'ನಾಗರಹಾವು' ಹೊಸ ಅವತಾರದಲ್ಲಿ ಮತ್ತೊಮ್ಮೆ ಕನ್ನಡಿಗರ ಮುಂದೆ

70ರ ದಶಕದ ಯಶಸ್ವಿ ಚಿತ್ರ ನಾಗರಹಾವಿನಲ್ಲಿ ರಾಮಚಾರಿಯಾಗಿ ವಿಷ್ಣುವರ್ಧನ್ ಪಾತ್ರ ಅಥವಾ ಅಂಬರೀಷ್ ಅವರ ಏ ಬುಲ್ ಬುಲ್ ....
ನಾಗರಹಾವು ಚಿತ್ರದಲ್ಲಿ ಡಾ ವಿಷ್ಣುವರ್ಧನ್
ನಾಗರಹಾವು ಚಿತ್ರದಲ್ಲಿ ಡಾ ವಿಷ್ಣುವರ್ಧನ್

70ರ ದಶಕದ ಯಶಸ್ವಿ ಚಿತ್ರ ನಾಗರಹಾವಿನಲ್ಲಿ ರಾಮಚಾರಿಯಾಗಿ ವಿಷ್ಣುವರ್ಧನ್ ಪಾತ್ರ ಅಥವಾ ಅಂಬರೀಷ್ ಅವರ ಏ ಬುಲ್ ಬುಲ್ ಮಾತಾಡಕ್ಕಿಲ್ವಾ ಸಂಭಾಷಣೆಯನ್ನು ಮತ್ತೊಮ್ಮೆ ಬೆಳ್ಳಿಪರದೆ ಮೇಲೆ ನೋಡಲು ಸಿಕ್ಕರೆ ಹೇಗೆ? ಹೌದು ಸಿನಿ ಪ್ರಿಯರಿಗೆ ಇಂತಹದ್ದೊಂದು ಅವಕಾಶ ಮತ್ತೊಮ್ಮೆ ಒದಗಿಬಂದಿದೆ. ನಾಗರಹಾವು ಚಿತ್ರ ಹೊಸ ಅವತಾರದಲ್ಲಿ ಮತ್ತೆ ಮೂಡಿಬರಲಿದೆ.

ಅದನ್ನು ಸಾಧ್ಯವಾಗಿಸುತ್ತಿರುವುದು ಈಶ್ವರಿ ಪ್ರೊಡಕ್ಷನ್ ಸಂಸ್ಥೆ. ಎನ್ ವೀರಸ್ವಾಮಿಯವರು ಹುಟ್ಟುಹಾಕಿದ್ದ ಈ ನಿರ್ಮಾಣ ಸಂಸ್ಥೆಯನ್ನು ಇಂದು ಅವರ ಮಕ್ಕಳಾದ ವಿ ರವಿಚಂದ್ರನ್ ಮತ್ತು ಬಾಲಾಜಿ ನಡೆಸಿಕೊಂಡು ಹೋಗುತ್ತಿದ್ದಾರೆ. ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರು ಅಂದು 35ಎಂಎಂನಲ್ಲಿ ಬಿಡುಗಡೆಗೊಳಿಸಿದ್ದ ಚಿತ್ರವನ್ನು ಇಂದು ಸಿನಿಮಾಸ್ಕೋಪ್ ಸಿದ್ಧಪಡಿಸುತ್ತಿದೆ. ಅದನ್ನು ದೊಡ್ಡ ಮಟ್ಟದಲ್ಲಿ ಅತ್ಯಾಧುನಿಕ ತಂತ್ರಜ್ಞಾನದಲ್ಲಿ ಬೃಹತ್ ಪರದೆ ಮೇಲೆ ಮೂಡಿಸಲು ಮುಂದಾಗಿದೆ.

ದೊಡ್ಡ ಪರದೆ ಮೇಲೆ ತರಲು ಎಷ್ಟು ಖರ್ಚಾಗುತ್ತಿದೆ ಎಂಬ ಬಗ್ಗೆ ಲೆಕ್ಕ ಹೇಳಲು ಇಚ್ಛಿಸದ ಬಾಲಾಜಿ ಅವರು, ಅಧಿಕ ವೆಚ್ಚವಾಗುವುದಂತೂ ಖಂಡಿತ. ಜೀವನದಲ್ಲಿ ಕೆಲವು ಮೌಲ್ಯ ಕಟ್ಟಲಾಗದ ವಿಷಯಗಳಿರುತ್ತವೆ. ಈ ಚಿತ್ರದ ಬಗ್ಗೆ ಖರ್ಚು ಲೆಕ್ಕ ಹಾಕಲು ನಾನು ಇಷ್ಟಪಡುವುದಿಲ್ಲ. ಇದಕ್ಕೆ ಪ್ರೇರಣೆ ಡಾ ರಾಜ್ ಕುಮಾರ್ ಅವರ ಕಸ್ತೂರಿ ನಿವಾಸ ಚಿತ್ರವನ್ನು ಹೆಚ್ಚು ಬಣ್ಣವಾಗಿ ಮತ್ತು ವಿಜೃಂಭಣೆಯಿಂದ ತೆರೆ ಮೇಲೆ ಮತ್ತೆ ತೋರಿಸಿದ್ದು ಎಂದು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.

ನಾಗರಹಾವು ಚಿತ್ರವನ್ನೇ ಏಕೆ ಆಯ್ಕೆ ಮಾಡಿಕೊಂಡಿರಿ ಎಂದು ಕೇಳಿದ್ದಕ್ಕೆ, ಈ ಚಿತ್ರ 70ರ ದಶಕದಲ್ಲಿ ತಯಾರಾದರೂ ಸಹ ಅದರಲ್ಲಿರುವ ವಿಷಯ ಮತ್ತು ಅದನ್ನು ತಯಾರಿಸಿದ ರೀತಿ ಇಂದಿನ ತಲೆಮಾರಿಗೆ ಕೂಡ ಪ್ರಸ್ತುತವಾಗುತ್ತದೆ. ಇದರಲ್ಲಿ ಗಟ್ಟಿಯಾದ ಕಥೆ, ಮನಮುಟ್ಟುವ ಭಾವನೆಗಳಿದ್ದು ಅದು ಇಂದಿಗೆ ಕೂಡ ಪ್ರಸ್ತುತವಾಗಿರುತ್ತದೆ. ಪುಟ್ಟಣ್ಣ ಕಣಗಾಲ್ ಅವರು ತಯಾರಿಸಿದ ಚಿತ್ರದಲ್ಲಿ ವಿಷ್ಣುವರ್ಧನ್ ಕೋಪಿಷ್ಠ ಯುವಕನ ಪಾತ್ರದಲ್ಲಿ ಮಿಂಚಿದ್ದು ಅದ್ಭುತವಾಗಿತ್ತು. ದಕ್ಷಿಣ ಭಾರತೀಯ ಚಿತ್ರರಂಗದಲ್ಲಿಯೇ ಈ ಪ್ರಯತ್ನ ಅಂದು ಮೊದಲನೆಯದಾಗಿತ್ತು. ಈ ಚಿತ್ರವನ್ನು ಎಷ್ಟು ಬಾರಿ ಕುಳಿತು ನೋಡಿದರೂ ಸಹ ಬೇಜಾರು ಎನಿಸುವುದಿಲ್ಲ. ಹೊಸ ದೃಶ್ಯಗಳು ಮತ್ತು ಧ್ವನಿಗಳನ್ನು ಜನರು ಖಂಡಿತಾ ಇಷ್ಟಪಡುತ್ತಾರೆ ಎಂಬ ನಂಬಿಕೆಯಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com