ಆಸ್ಕರ್ 2018: ಬಂದೂಕು ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಲು ಕಿತ್ತಳೆ ಬಣ್ಣದ ಪಿನ್ ಧರಿಸಿದ ಸೆಲೆಬ್ರಿಟಿಗಳು
ನ್ಯೂಯಾರ್ಕ್; ಈ ವರ್ಷದ 90ನೇ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ #Metoo ಮತ್ತು Time'sup ನಂತಹ ಅಭಿಯಾನ ಕಾರ್ಯಕ್ರಮದ ಪ್ರಮುಖ ಅಂಶಗಳಾಗಿದ್ದವು. ಹಲವು ನಟ, ನಟಿಯರು ಬಂದೂಕು ಸುರಕ್ಷತೆಯನ್ನು ಪ್ರತಿಪಾದಿಸಲು ರೆಡ್ ಕಾರ್ಪೆಟ್ ನಲ್ಲಿ ಕಿತ್ತಳೆ ಬಣ್ಣದ ಪಿನ್ ಗಳನ್ನು ಧರಿಸಿ ಆಗಮಿಸಿದ್ದರು.
ಬಂದೂಕು ಸುರಕ್ಷತೆ ಬಗ್ಗೆ ಅರಿವು ಮೂಡಿಸಲು ಕಿತ್ತಳೆ ಬಣ್ಣದ ಪಿನ್ ಗಳನ್ನು ಹಾಕಿಕೊಂಡಿದ್ದರು ಎಂದು ಪೀಪಲ್.ಕಾಂ ವರದಿ ಮಾಡಿದೆ.
ಅಮೆರಿಕಾದ ಫ್ಲೋರಿಡಾದ ಶಾಲೆಯೊಂದರಲ್ಲಿ ಶೂಟ್ ನಡೆದು 17 ಮಂದಿ ವಿದ್ಯಾರ್ಥಿಗಳು ಮೃತಪಟ್ಟ ಕೆಲವು ವಾರಗಳ ನಂತರ ಈ ಅರಿವು ಅಭಿಯಾನ ಆರಂಭಿಸಲಾಯಿತು. ಕಳೆದ ಫೆಬ್ರವರಿ 14ರಂದು ಹಲವು ಸೆಲೆಬ್ರಿಟಿಗಳು ನಮ್ಮ ಜೀವನಕ್ಕೆ ಪಾದಯಾತ್ರೆ ಅಭಿಯಾನವನ್ನು ಆರಂಭಿಸಿದ್ದರು.
ಕಳೆದ ವರ್ಷ ರಾಷ್ಟ್ರೀಯ ಬಂದೂಕು ಹಿಂಸಾಚಾರ ಜಾಗೃತಿ ದಿನದಂದು ಕೆಲವು ಸೆಲೆಬ್ರಿಟಿಗಳು ಕಿತ್ತಳೆ ಬಣ್ಣದ ಪಿನ್ ಧರಿಸಿ ಸಾಮಾಜಿಕ ಜಾಲತಾಣದಲ್ಲಿ ಬಂದೂಕು ಹಿಂಸಾಚಾರ ವಿರುದ್ಧ ಅಭಿಯಾನ ಆರಂಭಿಸಿದ್ದರು.
ಈ ಬಾರಿಯ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಲವು ಗಣ್ಯರು ಟೈಮ್ಸ್ ಅಪ್ ಅಭಿಯಾನಕ್ಕೆ ಬೆಂಬಲ ಸೂಚಿಸಿ ಕಪ್ಪು ಬಣ್ಣದ ಧಿರಿಸು ಧರಿಸಿದ್ದರು.

