ಇತ್ತೀಚೆಗೆ ಸಿನಿಮಾಗಳಲ್ಲಿ ವಿಭಿನ್ನ ಪಾತ್ರಗಳನ್ನು ಮಾಡುತ್ತಿರುವ ನಟ ಚಿರಂಜೀವಿ ಸರ್ಜಾ ಅವರ ಸಂಹಾರ ಚಿತ್ರ ನಾಳೆ ಬಿಡುಗಡೆಯಾಗುತ್ತಿದ್ದು ಇದೊಂದು ಸವಾಲಿನ ಪಾತ್ರ ಎನ್ನುತ್ತಾರೆ ಅವರು. ಗುರು ದೇಶಪಾಂಡೆ ನಿರ್ದೇಶನದ ಚಿತ್ರದಲ್ಲಿ ಚಿರಂಜೀವಿಯವರದ್ದು ಚಿತ್ರದ ಬಹುತೇಕ ದೃಶ್ಯಗಳಲ್ಲಿ ಕುರುಡನ ಪಾತ್ರ.
ಪಾತ್ರ ಕಷ್ಟವಾಗಿರಲಿಲ್ಲ ಆದರೆ ಒತ್ತಡದಿಂದ ಕೂಡಿತ್ತು ಎನ್ನುತ್ತಾರೆ ಚಿರಂಜೀವಿ ಸರ್ಜಾ. ಸುಮಾರು 45 ನಿಮಿಷಗಳ ಕಾಲ ಕುರುಡನಾಗಿ ನಟಿಸಬೇಕು. ಆರಂಭದಲ್ಲಿ ಕುರುಡನ ಪಾತ್ರ ನಿರ್ವಹಿಸುವುದು ಕಷ್ಟವಾಗಿತ್ತು. ಅಲ್ಲದೆ ಕುರುಡನಾಗಿ ಫೈಟಿಂಗ್ ಸನ್ನಿವೇಶಗಳಲ್ಲಿ ಕೂಡ ನಟಿಸುವುದು ಸವಾಲಿನ ವಿಷಯವಾಗಿತ್ತು.
ಅಂಗವೈಕಲ್ಯತೆಯಲ್ಲಿ ಅದರದ್ದೇ ಆದ ಶಕ್ತಿ ಮತ್ತು ನ್ಯೂನತೆಗಳಿರುತ್ತವೆ. ಚಿತ್ರದಲ್ಲಿ ನಾನು ಖ್ಯಾತ ಬಾಣಸಿಗನಾಗಿದ್ದು ಕುರುಡನಾಗಿರುತ್ತೇನೆ. ನನಗೆ ಮತ್ತೆ ದೃಷ್ಟಿ ಬಂದಾಗ ನನ್ನ ಸುತ್ತಮುತ್ತಲೆಲ್ಲಾ ಹಲವು ನೆಗೆಟಿವ್ ಅಂಶಗಳು ಕಾಣಿಸುತ್ತವೆ. ಪ್ರತಿ ವ್ಯಕ್ತಿಯ ಗ್ರಹಿಕೆ ವಿಭಿನ್ನವಾಗಿರುತ್ತದೆ. ನಮ್ಮ ಸುತ್ತಮುತ್ತಲಿನ ವಿಷಯಗಳನ್ನು ನಾವು ಹೇಗೆ ಗ್ರಹಿಸುತ್ತೇವೆ ಎನ್ನುವುದರ ಮೇಲೆ ನಮ್ಮ ಶಕ್ತಿ ಮತ್ತು ದೌರ್ಬಲ್ಯಗಳು ನಿಂತಿರುತ್ತವೆ ಎನ್ನುತ್ತಾರೆ ಚಿರು ಸರ್ಜಾ.
ಸಂಹಾರ ಚಿತ್ರದ ಕಥೆ ತುಂಬಾ ವಿಭಿನ್ನವಾಗಿದ್ದರಿಂದ ನಾನು ಈ ಕಥೆಯನ್ನು ಒಪ್ಪಿಕೊಂಡೆ. ಚಿತ್ರದಲ್ಲಿ ತುಂಬಾ ಕಾತರತೆ, ಸಸ್ಪೆನ್ಸ್, ಕಾಮಿಡಿ, ರೊಮ್ಯಾನ್ಸ್ ಮತ್ತು ಆಕ್ಷನ್ ಮತ್ತು ಹಲವು ತಿರುವುಗಳು ಚಿತ್ರದಲ್ಲಿವೆ. ಚಿತ್ರಕಥೆ ಬರೆದವರನ್ನು ಇಲ್ಲಿ ಪ್ರಶಂಸಿಸಲೇ ಬೇಕು ಎನ್ನುತ್ತಾರೆ ಚಿರು.
ಚಿಕ್ಕಣ್ಣ, ಹರಿಪ್ರಿಯಾ ಮತ್ತು ಕಾವ್ಯ ಶೆಟ್ಟಿ ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಚಿರಂಜೀವಿ ಸರ್ಜಾ ಅವರು ಪ್ರೇಮ ಬರಹ ಚಿತ್ರದಲ್ಲಿ ಅತಿಥಿ ಪಾತ್ರ ನಿರ್ವಹಿಸಿದ್ದಾರೆ. ನಮ್ಮ ಮಾವನ ಪ್ರೇಮ ಬರಹ ಮತ್ತು ಸಂಹಾರ ಒಂದೇ ದಿನ ಬಿಡುಗಡೆಯಾಗುತ್ತಿರುವುದರಿಂದ ಇದು ನಮ್ಮ ಅಭಿಮಾನಿಗಳಿಗೆ ಡಬಲ್ ಉಡುಗೊರೆ ಎಂದರು ಚಿರಂಜೀವಿ ಸರ್ಜಾ.