
ಬೆಂಗಳೂರು: ಯಜಮಾನ ಚಿತ್ರದ ಶೂಟಿಂಗ್ ಸೆಟ್ ನಲ್ಲಿ ಸಹ ಕಲಾವಿದನ ಮೇಲೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಲ್ಲೆ ಮಾಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಪಟ್ಟಂತೆ ಸ್ವತಃ ನಟ ದರ್ಶನ್ ಅವರೇ ಖಾಸಗಿ ಚಾನೆಲ್ ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಿನ ನೈಸ್ ರಸ್ತೆಯಲ್ಲಿ ಯಜಮಾನ ಚಿತ್ರದ ಹಾಡಿನ ಚಿತ್ರೀಕರಣದ ವೇಳೆ ಸಹ ಕಲಾವಿದ ಶಿವು ಮೇಲೆ ದರ್ಶನ್ ಹಲ್ಲೆ ನಡೆಸಿದ್ದು, ಸಹ ಕಲಾವಿದರು ಈ ಬಗ್ಗೆ ತಾವರಕೆರೆ ಠಾಣೆಯಲ್ಲಿ ದೂರು ನೀಡಲು ಮುಂದಾಗಿದ್ದರು, ಆದರೆ ದೂರು ನೀಡಿಲ್ಲ ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ತಮ್ಮ ಮೇಲಿನ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ನಟ ದರ್ಶನ್, ನಿರ್ಮಾಪಕರು 30 ಕೋಟಿ ರೂಪಾಯಿ ಬಂಡವಾಳ ಹಾಕಿ ಸಿನಿಮಾ ನಿರ್ಮಿಸುತ್ತಾರೆ. ಸಹ ಕಲಾವಿದರಿಗೆ ದಿನನಿತ್ಯದ ಸಂಭಾವನೆ ಇದೆ, ಅವರಿಗೆ ಊಟ, ತಿಂಡಿ ಕೊಡುತ್ತಾರೆ, ಪಿಕ್ ಅಪ್ ಮತ್ತು ಡ್ರಾಪ್ ಸೌಲಭ್ಯ ಕೂಡ ಇದೆ. ಸಾರ್ವಜನಿಕ ಸ್ಥಳದಲ್ಲಿ ಚಿತ್ರೀಕರಣ ಮಾಡುತ್ತಿದ್ದಾಗ ಫೋಟೋ ತೆಗೆಯಲು ಬೇಡಾ ಅಂತಾ ಹೇಳುವುದಕ್ಕೆ ಬರುವುದಿಲ್ಲ. ಆದರೆ ಖಾಸಗಿ ಜಾಗದಲ್ಲಿ ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ಚಿತ್ರೀಕರಣ ಮಾಡುತ್ತಿದ್ದಾಗ ಒಬ್ಬ ಜೂನಿಯರ್ ಕಲಾವಿದ ಹೀಗೆ ಮಾಡುವುದು ಸರಿಯಲ್ಲ ಅಂತಾ ತಿಳಿ ಹೇಳಿದೆ. ತಪ್ಪು ಮಾಡಿದರೆ ಕೇಳುವುದೇ ತಪ್ಪಾ ಅಂತಾ ದರ್ಶನ್ ಪ್ರಶ್ನಿಸಿದ್ದಾರೆ.
ಅಷ್ಟೊಂದು ಖರ್ಚು ಮಾಡಿ ಸಿನಿಮಾ ಮಾಡುವಾಗ ಫೋಟೋ ತೆಗೆದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ, ಲೈಕ್, ಕಮೆಂಟ್ಸ್ ತಗೊಂಡರೆ ಚಿತ್ರಮಂದಿರಕ್ಕೆ ಬಂದು ಜನ ಸಿನಿಮಾ ನೋಡುತ್ತಾರಾ? ಇದರಿಂದ ನಿರ್ಮಾಪಕರ ಕಥೆ ಏನಾಗುತ್ತದೆ ಎಂದು ನಟ ದರ್ಶನ್ ಪ್ರಶ್ನಿಸಿದ್ದಾರೆ.
Advertisement