ಲೆಕ್ಕದ ಹಾಡು ಬರೆದಿದ್ದ ಸಾಹಿತಿ ಎಂ.ಎಸ್. ವ್ಯಾಸರಾವ್ ನಿಧನ

ಸಾಹಿತಿ, ಗೀತರಚನೆಗಾರ, ಕಾದಂಬರಿಗಾರರಾಗಿ ಪ್ರಸಿದ್ದರಾಗಿದ್ದ ಎಂ.ಎಸ್. ವ್ಯಾಸರಾವ್(73) ಭಾನುವಾರ ಬೆಳಿಗ್ಗೆ ಬೆಂಗಳೂರಿನಲ್ಲಿ ನಿಧನರಾದರು.
ಎಂ.ಎಸ್. ವ್ಯಾಸರಾವ್
ಎಂ.ಎಸ್. ವ್ಯಾಸರಾವ್
Updated on
ಬೆಂಗಳೂರು: ಸಾಹಿತಿ, ಗೀತರಚನೆಗಾರ, ಕಾದಂಬರಿಗಾರರಾಗಿ ಪ್ರಸಿದ್ದರಾಗಿದ್ದ ಎಂ.ಎಸ್. ವ್ಯಾಸರಾವ್(73) ಭಾನುವಾರ ಬೆಳಿಗ್ಗೆ ಬೆಂಗಳೂರಿನಲ್ಲಿ ನಿಧನರಾದರು.
ಬೆಂಗಳೂರಿನ ತಮ್ಮ ನಿವಾಸದಲ್ಲಿ ನಿಧನರಾದ ವ್ಯಾಸರಾವ್ ಕೆಲ ದಿನಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು.
ಹಿರಿಯ ಸಾಹಿತಿಯ ನಿಧನಕ್ಕೆ ಸಾಹಿತ್ಯ ಪ್ರೇಮಿಗಳು, ಚಿತ್ರರಂಗದ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
ಜನವರಿ 27, 1945ರಂದು ಮೈಸೂರಿನಲ್ಲಿ ಜನಿಸಿದ ವ್ಯಾಸರಾವ್ ತಂದೆ ನರಸಿಂಗರಾವ್, ತಾಯಿ ಸುಶೀಲಮ್ಮ.. ಬೆಂಗಳೂರು ವಿಶ್ವವಿದ್ಯಾಲಯದ ಬಿ.ಎ. ಪದವಿ. ಡ್ರಾಮ್ಯಾಟಿಕ್ಸ್‌ನಲ್ಲಿ ಡಿಪ್ಲೊಮ. ಮಾಡಿದ್ದ ಇವರು ಬೆಂಗಳೂರು- ಯುನೈಟೆಡ್ ಕಮರ್ಶಿಯಲ್ ಬ್ಯಾಂಕ್.ನಲ್ಲಿ ೩೪ ವರ್ಷ ಸೇವೆ ಸಲ್ಲಿಸಿ ಸ್ವಯಂ ನಿವೃತ್ತರಾಗಿದ್ದರು.
ಬೆಳ್ಳಿ ಮೂಡುವ ಮುನ್ನ (ಕವನ ಸಂಕಲನ),  ಮಳೆಯಲ್ಲಿ ನೆನೆದ ಮರಗಳು (ಕಥಾ ಸಂಗ್ರಹ), ಉತ್ತರ ಮುಖಿ-ಮೂರು ನೀಳ್ಗತೆಗಳ ಸಂಕಲನ. ಸ್ಕಾಟ್ ಡಬಲ್ ಎಕ್ಸ್, ಅಖಲಾ ಮೈ ಡಾರ್ಲಿಂಗ್ ಮುಂತಾದ ಪತ್ತೇದಾರಿ ಕಾದಂಬರಿಗಳು. ನಿರೋಷ, ನದಿಮೂಲ ಮೊದಲಾದ ಸೃಜನಶೀಲ ಕಾದಂಬರಿ. ನಾಟಕ-ಕತ್ತಲಲ್ಲಿ  ಬಂದವರು ಮೊದಲಾದವು ಪ್ರಕಟಿತ ಕೃತಿಗಳು. ಇವರ ಅನೇಕ ಕಥೆಗಳು  ತೆಲುಗು, ಹಿಂದಿ, ಬಂಗಾಳಿ, ಸಿಂಧಿ, ಇಂಗ್ಲಿಷ್‌ಗೆ ಭಾಷಾಂತರಗೊಂಡಿವೆ
ಚಿತ್ರಗೀತೆ, ಧಾರಾವಾಹಿಗಳ ಶೀರ್ಷಿಕೆ ಗೀತೆಗಳನ್ನು ರಚಿಸಿ ಪ್ರಸಿದ್ದರಾಗಿದ್ದ ವ್ಯಾಸರಾವ್ ಪುಟ್ಟಣ್ಣ ಕಣಗಾಲರ ’ಶುಭಮಂಗಳ’ ಚಿತ್ರದ "ನಾಲ್ಕೊಂದ್ಲ ನಾಕು.." ಹಾಡಿನಿಂದ ಮನೆಮಾತಾಗಿದ್ದರು. ಅಲ್ಲದೆ ಅದೇ ಚಿತ್ರದ "ಸೂರ್ಯಂಗೂ ಚಂದ್ರಂಗೂ ಬಂದಾರೆ ಮುನಿಸು" ಹಾಡು ಸಹ ಅತ್ಯಂತ ಜನಪ್ರಿಯವಾಗಿತ್ತು. ಇವರು 15 ಕ್ಕೂ ಹೆಚ್ಚು ಕ್ಯಾಸೆಟ್‌ಗಳಿಗೆ ಗೀತೆಗಳು, 35 ಕ್ಕೂ ಹೆಚ್ಚು  ಜನಪ್ರಿಯ ಧಾರಾವಾಹಿಗಳಿಗೆ ಸಾಹಿತ್ಯ ನೀಡಿದ್ದರು. 
ಸುಧಾ ಪತ್ರಿಕೆಯಲ್ಲಿ ಕೆ.ಎಸ್. ಅಶ್ವತ್ಥ್‌ರ ಆತ್ಮಕಥನ ನಿರೂಪಣೆ ಮಾಡಿದ್ದ ಇವರು 100 ಚಲನಚಿತ್ರ ಗೀತೆಗಳನ್ನು ರಚಿಸಿದ್ದಾರೆ.
ಇವರ ಸಾಹಿತ್ಯದ ಮೈಸೂರು ಮಲ್ಲಿಗೆ, ಆಸ್ಫೋಟ, ದಂಗೆ ಎದ್ದ ಮಕ್ಕಳು, ವಾತ್ಸಲ್ಯ ಪಥ ಚಿತ್ರಗಳು ವಿವಿಧ ಪ್ರಶಸ್ತಿಗೆ ಭಾಜನವಾಗಿದ್ದವು.
ಎಂ.ಎಸ್. ವ್ಯಾಸರಾವ್ ಸಾಹಿತ್ಯ ಲೋಕಕ್ಕೆ ನೀಡಿದ್ದ ಅನುಪಮ ಸೇವೆಗೆ ಅವರಿಗೆ ಅನೇಕ ಪ್ರಶಸ್ತಿ, ಗೌರವಗಳು ಅಲಭಿಸಿದ್ದವು. ಬರ್ಕಲೀ ತರಂಗಿಣಿ ಪ್ರಶಸ್ತಿ, ಲಾವಣ್ಯ ಪ್ರಶಸ್ತಿ, ಜೇಸೀ ಪ್ರಶಸ್ತಿ, ಸ್ವರಮಂದಾರ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಮಳೆಯಲ್ಲಿ ನೆನೆದ ಮರಗಳು’ ಕಥಾ ಸಂಕಲನಕ್ಕೆ ಸಾಹಿತ್ಯ ಅಕಾಡಮಿ ಬಹುಮಾನ. ಸಾಹಿತ್ಯ ಸಮ್ಮೇಳನ, ದಸರಾ ಕವಿ ಸಮ್ಮೇಳನ,  ಹಲವಾರು ವಿಚಾರ ಸಂಕಿರಣಗಳಲ್ಲಿ ಭಾಗಿಯಾಗಿದ್ದರು.೦೧೧ರಲ್ಲಿ ಯಳಂದೂರಿನಲ್ಲಿ ನಡೆದ ಯಳಂದೂರು ತಾಲೂಕು ಸಾಹಿತ್ಯ ಸಮ್ಮೇಳನದ ಆಧ್ಯಕ್ಷತೆಯ ಗೌರವ ಇವರದಾಗಿತ್ತು.
ಕುಮಾರಸ್ವಾಮಿ ಸಂತಾಪ
ಗೀತರಚನೆಗಾರ, ಸಾಹಿತಿ ವ್ಯಾಸರಾವ್ ನಿಧನಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಸಂತಾಪ ಸೂಚಿಸಿದ್ದಾರೆ. "ಕವಿ, ಚಿತ್ರ ಸಾಹಿತಿ ಎಂ. ಎನ್. ವ್ಯಾಸರಾವ್ ಅವರ ನಿಧನಕ್ಕೆ ನನ್ನ ಸಂತಾಪಗಳು.  ಬ್ಯಾಂಕಿಂಗ್ ವೃತ್ತಿಯಲ್ಲಿದ್ದರೂ ಕವಿ, ಚಿತ್ರ ಸಾಹಿತಿಯಾಗಿ ಪ್ರಸಿದ್ಧಿ ಪಡೆದ ವ್ಯಾಸರಾವ್ ಅವರು ಪುಟ್ಟಣ್ಣ ಕಣಗಾಲರ ಚಿತ್ರಗಳಿಗೆ ಬರೆದ ಗೀತೆಗಳು, ಅವರು ರಚಿಸಿದ ಭಾವಗೀತೆಗಳು ಜನಮಾನಸದಲ್ಲಿ ಸದಾ ಹಸಿರಾಗಿರುತ್ತವೆ. ಅವರ ಆತ್ಮಕ್ಕೆ ಭಗವಂತ ಶಾಂತಿ ನೀಡಲಿ." ಎಂದು ಅವರು ಟ್ವೀಟ್ ಮಾಡಿದ್ದಾರೆ.
ಭಾನುವಾರ ಸಂಜೆ 4ಗಂಟೆಗೆ ಕಿಮ್ಸ್ ಆವರಣದಲ್ಲಿ ಮೃತರ ಪಾರ್ಥಿವ ಶರೀರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com