕ್ಕೂಟದ ನಾಗೇಶ್ ಎಂಬುವವರು ನಿವೇದಿತಾ ಗೌಡ ವಿರುದ್ಧ ಕ್ರಮ ಕೈಗೂಳ್ಳುವಂತೆ ಆಗ್ರಹಿಸಿದ್ದರು. ಈ ಕುರಿತು ಬೆಂಗಳೂರಿನ ಹಲಸೂರು ಗೇಟ್ ಪೂಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಚಲಿಸುತ್ತಿರುವ ಕಾರಿನಲ್ಲಿ ಡ್ಯಾನ್ಸ್ ಮಾಡುವ ಚಾಲೆಂಜ್‍ನ್ನು ಬಿಗ್ ಬಾಸ್ ಬೆಡಗಿ ನಿವೇದಿತಾ ಗೌಡ ಸ್ವೀಕರಿಸಿದ್ದರು. ಕಾರು ಚಲಿಸುತ್ತಿರುವಾಗ ಅದೇ ವೇಗಕ್ಕೆ ತಕ್ಕಂತೆ ಹೆಜ್ಜೆ ಹಾಕುವುದು ಸದ್ಯದ ಟ್ರೆಂಡ್ ಆಗಿದ್ದು, ವಿದೇಶದಲ್ಲಿ ಭಾರೀ ಪ್ರಮಾಣದಲ್ಲಿ ಈ ಚಾಲೆಂಜ್ ಸ್ವೀಕರಿಸುತ್ತಿದ್ದಾರೆ. ಈ ಚಾಲೆಂಜ್ ಭಾರತಕ್ಕೂ ಕಾಲಿಟ್ಟಿದ್ದು, ಬಿಟೌನ್ ತಾರೆಯರು ಚಾಲೆಂಜ್ ಸ್ವೀಕರಿಸಿದ್ದರು. ಬಳಿಕ ತಮ್ಮ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಅಪ್ಲೋಡ್ ಮಾಡುತ್ತಿದ್ದರು. ಇದೊಂದು ಅಪಾಯಕಾರಿ ಸವಾಲಾಗಿದ್ದು, ಎಷ್ಟೋ ಮಂದಿ ಈ ಸಾಹಸ ಮಾಡುವುದಕ್ಕೆ ಹೋಗಿ ಗಾಯ ಮಾಡಿಕೊಂಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ