
ಲೈಫ್ ಜೊತೆ ಒಂದು ಸೆಲ್ಫಿ ಚಿತ್ರಕಥೆ ಬರೆದದ್ದು ದಿನಕರ್ ತೂಗುದೀಪ ಅವರ ಪತ್ನಿ ಮಾನಸ ದಿನಕರ್. ಅವರಿಗೆ ಚಿಕ್ಕ ವಯಸ್ಸಿನಿಂದಲೇ ಪೌಲೊ ಕೊಯೆಲೊ, ಜೇನ್ ಆಸ್ಟೆನ್, ಪೂರ್ಣಚಂದ್ರ ತೇಜಸ್ವಿ, ಸಾಯಿಸುತೆ ಮತ್ತು ಎಂ.ಕೆ. ಇಂದಿರಾ ಅವರ ಕಥೆಗಳನ್ನು ಒದುವ ಅಭ್ಯಾಸವಿತ್ತು.
ಪುಸ್ತಕ ಓದಿನ ಗೀಳು ಮಾನಸ ಅವರನ್ನು ಸಿನಿಮಾಕ್ಕೆ ಚಿತ್ರಕಥೆ ಬರೆಯುವವರೆಗೆ ತಂದಿಟ್ಟಿದೆ. ಲೈಫ್ ಜೊತೆ ಒಂದು ಸೆಲ್ಫಿ ಚಿತ್ರಕ್ಕೆ ಕಥೆ ಬರೆದಿದ್ದಾರೆ. ನನ್ನದೇ ಆದ ಬರಹಗಳನ್ನು ತೋರಿಸಲು ನನಗೆ ಓದು ಸಹಾಯವಾಯಿತು ಎನ್ನುತ್ತಾರೆ.
ದಿನಕರ್ ತೂಗುದೀಪ್ ನಿರ್ದೇಶನದ ಸಿನಿಮಾದಲ್ಲಿ ಪ್ರೇಮ್, ಪ್ರಜ್ವಲ್ ದೇವರಾಜ್ ಮತ್ತು ಹರಿಪ್ರಿಯಾ ಅವರು ನಟಿಸಿದ್ದಾರೆ. ಸೆನ್ಸಾರ್ ಬೋರ್ಡ್ ನ ಅನುಮತಿಗೆ ಕಾಯುತ್ತಿದೆ. ನಾನು ಮೂರು ಕಥೆಗಳನ್ನು ಬರೆದು ತೋರಿಸಿದೆ, ಅವುಗಳಲ್ಲಿ ಪತಿ ದಿನಕರ್ ಈ ಕಥೆಯನ್ನು ಆಯ್ಕೆ ಮಾಡಿಕೊಂಡರು. ಚಿತ್ರ ತಯಾರಿಸುವ ಮೊದಲು ಕಥೆ ಬರೆಯಲು ಸುಮಾರು ಒಂದು ವರ್ಷ ತೆಗೆದುಕೊಂಡಿದ್ದರಂತೆ.
ಚಿತ್ರಜಗತ್ತಿಗೆ ಮಾನಸ ಹೊಸಬರಲ್ಲ. ಪತಿ ನಿರ್ದೇಶಕ ಮತ್ತು ನಿರ್ಮಾಪಕರಾದರೆ ಮಾವ ತೂಗುದೀಪ ಶ್ರೀನಿವಾಸ್ ಹಿಂದಿನ ಕಾಲದ ಖ್ಯಾತ ನಟ ಮತ್ತು ಬಾವ ದರ್ಶನ್ ತೂಗುದೀಪ ಪ್ರಸಿದ್ಧ ನಟ.
ಮದುವೆ ನಂತರ ಗೃಹಿಣಿಯಾಗಿದ್ದ ಮಾನಸ ಆಗಾಗ ತನ್ನ ಇಷ್ಟದ ಹವ್ಯಾಸವಾದ ಕಥೆ ಬರೆಯುತ್ತಿದ್ದರು. ನಾನು ಹಳ್ಳಿಯಲ್ಲಿ ದೊಡ್ಡ ಕುಟುಂಬದಲ್ಲಿ ಬೆಳೆದವಳು. ಹಳ್ಳಿ ಜೀವನದ ಕೂಡು ಕುಟುಂಬದ ಸಂಬಂಧ, ಬಾಂಧವ್ಯಗಳನ್ನು ಚಿತ್ರದಲ್ಲಿ ಕಥೆಯಾಗಿ ತಂದಿದ್ದೇನೆ ಎಂದರು.
ಈ ಚಿತ್ರ ತಯಾರಿಯಲ್ಲಿ ಕೂಡ ಪತಿಗೆ ಹೆಗಲು ಕೊಟ್ಟಿದ್ದಾರೆ ಮಾನಸ. ಚಿತ್ರಕ್ಕೆ ಸಂಭಾಷಣೆ ಮತ್ತು ಕಾಸ್ಟ್ಯೂಮ್ ಗಳನ್ನು ಕೂಡ ಒದಗಿಸಿದ್ದಾರೆ. ಚಿತ್ರದ ವಿಷಯದಲ್ಲಿ ನಮ್ಮ ನಡುವೆ ಸಾಕಷ್ಟು ಚರ್ಚೆಗಳು ನಡೆದಿವೆ ಎನ್ನುತ್ತಾರೆ ಮಾನಸ. ಚಿತ್ರ ಬಿಡುಗಡೆ ದಿನಾಂಕ ಹತ್ತಿರ ಬರುತ್ತಿದ್ದಂತೆ ಅವರಿಗೆ ಆತಂಕ ಕಾಡುತ್ತಿದೆಯಂತೆ.
Advertisement