ರಾಜ್ ಕುಮಾರ್ ಅವರ ಚಿತ್ರಗಳು ವಿವಿ ಡಿಗ್ರಿಗಳಿಗೆ ಸಮ: ಆರ್ ಚಂದ್ರು

ಆರ್. ಚಂದ್ರು ನಿರ್ದೇಶನದ ದುನಿಯಾ ವಿಜಯ್ ನಟನೆಯ ಕನಕ ಚಿತ್ರ ನಾಳೆ....
ದುನಿಯಾ ವಿಜಯ್-ಆರ್.ಚಂದ್ರು
ದುನಿಯಾ ವಿಜಯ್-ಆರ್.ಚಂದ್ರು
ಆರ್. ಚಂದ್ರು ನಿರ್ದೇಶನದ ದುನಿಯಾ ವಿಜಯ್ ನಟನೆಯ ಕನಕ ಚಿತ್ರ ನಾಳೆ ಬಿಡುಗಡೆಯಾಗುತ್ತಿದೆ. ಈ ಸಂದರ್ಭದಲ್ಲಿ ಚಿತ್ರದ ಅಡಿಬರಹ ವಿಶೇಷವಾಗಿ ಗಮನ ಸೆಳೆಯುತ್ತಿದೆ. ಚಿತ್ರದಲ್ಲಿ ದುನಿಯಾ ವಿಜಯ್ ರಾಜ್ ಕುಮಾರ್ ಅವರ ಬಹುದೊಡ್ಡ ಅಭಿಮಾನಿಯಾಗಿರುವುದರಿಂದ ಅಣ್ಣಾವ್ರ ಅಭಿಮಾನಿ ಎಂಬ ಅಡಿಬರಹ ನೀಡಲಾಗಿದೆ. 
ರಾಜ್ ಕುಮಾರ್ ಅವರ ಒಳ್ಳೆಯತನವನ್ನು ಚಿತ್ರದಲ್ಲಿ ಆಟೋ ಚಾಲಕನ ಪಾತ್ರ ನಿರ್ವಹಿಸಿರುವ ದುನಿಯಾ ವಿಜಯ್ ಮೂಲಕ ಹೇಗೆ ಕೊಂಡೊಯ್ಯಲಾಗಿದೆ ಎಂಬುದನ್ನು ಸಿಟಿ ಎಕ್ಸ್ ಪ್ರೆಸ್ ಗೆ ವಿವರಿಸಿದ್ದಾರೆ. 
ರಾಜ್ ಕುಮಾರ್ ಅವರನ್ನು ಒಮ್ಮೆ ಮಾತ್ರ ಭೇಟಿ ಮಾಡಿರುವ ನಿರ್ದೇಶಕ ಆರ್. ಚಂದ್ರು ಹೇಳುವುದಿಷ್ಟು: ರಾಜ್ ಕುಮಾರ್ ಅವರ ಒಡನಾಡಿಗಳಾಗಿದ್ದವರ ಜೊತೆ ಕಳೆದ 40 ವರ್ಷಗಳಿಂದ ಬೆರೆತಿದ್ದು, ಅವರೊಂದಿಗೆ ಮಾತನಾಡಿದ್ದು, ಒಡನಾಟದಿಂದ ಕನ್ನಡ ಚಿತ್ರರಂಗದ ದಂತಕಥೆ ರಾಜ್ ಕುಮಾರ್ ಅವರ ಬಗ್ಗೆ ಬಹಳಷ್ಟು ತಿಳಿದುಕೊಳ್ಳಲು ಸಾಧ್ಯವಾಯಿತು. ಅವರ ಸರಳತೆ, ಸಂಬಂಧಗಳನ್ನು ಅವರು ಗೌರವಿಸುತ್ತಿದ್ದುದು, ತೆರೆಯ ಹಿಂದೆ ಮತ್ತು ಮುಂದೆ ಅನೇಕರ ಪಾಲಿಗೆ ರಾಜ್ ಕುಮಾರ್ ಹೇಗೆ ಸ್ಫೂರ್ತಿಯಾಗಿದ್ದರು ಎಂಬುದನ್ನು ಅವರನ್ನು ಹತ್ತಿರದಿಂದ ಬಲ್ಲವರಿಂದ ತಿಳಿದುಕೊಂಡೆ. ಇದನ್ನು ನಾನಿಲ್ಲಿ ಕಥೆಯಾಗಿ ಹೆಣೆದಿದ್ದೇನೆ. ಇನ್ನೊಂದು ಮುಖ್ಯ ವಿಚಾರವೆಂದರೆ ಇಂದಿನ ತಲೆಮಾರಿನವರಿಗೆ ರಾಜ್ ಕುಮಾರ್ ಅವರ ಬಗ್ಗೆ ತಿಳಿಸಿಕೊಡುವುದು ನನ್ನ ಮತ್ತೊಂದು ಉದ್ದೇಶವಾಗಿದೆ ಎನ್ನುತ್ತಾರೆ.
ರಾಜ್ ಕುಮಾರ್ ಅವರ ಚಿತ್ರಗಳೆಂದರೆ ವಿಶ್ವವಿದ್ಯಾಲಯದ ಪದವಿಗೆ ಸಮಾನ. ಅವರ ಚಿತ್ರದ ಮೂಲಕ ನಾವು ಜೀವನದ ಪಾಠಗಳನ್ನು ಕಲಿತುಕೊಳ್ಳಬಹುದು. ರಾಜ್ ಕುಮಾರ್ ಅವರ ಒಂದು ಚಿತ್ರವನ್ನು ನೋಡಲು ಎರಡೂವರೆ ಗಂಟೆ ಕಳೆಯುವುದು ವಿಶ್ವವಿದ್ಯಾಲಯದಲ್ಲಿ 5 ವರ್ಷ ಡಿಗ್ರಿ ಕಲಿಯಲು ಕಳೆಯುವ ಸಮಯಗಳಿಗೆ ಸಮ ಎಂದು ಭಾವಿಸುತ್ತೇನೆ ಎನ್ನುತ್ತಾರೆ ಚಂದ್ರು.
ಕನಕ ಚಿತ್ರದಲ್ಲಿ ಮಾನ್ವಿತಾ ಹರೀಶ್ ಮತ್ತು ಹರಿಪ್ರಿಯಾ ನಾಯಕಿಯರಾಗಿದ್ದಾರೆ. ನವೀನ್ ಸಜ್ಜು ಅವರ ಸಂಗೀತ, ಸತ್ಯ ಹೆಗ್ಡೆಯವರ ಛಾಯಾಗ್ರಹಣ ಚಿತ್ರಕ್ಕಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com